ರನ್ ಶಿಖರದ ಮೇಲೆ ವಿರಾಟ್ ಪಡೆಗೆ ವಿಜಯ

0
5

ಲಂಡನ್:

ಆರಂಭಿಕ ಶಿಖರ್ ಧವನ್ ಭರ್ಜರಿ ಶತಕ ಹಾಗೂ ವೇಗಿಗಳ ಬಿಗುವಿನ ದಾಳಿಯ ಪರಿಣಾಮ ಭಾರತ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 36 ರನ್ ಗಳಿಂದ ಮಣಿಸಿ, ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿತು.

ಮೊದಲು ಬ್ಯಾಟ್ ಮಾಡಿದ ವಿರಾಟ್ ಪಡೆ 50 ಓವರ್ ಗಳಲ್ಲಿ 5 ವಿಕೆಟ್ ಗೆ 352 ರನ್ ಕಲೆ ಹಾಕಿತು. ಆಸೀಸ್ 50 ಓವರ್ ಗಳಲ್ಲಿ 316 ರನ್ ಗಳಿಗೆ ಸರ್ವಪತನ ಹೊಂದಿತು.
ಸವಾಲಿನ ಮೊತ್ತ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡದ ಆರಂಭ ಸಾಧಾರಣ ವಾಗಿತ್ತು. ಆರಂಭಿಕ ಡೇವಿಡ್ ವಾರ್ನರ್ ಹಾಗೂ ಏರಾನ್ ಫಿಂಚ್ (36) ತಂಡಕ್ಕೆ 61 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. 13.1 ಓವರ್ ನಲ್ಲಿ ಇಲ್ಲದ ರನ್ ಕದಿಯಲು ಹೋಗಿ ಫಿಂಚ್ ಔಟಾದರು.


ಭರ್ಜರಿ ಲಯದಲ್ಲಿರುವ ಡೇವಿಡ್ ವಾರ್ನರ್, ತಮ್ಮ ಆಟಕ್ಕಿಂತ ಕೊಂಚ ಭಿನ್ನವಾದ ಆಟವಾಡಿದರು. ಇವರು 84 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 56 ರನ್ ಬಾರಿಸಿ ಯಜುವೇಂದ್ರ ಚಹಾಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್ ಗೆ ವಾರ್ನರ್ ಹಾಗೂ ಸ್ಮಿತ್ ಜೋಡಿ 72 ರನ್ ಕಾಣಿಕೆ ನೀಡಿದರು.
ಮೂರನೇ ವಿಕೆಟ್ ಗೆ ಸ್ಮಿತ್ ಹಾಗೂ ಉಸ್ಮಾನ್ ಖವಾಜ ತಂಡಕ್ಕೆ ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಈ ಜೋಡಿ 69 ರನ್ ಸೇರಿಸಿ ತಂಡಕ್ಕೆ ನೆರವಾಯಿತು. ಖವಾಜ 39 ಎಸೆತಗಳಲ್ಲಿ 42 ರನ್ ಬಾರಿಸಿ ಬೂಮ್ರಾಗೆ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಸ್ಮಿತ್ ಜೊತೆಗೆ ಯಾವಬ್ಬ ಬ್ಯಾಟ್ಸ್ ಮನ್ ಉತ್ತಮ ಸಾಥ್ ನೀಡಲಿಲ್ಲ. ಸ್ಮಿತ್ 70 ಎಸೆತಗಳಲ್ಲಿ 69 ರನ್ ಬಾರಿಸಿ ಅಬ್ಬರಿಸಿದರು. ವಿಕೆಟ್ ಕೀಪರ್ ಅಲೆಕ್ಸ್ ಕರಿ 35 ಎಸೆತಗಳಲ್ಲಿ 55 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು.
ಭಾರತದ ಪರ ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರಿತ್ ಬೂಮ್ರಾ ತಲಾ ಮೂರು ವಿಕೆಟ್ ಪಡೆದು ಬೀಗಿತು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಆರಂಭ ನೀಡಿದರು. ಈ ಜೋಡಿ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿತು. ಕಳೆದ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಆಸೀಸ್ ವಿರುದ್ಧ ನೈಜ ಆಟವಾಡಿದರು. ಎದುರಾಳಿ ಬೌಲರ್ ಗಳು ಎಸೆದ ಅಸ್ತ್ರಕ್ಕೆ, ತಮ್ಮ ಬತ್ತಳಿಕೆಯಲ್ಲಿನ ಬ್ರಹ್ಮಾಸ್ತ್ರ ಪ್ರಯೋಗಿಸಿ ಉತ್ತರ ನೀಡಿದರು.

ಆರಂಭದಲ್ಲಿ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಜೋಡಿ ಕೊನೆಗೆ ಅಬ್ಬರಿಸಿತು. 22.3 ಓವರ್ ಗಳಲ್ಲಿ ರೋಹಿತ್-ಶಿಖರ್ ಮೊದಲ ವಿಕೆಟ್ ಗೆ 127 ರನ್ ಕಾಣಿಕೆ ನೀಡಿದರು. ನಾತೇನ್ ಕೌಲ್ಟರ್ ನೈಲ್ ಅವರ ತಪ್ಪಾಗಿ ಗುರುತಿಸಿದ ರೋಹಿತ್ 57 ರನ್ ಗಳಿಗೆ ಆಟ ಮುಗಿಸಿದರು. ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರು ಸತತ ಎರಡನೇ ಬಾರಿಗೆ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಬಾರಿಸಿದರು.

ರೋಹಿತ್ ಔಟ್ ಆಗುತ್ತಿದ್ದಂತೆ ತಂಡದ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡ ಶಿಖರ್ ಆಕ್ರಮಣ ಮುಂದುವರೆಸಿದರು. 109 ಎಸೆತಗಳಲ್ಲಿ 117 ರನ್ ಬಾರಿಸಿದ ಧವನ್ ಅಬ್ಬರಿಸಿದರು. ಇವರ ಇನ್ನಿಂಗ್ಸ್ ನಲ್ಲಿ 16 ಬೌಂಡರಿ ಸೇರಿವೆ. ಎರಡನೇ ವಿಕೆಟ್ ಗೆ ವಿರಾಟ್ ಹಾಗೂ ಶಿಖರ್ 93 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು.

ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದು ಬ್ಯಾಟಿಂಗ್ ಬಂದ ಹಾರ್ದಿಕ್ ಪಾಂಡ್ಯ, ವಿರಾಟ್ ಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ 53 ಎಸೆತಗಳಲ್ಲಿ 81 ರನ್ ಬಾರಿಸಿತು. ಪಾಂಡ್ಯ ಸ್ಪೋಟಕ ಬ್ಯಾಟಿಂಗ್ ನಡೆಸಿದರು. 27 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ 48 ರನ್ ಬಾರಿಸಿ ಔಟ್ ಆದರು.

ವಿರಾಟ್ ಕೊಹ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿದರು. ಮೊದಲ ಪಂದ್ಯದಲ್ಲಿ ಅನುವಿಸಿದ್ದ ರನ್ ಬರವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ವಿರಾಟ್, ತಂಡಕ್ಕೆ ಆಸರೆ ಆದರು. ವಿರಾಟ್ 77 ಎಸೆತಗಳಲ್ಲಿ, 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 82 ರನ್ ಬಾರಿಸಿ ಔಟಾದರು.

ಮಹೇಂದ್ರ ಸಿಂಗ್ ಧೋನಿ 27 ಕೆ.ಎಲ್ ರಾಹುಲ್ ಅಜೇಯ 11 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.

ಸಂಕ್ಷಿಪ್ತ ಸ್ಕೋರ್

ಭಾರತ 50 ಓವರ್ ಗಳಲ್ಲಿ 5 ವಿಕೆಟ್ ಗೆ 352

(ರೋಹಿತ್ ಶರ್ಮಾ 57, ಶಿಖರ್ ಧವನ್ 117, ವಿರಾಟ್ ಕೊಹ್ಲಿ 82, ಹಾರ್ದಿಕ್ ಪಾಂಡ್ಯ 48, ಮಾರ್ಕುಸ್ ಸ್ಟೋಯಿನಿಸ್ 62ಕ್ಕೆ 2).
ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 316
(ಡೇವಿಡ್ ವಾರ್ನರ್ 56, ಸ್ಟೀವನ್ ಸ್ಮಿತ್ 69, ಅಲೆಕ್ಸ್ ಕರಿ 55, ಭುವನೇಶ್ವರ್ ಕುಮಾರ್ 50ಕ್ಕೆ 3, ಬೂಮ್ರಾ 61ಕ್ಕೆ 3)