ಸ್ಪೋರ್ಟ್ಸ್ ಮೇಲ್ ವರದಿ
ಕೇವಲ 69 ಎಸೆತ, 18 ಬೌಂಡರಿ, 25 ಸಿಕ್ಸರ್, 237 ರನ್, 343.48 ಸ್ಟ್ರೈಕ್ ರೇಟ್!. ಆರು ಎಸೆತಗಳಿಗೆ ಆರು ಸಿಕ್ಸರ್! ಇದು ಮಂಗಳೂರಿನ 17 ವರ್ಷದ ಆಟಗಾರ ಮೆಕ್‌ನೈಲ್ ನರೋನ್ಹಾ ಬೆಂಗಳೂರಿನಲ್ಲಿ ನಡೆದ ಪಂದ್ಯವೊಂದರಲ್ಲಿ ಮಾಡಿದ ಸಾಧನೆ.
ಬೆಂಗಳೂರಿನಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆ್ ಕ್ರಿಕೆಟ್ (ಕೆಐಒಸಿ)ಯ ತಂಡದ ಪರ ಆಡುತ್ತಿರುವ ಮೆಕ್‌ನೈಲ್ ರಘು ಕ್ರಿಕೆಟ್ ಅಕಾಡೆಮಿ ವಿರುದ್ಧದ 19 ವರ್ಷ ವಯೋಮಿತಿಯ ಕ್ರಿಕೆಟ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಮೆಕ್‌ನೈಲ್ ಅವರ ಈ ಸಾ‘ನೆಯಿಂದ ಕೆಐಒಸಿ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 371 ರನ್ ಗಳಿಸಿ ದಾಖಲೆ ಬರೆಯಿತು.
ದುಬೈಯಲ್ಲಿ ನೆಲೆಸಿರುವ ಮಂಗಳೂರಿನ ಕುಲಶೇಖರ ಮೂಲದ ಮೈಕ್‌ನೈಲ್, ಈಗಾಗಲೇ ಯುಎಇ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿ ಅಲ್ಲಿಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯುಎಇ ಅಂಡರ್ 16, 19 ಹಾಗೂ ಹಿರಿಯರ ತಂಡದಲ್ಲೂ ಆಡಿ ಗಮನ ಸೆಳೆದಿದ್ದಾರೆ. ‘ಪಿಚ್ ಬ್ಯಾಟಿಂಗ್‌ಗೆ ಯೋಗ್ಯವಾಗಿತ್ತು. ಅತಿ ಹೆಚ್ಚು ರನ್ ಗಳಿಸಬೇಕೆಂಬ ಉದ್ದೇಶದಿಂದ ತಪ್ಪಿನ ಹೊಡೆತಗಳಿಗೆ ಮನ ಮಾಡದೆ ನೈಜ ಆಟ ಪ್ರದರ್ಶಿಸಿದೆ, ಈ ಹಿಂದೆಯೂ 50 ಓವರ್‌ಗಳ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದೆ. ಹೆತ್ತವರ ಆಶೀರ್ವಾದ ಹಾಗೂ ಕೆಐಒಸಿಯ ಉತ್ತಮ ತರಬೇತಿಯಿಂದ ಇದು ಸಾಧ್ಯವಾಯಿತು. ಕೋಚ್ ಇರ್ಫಾನ್ ಶೇಟ್ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ,‘ ಎಂದು ಮೆಕ್‌ನೈಲ್ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದ್ದಾರೆ. ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ಜಗತ್ತಿನ ಗಮನ ಸೆಳೆದಿದ್ದ ಯುವರಾಜ್ ಸಿಂಗ್ ಅವರು ನಿವೃತ್ತಿ ಹೊಂದಿದ ಎರಡು ದಿನಗಳಲ್ಲೇ ಯುವ ಕ್ರಿಕೆಟಿಗನೊಬ್ಬ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದು ವಿಶೇಷ.