Friday, November 22, 2024

ಕರ್ನಾಟಕದ ಗೌರವ ಕಾಯ್ದ ಶ್ರೇಯಸ್

ಸ್ಪೋರ್ಟ್ಸ್ ಮೇಲ್ ವರದಿ

ಸೌರಾಷ್ಟ್ರ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಲ್ರೌಂಡರ್ ಶ್ರೇಯಸ್ ಗೋಪಾಲ್, ನಾಯಕ ಮನೀಶ್ ಪಾಂಡೆ ಹಾಗೂ ಶರತ್ ಶ್ರೀನಿವಾಸ್ ಅವರ ಅರ್ಧ ಶತಕದ ನೆರವಿನಿಂದ ಕರ್ನಾಟಕ ಮೊದಲ ದಿನದಲ್ಲಿ  9 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು.

ಶ್ರೇಯಸ್ ಗೋಪಾಲ್ (87), ಮನೀಶ್ ಪಾಂಡೆ (62) ಹಾಗೂ ಶರತ್ ಶ್ರೀನಿವಾಸ್ ಅವರು ಅಜೇಯ 74 ರನ್ ಗಳಿಸಿ  ಆತಂಕದಲ್ಲಿದ್ದ ತಂಡಕ್ಕೆ ನೆರವಾದರು. ನಿರಂತರ ಬದಲಾವಣೆಗೆ ಒಗ್ಗಿಕೊಂಡಿರುವ ರಾಜ್ಯ ಆಯ್ಕೆ ಸಮಿತಿ ಈ ಬಾರಿಯೂ ತಂಡದಲ್ಲಿ ಅಲ್ಪ ಮಟ್ಟಿನ ಬದಲಾವಣೆ ಮಾಡಿತ್ತು. ನಿರೀಕ್ಷೆಯಂತೆ ಮಯಾಂಕ್ ಅಗರ್ವಾಲ್ ತಂಡವನ್ನು ಸೇರಿಕೊಂಡರು. ಆದರೆ ಅನಿರೀಕ್ಷಿತವಾಗಿ ಅವರು ರನ್ ಗಳಿಸುವಲ್ಲಿ ವಿಫಲರಾದರು. ಆರ್. ಸಮರ್ಥ್ ಮತ್ತೊಮ್ಮೆ ರನ್ ಗಳಿಸಲು ಅಸಮರ್ಥರಾದರು. ಕೆವಿ ಸಿದ್ಧಾರ್ಥ್ ಹಾಗೂ ಕರುಣ್ ನಾಯರ್ ಅವರಿಗೂ ಸೆಮಿಫೈನಲ್‌ನ ಮೊದಲ ಇನಿಂಗ್ಸ್ ಕೈಗೂಡಲಿಲ್ಲ. 30 ರನ್ ಗಳಿಸುತ್ತಲೇ ತಂಡ ನಾಲ್ಕು ಅಮೂಲ್ಯ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ನಾಯಕ ಮನೀಶ್ ಪಾಂಡೆ ಅನುಭವದ ಆಟವಾಡಿ 67 ಎಸೆತಗಳನ್ನೆದುರಿಸಿ  4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ ತಂಡಕ್ಕೆ ನೆರವಾದರು. ಅದೇ ರೀತಿ ಶ್ರೇಯಸ್ ಗೋಪಾಲ್ ಅವರೊಂದಿಗೆ 106 ರನ್ ಜತೆಯಾಟವಾಡಿದರು. ಹಲವಾರು ಬಾರಿ ಬೌಲಿಂಗ್‌ನಲ್ಲಿ ತಂಡವನ್ನು ಆತಂಕದಿಂದ ಪಾರು ಮಾಡಿದ್ದ ಶ್ರೇಯಸ್ ಗೋಪಾಲ್ ಈ ಬ್ಯಾಟಿಂಗ್‌ನಲ್ಲಿ ಮಿಂಚಿದರು. 182 ಎಸೆತಗಳನ್ನೆದುರಿಸಿ  9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಮೂಲ್ಯ 87 ರನ್ ಗಳಿಸಿ ಮಾಕ್ವಾನ್ ಅವರಿಗೆ ವಿಕೆಟ್ ಒಪ್ಪಿಸಿದರು. ಶರತ್ ಶ್ರೀನಿವಾಸ್ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 74 ರನ್ ಗಳಿಸಿ ತಂಡಕ್ಕೆ ನೆರವಾದರು. ಕ್ವಾರ್ಟರ್  ಫೈನಲ್ ಪಂದ್ಯದಲ್ಲಿ ಅನುಭವದ ಆಟ ಪ್ರದರ್ಶಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರ್. ವಿನಯ್ ಕುಮಾರ್ ಈ ಬಾರಿ ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯಲಿಲ್ಲ.  ಸೌರಾಷ್ಟ್ರ ಪರ ಜೈದೇವ್ ಉನಾಡ್ಕತ್ 50ಕ್ಕೆ 4 ಹಾಗೂ ಮಕ್ವಾನ  73ಕ್ಕೆ 3 ವಿಕೆಟ್ ಗಳಿಸಿದರು.

Related Articles