ಸ್ಪೋರ್ಟ್ಸ್ ಮೇಲ್ ವರದಿ
ಕಳೆದ ಕೆಲವು ತಿಂಗಳ ಹಿಂದೆ ಒಂಟಿಗೈ ಆಟಗಾರ ಶಿವಶಂಕರ್ ಅವರಿಗೆ ಎಲ್ಲಿಯಾದರೂ ನೆಟ್ನಲ್ಲಿ ಬೌಲಿಂಗ್ ಮಾಡುವ ಅವಕಾಶ ನೀಡಿ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಮುಖರೊಬ್ಬರನ್ನು ಕೇಳಿಕೊಂಡೆ. ಅದಕ್ಕೆ ಅವರು ಪ್ರೋತ್ಸಾಹ ನೀಡುವ ಬದಲು ಶಿವನ ಆತ್ಮಸ್ಥೈರ್ಯ ಕುಗ್ಗುವಂತೆ ಮಾತನಾಡಿದರು.
ಆದರೆ ಶಿವ ಎಲ್ಲಿಯೂ ತಾನು ಒಂಟಿಗೈ ಆಟಗಾರನೆಂಬುದನ್ನು ತೋರಿಸಿದರೆ ಎರಡೂ ಕೈ ಇರುವವರಂತೆಯೇ ಆಡಿದ. ಸದ್ಯ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುತ್ತಿರುವ ವೈಎಸ್ಆರ್ ಕ್ರಿಕೆಟ್ ಟೂರ್ನಿಯಲ್ಲಿ ಮರ್ಚಂಟ್ಸ್ ಕ್ರಿಕೆಟ್ ಕ್ಲಬ್ ಪರ ಆಡಿದ ಶಿವ 37 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 56 ರನ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಅದು ಒಂದೇ ಕೈಯಲ್ಲಿ.
ಒಂಟಿಗೈ ಶಿವನ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರತಿಯೊಂದು ತಂಡದ ಪ್ರಮುಖರನ್ನು ನೆಟ್ನಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಯಾರೂ ಆ ಬಗ್ಗೆ ಆಸಕ್ತಿ ತೋರಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖರನ್ನೂ ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಈ ಬಾರಿಯೂ ಅದೇ ಪ್ರಯತ್ನ ಮುಂದುವರಿದಿದೆ.
‘ಏನ್ ಸರ್ ಈತ ಬಿದ್ದು ಕೈಕಾಲು ಮುರಿದುಕೊಂಡರೆ ಯಾರ್ ಗತಿ ಸರ್?, ಚೆಂಡು ಎಷ್ಟು ವೇಗವಾಗಿ ಬರುತ್ತದೆ ಗೊತ್ತಾ? ಒಂದೇ ಕೈಯಲ್ಲಿ ಫೀಲ್ಡಿಂಗ್ ಹೇಗೆ ಮಾಡ್ತಾನೆ?, ಇವನಿಗೆ ಬೇಕಾದ ಬಲಗೈ ಇಲ್ಲ. ಕ್ಯಾಚ್ ಹೇಗೆ ತಗೊಳ್ತಾನೆ?‘ ಎಂದೆಲ್ಲ ವೇಸ್ಟ್ ಬಾಡಿಗಳಂತೆ ಮಾತನಾಡಿದರು. ಆದರೆ ಶಿವ ತಾನೇನೆಂಬುದನ್ನು ತೋರಿಸಿದ್ದಾರೆ. ಸದ್ಯದಲ್ಲೇ ದಕ್ಷಿಣ ವಲಯ ಪಂದ್ಯವನ್ನಾಡಲಿದ್ದಾರೆ. ಸಾಮಾನ್ಯರ ಚೆಂಡನ್ನು ಬೌಂಡರಿಗೆ ಅಟ್ಟುವ ಅಥವಾ ಬೌಂಡರಿಯನ್ನು ದಾಟಿಸಿ ಸಿಕ್ಸರ್ ದಾಖಲಿಸುವ ಸಾಮರ್ಥ್ಯಹೊಂದಿರುವ ಶಿವನ ಮನೋಬಲವನ್ನು ಹೆಚ್ಚಿಸಬೇಕಾಗಿದೆ. ಬರೇ ಹಣಕ್ಕಾಗಿ ಕ್ರಿಕೆಟ್ ಆಡುವವರಿಗೆ ಕಾಣುವುದು ಶಿವನ ಒಂದು ಕೈ ಮಾತ್ರ. ಆದರೆ ಮಾನವೀಯತೆ ಇರುವವರಿಗೆ ಶಿವನ ಒಂದೇ ಕೈಯಲ್ಲಿ ಎರಡೂ ಕೈಯನ್ನು ಕಾಣುತ್ತಾರೆ. ಕ್ರಿಕೆಟ್ನಲ್ಲೇ ಬದುಕನ್ನು ಕಾಣಬೇಕೆಂಬ ಒಂಟಿಗೈ ಆಟಗಾರನಿಗೆ ಸ್ಪೋರ್ಟ್ಸ್ ಮೇಲ್ ಯಾವತ್ತೂ ಪ್ರೋತ್ಸಾಹ ನೀಡುತ್ತಿರುತ್ತದೆ. ಅನುಕಂಪ ಬೇಡ, ಅವಕಾಶ ಕೊಟ್ಟು ನೋಡಿ…