Friday, November 22, 2024

ಪೂಜಾರ ಶತಕ ಸಂಭ್ರಮ, ರಾಹುಲ್‌ಗೆ ರಾಹು ಕಾಲ

ಏಜೆನ್ಸೀಸ್ ಸಿಡ್ನಿ

ಚೇತೇಶ್ವರ ಪೂಜಾರ (130*) ಅವರ ಆಕರ್ಷಕ ಶತಕದ ನೆರವಿನಿಂದ ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿ ಸುಸ್ಥಿತಿಯಲ್ಲಿದೆ. ಆದರೆ ಕೆ.ಎಲ್. ರಾಹುಲ್ ನನ್ನನ್ನು ರಣಜಿ ಪಂದ್ಯಗಳನ್ನಾಡಲು ಕಳುಹಿಸಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಪಂದ್ಯವನ್ನಾಡುತ್ತಿರುವ ಮಯಾಂಕ್ ಅಗರ್ವಾಲ್ 77 ರನ್ ಸಿಡಿಸಿ ತಾನೊಬ್ಬ ಸಮರ್ಥ ಆರಂಭಿಕ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕನ್ನಡಿಗರಿಬ್ಬರು ಇನಿಂಗ್ಸ್ ಆರಂಭಿಸಿದಾಗ ಅದ್ಭುತವೆನಿಸಿತ್ತು. ಆದರೆ ಕೇವಲ 9 ರನ್ ಗಳಿಸುತ್ತಲೇ ರಾಹುಲ್ ವಿಕೆಟ್ ಒಪ್ಪಿಸಿದಾಗ, ಅವರನ್ನು ಸಿಡ್ನಿ ಟೆಸ್ಟ್‌ಗೆ ಮತ್ತೆ ಯಾಕೆ ಅವಕಾಶ ಕೊಟ್ಟರು ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿರುವುದು ಸಹಜವಾಗಿತ್ತು.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಚೇತೇಶ್ವರ ಪೂಜಾರ ಪಾತ್ರರಾದರು. ವಿರಾಟ್ ಕೊಹ್ಲಿ (4), ಸುನಿಲ್ ಗವಾಸ್ಕರ್ (3) ಒಂದೇ ಸರಣಿಯಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಭಾರತದ ಇತರ ಆಟಗಾರರು. ಮಯಾಂಕ್ ಅಗರ್ವಾಲ್ ಮೆಲ್ಬೋರ್ನ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ  76 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 42 ರನ್ ಗಳಿಸಿ ತಮ್ಮ ಆಯ್ಕೆಯನ್ನು ಉತ್ತಮ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದರು. ಸಿಡ್ನಿ ಅಂಗಣದಲ್ಲಿ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಯಾಂಕ್, 112 ಎಸೆತಗಳನ್ನೆದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 77 ರನ್ ಗಳಿಸಿ ಮತ್ತೊಮ್ಮೆ ಶತಕದಿಂದ ವಂಚಿತರಾದರು. ವಿರಾಟ್ ಕೊಹ್ಲಿ (23) ಹಾಗೂ ಅಜಿಂಕ್ಯ ರಹಾನೆ (18) ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯಲಿಲ್ಲ. ಆದರೂ ಪೂಜಾರ ಅವರ ಶತಕದ ನೆರವಿನಿಂದ ಭಾರತ ಮೊದಲ ದಿನದ ಗೌರವ ಕಾಯ್ದುಕೊಂಡಿತು.

Related Articles