ಮೆಲ್ಬೋರ್ನ್:
ವಿರಾಟ್ ಕೊಹ್ಲಿ ಅವರು ತಂಡದ ಆಯ್ಕೆ ಮಾಡುವಲ್ಲಿ ವಿಲರಾಗಿದ್ದಾರೆ, ಅಷ್ಟು ರನ್ ಮುನ್ನಡೆ ಇದ್ದರೂ ಡಿಕ್ಲೇರ್ ಘೋಷಿಸದೆ ಮತ್ತೆ ಬ್ಯಾಟಿಂಗ್ ಮುಂದುವರಿಸಿದರು…
ಇದು ತಪ್ಪು ತೀರ್ಮಾನ… ಕೊನೆಯ ದಿನದಲ್ಲಿ ಮಳೆ ಬಂದು ಪಂದ್ಯ ವಾಷೌಟ್ ಆದರೆ ಏನು ಮಾಡುವುದು? ಎಂದೆಲ್ಲ ಟೀಕೆ.. ಟಿಪ್ಪಣಿ ಹಾಗೂ ಹವಮಾನದ ಮುನ್ನೆಚ್ಚರಿಕೆ ನೀಡುತ್ತಲೇ ಇದ್ದ ಕ್ರಿಕೆಟ್ ಪಂಡಿತರು ಈಗ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸುವಲ್ಲಿ ತಲ್ಲೀನರಾಗಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 137 ರನ್ ಅಂತರದಲ್ಲಿ ಜಯ ಗಳಿಸಿದ ಭಾರತ ಮೆಲ್ಬೋರ್ನ್ ಅಂಗಣದಲ್ಲಿ 37 ವರ್ಷ ಹಾಗೂ 10 ತಿಂಗಳ ನಂತರ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿತು.
ಅಂತಿಮ ದಿನದ ಆರಂಭದಲ್ಲಿ ಮಳೆ ಅಡ್ಡಿಯಾದರೂ, ಎರಡು ವಿಕೆಟ್ ಗಳಿಸಲು ಭಾರತಕ್ಕೆ ಸಾಕಷ್ಟು ಸಮಯಾವಕಾಶ ಇದ್ದಿತು. ಅಂತಿಮ ದಿನದಲ್ಲಿ ಆಸ್ಟ್ರೇಲಿಯಾಕ್ಕೆ ಜಯ ಗಳಿಸಲು 141 ರನ್ ಅಗತ್ಯವಿದ್ದಿತ್ತು. ಆದರೆ ಉಳಿದಿರುವುದು ಕೇವಲ ಎರಡು ವಿಕೆಟ್. ಭಾರತದ ಬೌಲರ್‌ಗಳು 3.2 ಓವರ್‌ಗಳಲ್ಲಿ ಎರಡು ವಿಕೆಟ್ ಗಳಿಸಿ ಐತಿಹಾಸಿಕ ಜಯ ತಂದುಕೊಟ್ಟರು. 1981ರ ನಂತರ ಇದೇ ಮೊದಲ ಬಾರಿಗೆ ಭಾರತ ತಂಡ ಮೆಲ್ಬೋರ್ನ್‌ನಲ್ಲಿ ಜಯ ಗಳಿಸಿದೆ. ಅಂದು ಗೆದ್ದಾಗ ಈಗ ತಂಡದಲ್ಲಿ ಆಡುತ್ತಿರುವ ಯಾರೂ ಜನಿಸಿರಿಲ್ಲ!. ಬಾರ್ಡರ್ -ಗವಾಸ್ಕರ್ ಟ್ರೋಫಿಯಲ್ಲಿ ಈಗಾಗಲೇ ಮನೆಯಂಗಣದಲ್ಲಿ ಸರಣಿ ಗೆದ್ದಿರುವ ಭಾರತ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಗುರುವಾರ ಸಿಡ್ನಿಯಲ್ಲಿ ಸರಣಿಯ ಅಂತಿಮ ಪಂದ್ಯವನ್ನಾಡಲಿದೆ.
86 ರನ್‌ಗೆ 9 ವಿಕೆಟ್ ಗಳಿಸಿದ ಜಸ್‌ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.