Sunday, December 22, 2024

ಶಿಖರ್ ಧವನ್ ಹುಟ್ಟು ಹಬ್ಬಕ್ಕೆ ಅಂಗಾಂಗ ದಾನ ಪ್ರಕಟಿಸಿದ ಶಂಕರ್ ಧವನ್

ಆರ್. ಕೆ. ಆಚಾರ್ಯ ಕೋಟ

ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಗಬ್ಬರ್ ಖ್ಯಾತಿಯ ಆಟಗಾರ ಶಿಖರ್ ಧವನ್ ಅವರ 33ನೇ ಹುಟ್ಟು ಹಬ್ಬ ಇಂದು. ಈ ಶುಭ ಸಂದರ್ಭದಲ್ಲಿ ಅವರ ಕಟ್ಟಾ ಅಭಿಮಾನಿ ಬೆಂಗಳೂರಿನ ಶಂಕರ್ ಧವನ್ ಹಾಗೂ ಅವರ ಪತ್ನಿ ತಮ್ಮ ದೇಹದ ಅಂಗಾಂಗಗಳ ದಾನ ಪ್ರಕಟಿಸಿದ್ದಾರೆ.

ಹೀಗೆ ಕ್ರಿಕೆಟ್ ಆಟಗಾರರೊಬ್ಬರ ಹುಟ್ಟು ಹಬ್ಬಕ್ಕೆ ಅಂಗಾಂಗಗಳ ದಾನ ಪ್ರಕಟಿಸಿದ ಜಗತ್ತಿನ  ಮೊದಲ ಕ್ರಿಕೆಟ್ ಅಭಿಮಾನಿ ಎಂಬ ಹೆಗ್ಗಳಿಕೆಗೆ ಶಂಕರ್ ಹಾಗೂ ಅವರ ಪತ್ನಿ ಗೀತಾ ಪಾತ್ರರಾಗಿದ್ದಾರೆ.

ಸುರುಳಿ ಮೀಸೆಯನ್ನು ತಿರುವುತ್ತಾ, ತೊಡೆ,ಭುಜವನ್ನು ತಟ್ಟಿ ತನ್ನ ಅಮೋಘ ಆಟವನ್ನು ಪ್ರದರ್ಶಿಸುತ್ತಾ,

ಏಕದಿನ,ಟ್ವೆಂಟಿ,ಟೆಸ್ಟ್‌ ಪಂದ್ಯಗಳಾಗಲಿ ಅದ್ಭುತ ಪ್ರದರ್ಶನ ನೀಡುತ್ತಿರುವ,ಅಂತಾರಾಷ್ಟ್ರೀಯ ತಂಡದ ಆರಂಭಿಕ ಆಟಗಾರ ಗಬ್ಬರ್ “ಶಿಖರ್ ಧವನ್” ಕ್ರಿಕೆಟ್ ಅಭಿಮಾನಿಗಳಿಗೆ ಪಂಚಪ್ರಾಣ.ಕಳೆದ ಮೂರು ಸರಣಿಗಳಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಜೀವನದ ಅತ್ಯುತ್ತಮ ಫಾರ್ಮ್ ನ ಹಂತದಲ್ಲಿದ್ದಾರೆ.
ಕ್ರೀಡೆಯಲ್ಲಿ ಈ ದೇಶದ ಉಸಿರೇ ಕ್ರಿಕೆಟ್.ಯಾವುದೇ ಫಲಾಪೇಕ್ಷೆಯಿಲ್ಲದ ಅಭಿಮಾನ,ತಂಡ ಹಾಗೂ ಆಟಗಾರರು ಎಲ್ಲೇ ಹೋದರು ಜಾಡು ಹಿಡಿದು ಹಿಂಬಾಲಿಸುವ ಅಭಿಮಾನ.ಕೆಲಸ ಕಾರ್ಯಗಳನ್ನು ಬದಿಗೊತ್ತಿ ತಮ್ಮ ಆಟಗಾರರನ್ನು ಹಿಂಬಾಲಿಸುವವರಿದ್ದಾರೆ‌.ಅಭಿಮಾನಿಗೆ ಪಂದ್ಯಕ್ಕಾಗಿ ಟಿಕೆಟ್ ನೀಡುವ ಆಟಗಾರರಿದ್ದಾರೆ.ಸಚಿನ್ ತೆಂಡುಲ್ಕರ್ ಅವರು ನಿವೃತ್ತಿಯಾದರೂ,ಮಿಸ್ ಯೂ ಸಚಿನ್ ಎಂದು ಮೈಗೆಲ್ಲಾ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡು,ಶಂಖನಾದವನ್ನು ಮೊಳಗುವ ಬಿಹಾರ್ ನ ಸುಧೀರ್ ಕುಮಾರ್ ಎಲ್ಲರಿಗೂ ಗೊತ್ತು‌.ಆದರೆ ಸದ್ದಿಲ್ಲದೆ ಶಿಖರ್ ಧವನ್ ಅವರನ್ನು ಹಿಂಬಾಲಿಸುತ್ತಿರುವ ಅಥವಾ ಧವನ್ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ  ಬೆಂಗಳೂರಿನ ಶಂಕರ್ ಧವನ್ ಬಗ್ಗೆ ತಿಳಿದವರು ವಿರಳ.
ಧವನ್ ರಂತೆಯೇ ಕೇಶವಿನ್ಯಾಸ,ಮೀಸೆ,ಕಿವಿಗೆ ಟಿಕ್ಕಿ,ಧವನ್ ರ ಭಾವ ಚಿತ್ರವಿರುವ ಟ್ಯಾಟೂ ಹೀಗೆ ಪ್ರತಿಯೊಂದು ವಿಚಾರದಲ್ಲೂ ಧವನ್ ರನ್ನು ಅನುಕರಿಸುವ ಶಂಕರ್ ಅವರು ಶಿಖರ್ ಧವನ್ ಪಾಲಿಗೆ ಮನೆಯ ಸದಸ್ಯನಂತೆ.ತನ್ನ ಮನೆಗೆ ಆದರದಿಂದ ಬರಮಾಡಿಕೊಳ್ಳುವ ಧವನ್ ,ಮನೆಯವರಿಗೆ “ಎ ಮೇರಾ ಛೋಟಾ ಭಾಯಿ” ಎಂದು ಅತ್ಯಂತ ಪ್ರೀತಿಯಿಂದ ಕರೆಯುತ್ತಾರೆ. 2008 ರಿಂದ ಶಂಕರ್ ಪಾಲಿಗೆ ಧವನ್ ದೇವರಿದ್ದಂತೆ.
ಇತ್ತೀಚೆಗೆ ಮುಂಬೈನಲ್ಲಿ ಆರಂಭಗೊಂಡ “ದಿ ಒನ್ ಆನ್ ಲೈನ್” ಉತ್ಪನ್ನಗಳ ಉದ್ಘಾಟನಾ ಸಮಾರಂಭಕ್ಕೂ,ಮೊನ್ನೆ ನಡೆದ ವಿವಾಹ ವಾರ್ಷಿಕೋತ್ಸವ ಸಮಾರಂಭಕ್ಕೂ ಶಂಕರ್ ಕುಟುಂಬವನ್ನೇ ಆಹ್ವಾನಿಸಿದ್ದರು.ಪ್ರತಿಯೊಂದು ಪಂದ್ಯಕ್ಕೂ ಟಿಕೆಟ್ ಉಚಿತವಾಗಿ ನೀಡುತ್ತಾರೆ.ಭಾರತದ ಡ್ರೆಸ್ಸಿಂಗ್ ರೂಮ್ ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಏಕೈಕ ಅಭಿಮಾನಿಯೆಂದರೆ ಅದು ಶಂಕರ್.ಸಚಿನ್ ತೆಂಡುಲ್ಕರ್ ಅಭಿಮಾನಿ ಸುಧೀರ್ ಬೆಂಗಳೂರಿಗೆ ಬಂದರೆಂದರೆ ಉಳಿದುಕೊಳ್ಳುವುದು ಶಂಕರ್ ಮನೆಯಲ್ಲಿಯೇ.

Related Articles