ಏಜೆನ್ಸೀಸ್ ಹೊಸದಿಲ್ಲಿ
ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳನ್ನು ಬಹಿಷ್ಕರಿಸಬೇಕು ಎಂದು ಭಾರತದ ಕೆಲವು ಮಾಜಿ ಕ್ರಿಕೆಟ್ ಆಟಗಾರರು ಬಿಸಿಸಿಐಗೆ ಒತ್ತಾಯಿಸಿದ್ದಾರೆ. ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಇಂಥ ತೀರ್ಮಾನ ಕೈಗೊಳ್ಳಲು ಆಗ್ರಹಪಡಿಸಲಾಗುತ್ತಿದೆ. ಆದರೆ ಜೂನ್ 16ರಂದು ಇಂಗ್ಲೆಂಡ್‌ನ ಓಲ್ಡ್ ಟ್ರಫೋರ್ಡ್‌ನಲ್ಲಿ ನಡೆಯಲಿರುವ ಭಾರತ ಹಾಗೂ ಪಾಕ್ ತಂಡಗಳ ನಡುವಿನ ವಿಶ್ವಕಪ್ ಪಂದ್ಯದ ಟಿಕೆಟ್‌ಗಾಗಿ 4,00,000ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹೇಳಿದೆ.
ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಐಸಿಸಿ ಟೂರ್ನಮೆಂಟ್ ನಿರ್ದೇಶಕ ಸ್ಚೀವ್ ಎಲ್ವರ್ದಿ, ಈ ವಿಷಯವನ್ನು ಹೇಳಿದ್ದಾರೆ. ಆದರೆ ಈ ಪಂದ್ಯವನ್ನು ಅಂಗಣದಲ್ಲಿ ವೀಕ್ಷಿಸಲು ಅವಕಾಶ ಸಿಗದೆ ನಿರಾಸೆಗೊಳಗಾಗುವವರೇ ಹೆಚ್ಚು, ಏಕೆಂದರೆ ಓಲ್ಡ್ ಟ್ರಫೋರ್ಡ್ ಕ್ರೀಡಾಂಗಣದ ಆಸನದ ಸಾಮರ್ಥ್ಯ ಕೇವಲ 25,000. ಮಾಜಿ ಆಟಗಾರರಾದ ಹರ್ಭಜನ್ ಸಿಂಗ್, ಚೇತನ್‌ಚೌಹಾಣ್, ಕರ್ನಾಟಕದ ಮಾಜಿ ಆಟಗಾರರಾದ ವಿಜಯ ಬಾರಧ್ವಾಜ್, ದೊಡ್ಡ ಗಣೇಶ್ ಪಂದ್ಯಕ್ಕೆ ಬಹಿಷ್ಕಾರ ಹಾಕಬೇಕೆಂದು ಬಿಸಿಸಿಐಯನ್ನು ಒತ್ತಾಯಿಸಿದ್ದಾರೆ.
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಅಥವಾ ವಿಶ್ವಕಪ್ ಫೈನಲ್‌ಗೂ ಈ ರೀತಿಯ ಬೇಡಿಕೆ ಬರುವ ಸಾಧ್ಯತೆ ಕಡಿಮೆ ಎಂದು ಎಲ್ವರ್ದಿ ಅಚ್ಚರಿಯಿಂದ ಹೇಳಿದ್ದಾರೆ.