ಪರ್ತ್:
ಆರಂಭಿಕ ಆಘಾತಕ್ಕೆ ಒಳಗಾಗಿದ್ದರೂ ನಾಯಕ ವಿರಾಟ್ ಕೊಹ್ಲಿ(82* ರನ್) ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ(51* ರನ್) ಅವರ ಅಮೋಘ ಅರ್ಧ ಶತಕಗಳ ನೆರವಿನಿಂದ ಭಾರತ ತಂಡ, ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೇತರಿಕೆ ಕಂಡಿದೆ.
ಇಲ್ಲಿನ ಪರ್ತ್ ಕ್ರೀಡಾಂಗಣದಲ್ಲಿ ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತ ಎರಡನೇ ದಿನದ ಮುಕ್ತಾಯಕ್ಕೆ 69 ಓವರ್ ಗಳಿಗೆ 3 ವಿಕೆಟ್ ಕಳೆದುಕೊಂಡು 172 ರನ್ ದಾಖಲಿಸಿದೆ. ಇನ್ನೂ ಆಸೀಸ್ ವಿರುದ್ಧ 154 ರನ್ ಗಳ ಹಿನ್ನಡೆಯಲ್ಲಿದೆ.
ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ತಂಡದ ಮೊತ್ತ 8 ರನ್ ಇರುವಾಗಲೇ ಆರಂಭಿಕರಾದ ಮುರಳಿ ವಿಜಯ್(0) ಹಾಗೂ ಕೆ.ಎಲ್. ರಾಹುಲ್(2) ಕ್ರಮವಾಗಿ ಮಿಚೆಲ್ ಸ್ಟಾರ್ಕ್ ಹಾಗೂ ಜೋಷ್ ಹ್ಯಾಜಲ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ನಾಯಕ ಕೊಹ್ಲಿ ಇಟ್ಟಿದ್ದ ಭರವಸೆಯನ್ನು ಮತ್ತೊಮ್ಮೆ ಈ ಜೋಡಿ ಕೈ ಚೆಲ್ಲಿತು.
ನಂತರ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಲಯಬದ್ಧವಾಗಿ ಎದುರಿಸಿತು. ಯಾವುದೇ ತಪ್ಪು ಹೊಡೆತಗಳಿಗೆ ಮೊರೆ ಹೋಗದೆ ಎಚ್ಚರಿಕೆಯ ಬ್ಯಾಟಿಂಗ್ ಮಾಡಿತು.
ಆದರೆ, ತಂಡದ ಮೊತ್ತ 82 ರನ್ ಇರುವಾಗ ಚೇತೇಶ್ವರ ಪೂಜಾರ(24) ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಪೈನೆಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ಜೋಡಿ ಅತ್ಯುತ್ತಮ ಬ್ಯಾಟಿಂಗ್ ಮಾಡುವಲ್ಲಿ ಸಫಲವಾಯಿತು. ಆಸೀಸ್ ಬೌಲರ್‍ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಕ್ರೀಸ್‍ನಲ್ಲಿ ಹೋದಾಣಿಕೆಯ ಬ್ಯಾಟಿಂಗ್ ಮಾಡಿತು. ಈ ಜೋಡಿ ಮುರಿಯದ 4ನೇ ವಿಕೆಟ್‍ಗೆ 90 ರನ್ ಜತೆಯಾಟವಾಡುವ ಮೂಲಕ ಭಾರತದ ಮೊತ್ತದ ಏರಿಕೆಗೆ ಕಾರಣವಾಯಿತು.
ಶತಕದಂಚಿನಲ್ಲಿ ಕೊಹ್ಲಿ:
ತಂಡದ ಮೊತ್ತ 8 ರನ್ ಇದ್ದಾಗ ಕ್ರೀಸ್‍ಗೆ ಬಂದ ನಾಯಕ ವಿರಾಟ್ ಕೊಹ್ಲಿ ನಿರೀಕ್ಷೆಯಂತೆ ಉತ್ತಮ ಬ್ಯಾಟಿಂಗ್ ಮಾಡಿದರು. ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ಇವರು ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಆಸ್ಟ್ರೇಲಿಯಾ ಬೌಲರ್‍ಗಳಿಗೆ ನೀರಿಳಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಮೊರೆ ಹೋಗದ ಕೊಹ್ಲಿ ಆತ್ಮವಿಶ್ವಾಸದೊಂದಿಗೆ ಎಲ್ಲ ಎಸೆತಗಳನ್ನು ಎದುರಿಸಿದರು. ಇವರು ಆಡಿದ ಒಟ್ಟು 181 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ ಒಟ್ಟು 82 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಕೊಹ್ಲಿ ಟೆಸ್ಟ್ ವೃತ್ತಿ ಜೀವನದ 20ನೇ ಅರ್ಧ ಶತಕ ಇದಾಯಿತು.
ನಾಯಕ ಕೊಹ್ಲಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ ಉಪ ನಾಯಕ ಅಜಿಂಕ್ಯಾ ರಹಾನೆ ಉತ್ತಮ ಬ್ಯಾಟಿಂಗ್ ಮಾಡುವ ಸೊಗಸಾದ ಇನಿಂಗ್ಸ್ ಕಟ್ಟಿದರು. ಎದುರಿಸಿದ 103 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸ್ ಸೇರಿದಂತೆ ಒಟ್ಟು 51 ರನ್ ಗಳಿಸಿ ವೃತ್ತಿ ಜೀವನದ 17ನೇ ಅರ್ಧ ಶತಕ ಗಳಿಸಿದರು.
ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್ ಮಾಡಿದ ಮಿಚೆಲ್ ಸ್ಟಾರ್ಕ್ ಎರಡು ವಿಕೆಟ್ ಪಡೆದರೆ, ಜೋಷ್ ಹ್ಯಾಜಲ್‍ವುಡ್ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ 277 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಎರಡನೇ ದಿನ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಇಶಾಂತ್ ಶರ್ಮಾ(41ಕ್ಕೆ 4) ಅವರ ಮಾರಕ ದಾಳಿಗೆ ಮಧ್ಯಾಹ್ನದ ಉಪಹಾರದ ವೇಳೆಗೆ ಆಲ್ ಔಟ್ ಆಯಿತು. ಇಂದು ಕ್ರೀಸ್‌ನಲ್ಲಿ ಬ್ಯಾಟಿಂಗ್ ಮುಂದುವರಿಸಿದ ನಾಯಕ ಟಿಮ್ ಪೈನೆ 89 ಎಸೆತಗಳಲ್ಲಿ 38 ರನ್ ಗಳಿಸಿದರು. ನಂತರ ಅವರು ಬುಮ್ರಾ ಎಸೆತದಲ್ಲಿ ಚೆಂಡನ್ನು ಪ್ಯಾಡ್ ಮೇಲೆ ಹಾಕಿಕೊಂಡರು.
ಇವರ ಜತೆ ಪ್ಯಾಟ್ ಕಮ್ಮಿನ್ಸ್(19) ಅಲ್ಪ ವೇಳೆ ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ, ಅವರನ್ನು ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದರು. ಸ್ಟಾರ್ಕ್(6) ಹಾಗೂ ಜೋಷ್ ಹ್ಯಾಜಲ್‌ವುಡ್(0) ಅವರನ್ನು ಇಶಾಂತ್ ಶರ್ಮಾ ಪೆವಿಲಿಯನ್‌ಗೆ ಅಟ್ಟಿದರು. ಒಟ್ಟಾರೆ, ಆಸ್ಟ್ರೇಲಿಯಾ ತಂಡ 108.3 ಓವರ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 326 ರನ್ ದಾಖಲಿಸಿತು. ಭಾರತದ ಪರ ಉತ್ತಮ ಬೌಲಿಂಗ್ ಮಾಡಿದ ಇಶಾಂತ್ ಶರ್ಮಾ 41 ರನ್ ನೀಡಿ 4 ವಿಕೆಟ್ ಕಬಳಿಸಿದರು.