ಏಜೆನ್ಸೀಸ್ ರಾಂಚಿ
ವಿರಾಟ್ ಕೊಹ್ಲಿ (123) ಅವರ ಶತಕದ ನಡುವೆಯೂ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 32 ರನ್‌ಗಳ ಅಂತರದಲ್ಲಿ ಸೋಲನುಭವಿಸಿದೆ. ಆದರೂ ಐದು ಪಂದ್ಯಗಳ ಸರಣಿಯಲ್ಲಿ ‘ಭಾರತ 2-1ರ ಮೇಲುಗೈ ಸಾಧಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ಈ ಬಾರಿ ಬೌಲಿಂಗ್‌ನಲ್ಲಿ ಯಶಸ್ಸು ಕಾಣಲಿಲ್ಲ. ಉಸ್ಮಾನ್ ಖಾವಾಜ (104) ಅವರ ಶತಕ ಹಾಗೂ ನಾಯಕ ಏರೋನ್ ಫಿಂಚ್ (93) ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ 5 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿತು. ಭಾರತದ ಪರ ಕುಲದೀಪ್ ಯಾದವ್ 3 ವಿಕೆಟ್ ಗಳಿಸಿದರು.
ಬೃಹತ್ ಮೊತ್ತವನ್ನು ಬೆಂಬತ್ತಿದ ಭಾರತಕ್ಕೆ ಶಿಖರ್ ಧವನ್ (1) ಹಾಗೂ ರೋಹಿತ್ ಶರ್ಮಾ (14) ಉತ್ತಮ ಆರಂಭ ಕಲ್ಪಿಸುವಲ್ಲಿ ವಿಫಲರಾದರು. ಆದರೆ ನಾಯಕ ವಿರಾಟ್ ಕೊಹ್ಲಿ (123) ಮತ್ತೊಂದು ಶತಕ ಗಳಿಸಿ, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 41ನೇ ಬಾರಿಗೆ ನೂರು ರನ್ ಸಾಧನೆ ಮಾಡಿದರು. ಆದರೆ ಜಾಂಪಾ ಅವರು ವಿರಾಟ್ ಕೊಹ್ಲಿಯ ವಿಕೆಟ್ ಗಳಿಸುವ ಮೂಲಕ ಭಾರತ ಸೋಲಿನ ಹಾದಿ ಹಿಡಿಯಿತು. ಮಧ್ಯಮ ಕ್ರಮಾಂಕದ ಆಟಗಾರರು ಹೆಚ್ಚು ಹೊತ್ತು ಕ್ರೀಸಿನಲ್ಲಿ ಉಳಿಯದ ಕಾರಣ ಭಾರತ 48.2 ಓವರ್‌ಗಳಲ್ಲಿ 281 ರನ್ ಗಳಿಸಿ 32 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಶತಕ ಗಳಿಸಿದ ಉಸ್ಮಾನ್ ಖವಾಜ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.