Friday, April 19, 2024

ನಿವೃತ್ತಿಯ ತೀರಕೆ ಸಾಗಿದ ಧೋನಿ

ಸ್ಪೋರ್ಟ್ಸ್ ಮೇಲ್ ವರದಿ

ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಫೋಟಕ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈ ಬಿಡುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪರೋಕ್ಷ ಸಂದೇಶವೊಂದನ್ನು ರವಾನಿಸಿದೆ.

ರಿಷಬ್ ಪಂಥ್ ಹಾಗೂ ದಿನೇಶ್ ಕಾರ್ತಿಕ್ ವೆಸ್ಟ್‌ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸುವ ಮೂಲಕ ಧೋನಿಗೆ ನಿವೃತ್ತಿಯ ತೀರ್ಮಾನ ಕೈಗೊಳ್ಳಲು ದಾರಿ ಮಾಡಿಕೊಟ್ಟಂತಾಗಿದೆ. ಧೋನಿಯ ಬ್ಯಾಟ್‌ನಿಂದ ಇತ್ತೀಚಿಗೆ ರನ್ ಬರುತ್ತಿಲ್ಲ ಎಂಬುದು ನಿಜ, ಆದರೆ ವಿಕೆಟ್ ಕೀಪಿಂಗ್‌ನಲ್ಲಿ ಅವರನ್ನು ಈಗಲೂ ಮೀರಿಸಲು ಅಸಾಧ್ಯ.
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಅವರು ಇಂಗ್ಲೆಂಡ್, ಏಷ್ಯಾಕಪ್ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ಗಮನಾರ್ಹ ಸಾಧನೆ ಮಾಡಿರಲಿಲ್ಲ. ಅಲ್ಲದೆ ಭಾರತ ತಂಡಕ್ಕೆ ಈಗ ಮತ್ತೊಬ್ಬ ವಿಕೆಟ್‌ಕೀಪರ್  ಅಗತ್ಯವಿದೆ. ಧೋನಿಯ ಬ್ಯಾಟ್‌ನಿಂದ ರನ್ ಗಳಿಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಧೋನಿ ವಿಕೆಟ್‌ಕೀಪಿಂಗ್‌ನಲ್ಲಿ ಮಿಂಚುತ್ತಿದ್ದರೂ ಬ್ಯಾಟಿಂಗ್‌ನಲ್ಲಿ ಹಿಂದಿನ ಸ್ಫೋಟಕತನ ಇಲ್ಲ. ಈ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಮುಂದಿನ ಎರಡು ಸರಣಿಗೆ ಧೋನಿಯನ್ನು ಕೈ ಬಿಟ್ಟಿದೆ.
ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಗೆ ನಾಯಕ ವಿರಾಟ್ ಕೊಹ್ಲಿಗೂ ವಿಶ್ರಾಂತಿ ನೀಡಲಾಗಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರು ತಂಡವನ್ನು ಮುನ್ನಡೆಸುವರು. ವಿರಾಟ್ ಹಾಗೂ ಧೋನಿಯ ಗೈರಿನಲ್ಲಿ ರೋಹಿತ್ ಶರ್ಮಾ ವಿಂಡೀಸ್ ವಿರುದ್ಧದ ಟಿ೨೦ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ವಿಶ್ವಕಪ್‌ಗೆ ಧೋನಿ ಸಂಶಯ

ಆಯ್ಕೆ ಸಮಿತಿಯು ಇನ್ನೊಬ್ಬ ವಿಕೆಟ್ ಕೀಪರ್ ಹುಡುಕಾಟದಲ್ಲಿ ಇರುವುದು ಸ್ಪಷ್ಟವೆಂದಾದರೆ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ನಲ್ಲಿ ಧೋನಿ ಆಡುವುದು ಸಂಶಯವೇ ಸರಿ. ಬರೇ ವಿಕೆಟ್‌ಕೀಪಿಂಗ್‌ಗಾಗಿ ಧೋನಿಗೆ ಅವಕಾಶ ನೀಡಿಲ್ಲ. ಬದಲಾಗಿ ರನ್ ನಿರೀಕ್ಷೆಯಲ್ಲೂ ಆಯ್ಕೆ ಸಮಿತಿ ಇದೆ. ಆದರೆ ಧೋನಿ ಇತ್ತೀಚಿನ ಏಕದಿನ ಪಂದ್ಯಗಳಲ್ಲಿ ಗಳಿಸಿರುವ ರನ್ ಗಮನಿಸಿದಾಗ ಅವರು ಮುಂದಿನ ವಿಶ್ವಕಪ್‌ಗೆ ಮುನ್ನವೇ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಹೆಚ್ಚಿದೆ.

Related Articles