ಏಜೆನ್ಸೀಸ್ ಕೊಚ್ಚಿ
ಗುಜರಾತ್ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 113 ರನ್‌ಗಳ ಬೃಹತ್ ಜಯ ಗಳಿಸಿದ ಕೇರಳ ತಂಡ ರಣಜಿ ಟ್ರೋಫಿ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ.
ಕೇರಳದ ವಯಾನಾಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 195 ರನ್‌ಗಳ ಸುಲಭ ಜಯದ ಗುರಿ ಹೊತ್ತ ಗುಜರಾತ್ 31.3 ಓವರ್‌ಗಳಲ್ಲಿ ಕೇವಲ 81 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಅಚ್ಚರಿಯ ಆಘಾತ ಅನುಭವಿಸಿತು. ಇದರೊಂದಿಗೆ ದುರ್ಬಲ ತಂಡವೆಂದು ಬಿಂಬಿಸಲ್ಪಟ್ಟ ಕೇರಳ ಬೌಲಿಂಗ್‌ನಲ್ಲಿ ಅದ್ಭುತ ಸಾಧನೆ ಮಾಡಿ ಮೊದಲ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಎರಡು ಇನಿಂಗ್ಸ್‌ಗಳಲ್ಲಿ ಒಟ್ಟು 8 ವಿಕೆಟ್ ಗಳಿಸಿದ ಬಸಿಲ್ ಥಂಪಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸಂದೀಪ್ ವಾರಿಯರ್ ಕೂಡ 8 ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಮೊದಲ ಇನಿಂಗ್ಸ್‌ನಲ್ಲಿ 185 ರನ್‌ಗೆ ಆಲೌಟ್ ಆಗಿದ್ದ ಕೇರಳ ತಂಡ ಗುಜರಾತ್ ತಂಡವನ್ನು 162 ರನ್‌ಗೆ ಕಡಿವಾಣ ಹಾಕಿ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಕಂಡಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ 171 ರನ್ ಗಳಿಸಿತ್ತು. ಗುಜರಾತ್ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 81 ರನ್‌ಗೆ ಸರ್ವಪತನ ಕಂಡಿತು.