ಸ್ಪೋರ್ಟ್ಸ್ ಮೇಲ್ ವರದಿ
ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯನ್ನು ವಿರೋಧಿಸಿ ಹಾಗೂ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡುವುದೇ ಬೇಡ ಎನ್ನುತ್ತಿರುವ ದೇಶದ ಅನೇಕ ಕ್ರಿಕೆಟ್ ಸಂಸ್ಥೆಗಳು ತಮ್ಮ ಸಂಗ್ರಹದಲ್ಲಿದ್ದ ಪಾಕಿಸ್ತಾನ ಕ್ರಿಕೆಟಿಗರಿರುವ ಫೋಟೋಗಳನ್ನು ಕಿತ್ತು ಹಾಕಿವೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ, ಮಾಜಿ ಕ್ರಿಕೆಟಿಗ ಸುಧಾಕರ್ ರಾವ್ ಮೃತ ಯೋಧರಿಗೆ ಗೌರವ ಸೂಚಿಸುವ ಸಲುವಾಗಿ ಇಂಥ ತೀರ್ಮಾವನ್ನು ಕೈಗೊಳ್ಳಲಾಗಿದೆ ಎಂದ್ದಿದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಇತಿಹಾಸವನ್ನು ಹೇಳುವ ಅನೇಕ ಫೋಟೋಗಳಿದ್ದವು, ಆದರೆ ಅವುಗಳನ್ನು ತೆರವುಗೊಳಿಸಿ ಪಾಕಿಸ್ತಾನದ ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ.
ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಕೆಎಸ್ಸಿಎ ಕಾರ್ಯದರ್ಶಿ ಸುಧಾಕರ್ ರಾವ್, ‘ಭಾರತದ ಸೇನಾ ಪಡೆಗೆ ನಮ್ಮ ಬೆಂಬಲ ಸೂಚಿಸುತ್ತಿದ್ದೇವೆ. ಪುಲ್ವಾಮಾ ದಾಳಿಯನ್ನು ಖಂಡಿಸಿ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿರುವ ಪಾಕಿಸ್ತಾನದ ಕ್ರಿಕೆಟಿಗರಿದ್ದ ಫೋಟೋಗಳನ್ನು ನಾವು ತೆರವುಗೊಳಿಸಿದ್ದೇವೆ. ಇದರಲ್ಲಿ ಪಾಕಿಸ್ತಾನದ ಪ್ರಧಾನಿ ಹಾಗೂ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಫೋಟೋವೂ ಸೇರಿದೆ. ಈ ಕ್ರಮವನ್ನು ನಾವು ಎರಡು ದಿನಗಳ ಹಿಂದೆಯೇ ಕೈಗೊಂಡಿದ್ದೇವೆ,‘ ಎಂದು ಹೇಳಿದರು.
ಕೇವಲ ಕರ್ನಾಟಕ ಕ್ರಿಕೆಟ್ ಸಂಸ್ಥೆ ಮಾತ್ರವಲ್ಲ, ದೇಶದ ಇತರ ಕ್ರಿಕೆಟ್ ಸಂಸ್ಥೆಗಳೂ ಪಾಕಿಸ್ತಾನ ಆಟಗಾರರಿದ್ದ ಫೋಟೋಗಳನ್ನು ಕಿತ್ತು ಹಾಕಿವೆ. ಮುಂಬೈಯ ಚರ್ಚ್ಗೇಟ್ ಸಮೀಪ ಇರುವ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಮೊದಲು ಈ ಕೆಲಸವನ್ನು ಮಾಡಿದೆ. 1992ರ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಇಮ್ರಾನ್ ಖಾನ್ ಅವರ ಫೋಟೋವನ್ನು ತೆರವುಗೊಳಿಸಿದೆ.
ಪಂಜಾಬ್ ಕ್ರಿಕೆಟ್ ಸಂಸ್ಥೆಯ ಖಜಾಂಚಿ ಅಜಯ್ ತ್ಯಾಗಿ ಕೂಡ ಇದೇ ರೀತಿಯ ತೀರ್ಮಾನ ಕೈಗೊಂಡು ಪಾಕಿಸ್ತಾನ ಆಟಗಾರರಿದ್ದ ಫೋಟೋಗಳನ್ನು ತೆರವುಗೊಳಿಸಿದ್ದಾರೆ. ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಕೂಡ ಪಾಕಿಸ್ತಾನ ಆಟಗಾರರಿದ್ದ ಫೋಟೋಗಳನ್ನು ತೆರವುಗೊಳಿಸಿದ್ದಾರೆ. ಹಿಮಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕೂಡ ಇದರಿಂದ ಹೊರತಾಗಿಲ್ಲ.