ಬ್ರಿಸ್ಬೇನ್:
ಆರಂಭಿಕ ಆಟಗಾರ ಶಿಖರ್ ಧವನ್(76) ಹಾಗೂ ದಿನೇಶ್ ಕಾರ್ತಿಕ್(30) ಅವರ ಸ್ಪೋಟಕ ಬ್ಯಾಟಿಂಗ್ ಹೊರತಾಗಿಯೂ ಭಾರತ ತಂಡ(169) ಮೊದಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ(158) ತಂಡದ ಎದುರು ಮಳೆಯಿಂದಾಗಿ(ಡೆಕ್‌ವರ್ತ್ ಲೂಯಿಸ್) ಸೋಲು ಅನುಭವಿಸಿತು.
ಮ್ಯಾಕ್ಸವೆಲ್ ಸ್ಪೋಟಕ ಬ್ಯಾಾಟಿಂಗ್ ಹಾಗೂ ಪಂದ್ಯದ ಕೊನೆಯ ಓವರ್‌ನಲ್ಲಿ ಸ್ಟೋನಿಸ್ ಅವರ ಬುದ್ಧಿವಂತಿಕೆಯ ಬೌಲಿಂಗ್ ನಿಂದ ಕೊನೆಯ ಕ್ಷಣದಲ್ಲಿ ಆಸೀಸ್ ಕೇವಲ ನಾಲ್ಕು ರನ್ ಗಳಿಂದ ಗೆಲುವಿನ ನಗೆ ಬೀರಿತು. ಇದರೊಂದಿಗೆ ಸತತ ಗೆಲುವಿನೊಂದಿಗೆ ಉತ್ಸಾಹದಲ್ಲಿದ್ದ ಟೀಂ ಇಂಡಿಯಾಗೆ ಕಾಂಗರೂಗಳು ಬ್ರೇಕ್ ಹಾಕಿದರು.
ಇಲ್ಲಿನ ಗಬ್ಬಾ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 17 ಓವರ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು. ಈ ವೇಳೆ ಬಂದ ಕಾರಣ ತೀರ್ಪುಗಾರರು ಡೆಕ್ ವರ್ತ್ ಲೂಯಿಸ್ ಅನ್ವಯ ಪಂದ್ಯವನ್ನು 17 ಓವರ್ ಗಳಿಗೆ ಸೀಮಿತ ಮಾಡಿದರು. ಈ ಹಿನ್ನಲೆಯಲ್ಲಿ ಭಾರತಕ್ಕೆೆ 17 ಓವರ್‌ಗಳಿಗೆ 174 ರನ್ ಗುರಿ ನೀಡಲಾಯಿತು.
ಆಸ್ಟ್ರೇಲಿಯಾ ಪರ ಸ್ಪೋಟಕ ಬ್ಯಾಟಿಂಗ್ ಮಾಡಿದ ಗ್ಲೇನ್ ಮ್ಯಾಕ್ಸವೆಲ್ 24 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ನೊಂದಿಗೆ 46 ರನ್ ಗಳಿಸಿದರು. ಇವರ ಜತೆಗೆ, ಕ್ರೀಸ್ ಲೀನ್ 20 ಎಸೆತಗಳಲ್ಲಿ 37 ರನ್, ಸ್ಟೋನಿಸ್ 19 ಎಸೆತಗಳಿಗೆ 33 ಹಾಗೂ ನಾಯಕ ಪಿಂಚ್ 27 ರನ್ ಗಳಿಸಿದರು. ಭಾರತದ ಪರ ಕೃನಾಲ್ ಪಾಂಡ್ಯ ಹಾಗೂ ಖಲೀಲ್ ಯಾದವ್ ದುಬಾರಿ ಆದರು. ತಲಾ ನಾಲ್ಕು ಓವರ್ ಗಳಿಗೆ ಕೃನಾಲ್ 55 ರನ್ ನೀಡಿದರೆ, ಖಲೀಲ್ 42 ರನ್ ನೀಡಿದರು. ಕುಲ್ದೀಪ್ ಯಾದವ್ ನಾಲ್ಕು ಓವರ್‌ಗಳಿಗೆ 24 ರನ್ ನೀಡಿ ಎರಡು ವಿಕೆಟ್ ಪಡದರು.
ನಂತರ, ಗುರಿ ಬೆನ್ನತ್ತಿದ ಭಾರತಕ್ಕೆೆ ಆರಂಭಿಕರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ 35 ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿತು. ಉಪ ನಾಯಕ ರೋಹಿತ್ ಶರ್ಮಾ ಕೇವಲ ಏಳು ರನ್ ಗಳಿಸಿ ಬೆಹ್ರನ್ ಡ್ರೊಪ್ ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ರಾಹುಲ್ 13 ರನ್‌ಗೆ ಸುಸ್ತಾದರು. ಇವರ ಹಿಂದೆಯೇ ನಾಯಕ ವಿರಾಟ್ ಕೊಹ್ಲಿ(4) ಜಂಪಾಗೆ ಔಟ್ ಆದರು.
ಒಂದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ ಎದೆಗುಂದದೆ ಬ್ಯಾಟಿಂಗ್ ಮಾಡಿದ ಧವನ್, ಆಸೀಸ್ ಬೌಲರ್‌ಗಳಿಗೆ ಬೆವರಿಳಿಸಿದರು. ಆಡಿದ 42 ಎಸೆತಗಳಿಗೆ ಎರಡು ಸಿಕ್ಸರ್ ಹಾಗೂ 10 ಬೌಂಡರಿಯೊಂದಿಗೆ ಒಟ್ಟು 76 ರನ್ ಗಳಿಸಿ ತಂಡವನ್ನು 100ರ ಗಡಿ ದಾಟಿಸಿದರು. ನಂತರ, 13ನೇ ಓವರ್‌ನಲ್ಲಿ ಸ್ಟಾನ್ಲೇಕ್ ಗೆ ವಿಕೆಟ್ ಒಪ್ಪಿಸಿದರು.
105 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆೆ ಸಿಲುಕಿದ ಭಾರತಕ್ಕೆೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ ಜೋಡಿ ನೆರವಾಯಿತು. ಈ ಜೋಡಿ ಐದನೇ ವಿಕೆಟ್‌ಗೆ 51 ರನ್‌ಗಳ ಜತೆಯಾಟ ತಂಡವನ್ನು ಗೆಲುವಿನ ಸಮೀಪ ತಲುಪಿಸಲು ಸಾಧ್ಯವಾಯಿತು. 15 ಎಸೆತಗಳಿಗೆ 20 ಗಳಿಸಿ ಪಂತ್ ಔಟಾದರೆ, 13 ಎಸೆತಗಳಿಗೆ 30 ರನ್ ಗಳಿಸಿದ ದಿನೇಶ್ ಕಾರ್ತಿಕ್, ಕೊನೆಯ ಓವರ್‌ವರೆಗೂ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ(ಡಿವಿಎಸ್ ಪ್ರಕಾರ) ಕೇವಲ ನಾಲ್ಕು ರನ್ ಗಳಿಂದ ಸೋಲು ಒಪ್ಪಿಕೊಂಡಿತು.