ಆರ್.ಕೆ.ಆಚಾರ್ಯ ಕೋಟ.
“ರಿಯಲ್ ಫೈಟರ್ಸ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ),ಮಲ್ಪೆ” ಯವರ ಆಶ್ರಯದಲ್ಲಿ ಡಿಸೆಂಬರ್ 8 ಹಾಗೂ 9ರಂದು ನಡೆದ 2 ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟದ ಪ್ರಶಸ್ತಿಯನ್ನು “ಜೈ ಕರ್ನಾಟಕ” ಬೆಂಗಳೂರು ತಂಡ ಗೆದ್ದುಕೊಂಡಿತು.
ಮಲ್ಪೆಯ ಗಾಂಧಿ ಶತಾಬ್ಧಿ ಶಾಲಾ ಮೈದಾನದಲ್ಲಿ ನಡೆದ ಈ ಪಂದ್ಯಾಕೂಟದಲ್ಲಿ ರಾಜ್ಯದ ವಿವಿಧೆಡೆಯಿಂದ 16 ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದ ಕುತೂಹಲಕಾರಿ ಹಣಾಹಣಿಗಳ ಬಳಿಕ
ಜೈ ಕರ್ನಾಟಕ,ಸೀಶೋರ್ ನ್ಯಾಶ್,ಸಾಗರ್ ಜಾನ್ಸನ್ ಫಕೀರನ ಕಟ್ಟೆ,ಹಾಸನಾಂಬಾ,ಪರಶುರಾಮ(ಹಾರ್ಬರ್ ) ರಿಯಲ್ ಫೈಟರ್ಸ್,ಎ.ಕೆ ಉಡುಪಿ, ಟಿ 10 ಕೈಕಂಬ ತಂಡಗಳು ಕ್ವಾರ್ಟರ್ ಫೈನಲ್ ನಲ್ಲಿ ಸೆಣಸಾಡಿದ್ದವು.
ಸೆಮಿಫೈನಲ್ ಗೆ ಪ್ರವೇಶ ಕಂಡ ಜೈ ಕರ್ನಾಟಕ ತಂಡ ಸಾಗರ್ ಜಾನ್ಸನ್ ಫಕೀರನಕಟ್ಟೆ ತಂಡವನ್ನು ಸೋಲಿಸಿ,ಸೀಶೋರ್ ನ್ಯಾಶ್ ಪರಶುರಾಮ್ ಹಾರ್ಬರ್ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿದ್ದವು.
ಕೊನೆಯಲ್ಲಿ ಕುತೂಹಲಕಾರಿಯಾಗಿ ಸಾಗಿದ ಫೈನಲ್ ನಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಜೈ ಕರ್ನಾಟಕ ತಂಡ ಪ್ರಮಿತ್ ರವರ ಉಪಯುಕ್ತ 13 ರನ್ ಗಳ ನೆರವಿನಿಂದ 4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 31 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತು. ಬೆನ್ನತ್ತಿದ ಸೀಶೋರ್ ನ್ಯಾಶ್ ತಂಡ ಆರಂಭಿಕ ಆಟಗಾರ ಜಾನ್ ರವರ 13ರನ್ ಗಳ ಹೊರತಾಗಿಯೂ 2 ವಿಕೆಟ್ ಕಳೆದುಕೊಂಡು 27 ರನ್ ಗಳಿಸಲಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು.
“ಮೊಹ್ಸಿನ್ ಮ್ಯಾಜಿಕ್ ಸ್ಪೆಲ್”
ಕೊನೆಯ ಓವರ್ ನಲ್ಲಿ 8 ರನ್ ಅಗತ್ಯವಿದ್ದ ಸಂದರ್ಭದಲ್ಲಿ ಜೈ ಕರ್ನಾಟಕದ ಪರವಾಗಿ ದಾಳಿಗಿಳಿದ ಮೊಹ್ಸಿನ್ ಕೇವಲ 2 ರನ್ ನೀಡಿ ಅಮೂಲ್ಯ 2 ವಿಕೆಟ್ ಉರುಳಿಸಿ ತಂಡಕ್ಕೆ 6 ರನ್ ಗಳ ಅದ್ಭುತ ಗೆಲುವನ್ನು ತಂದುಕೊಟ್ಟರು.ಅರ್ಹವಾಗಿ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪಾತ್ರರಾದರು. ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಪ್ರಮಿತ್ ರವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ,ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಸಾಗರ್
ಜಾನ್ಸನ್ ನ ಸಲೀಂ ಅಸ್ಲಾಂ ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಅತ್ಯಧಿಕ ವಿಕೆಟ್ ಉರುಳಿಸಿದ ನ್ಯಾಶ್ ನ ಅಪೆಕ್ಸ್ ಬೆಸ್ಟ್ ಬೌಲರ್ ಪ್ರಶಸ್ತಿಗೆ ಭಾಜನರಾದರು.
ವಿಜಯೀ ಜೈ ಕರ್ನಾಟಕ ತಂಡ ಆಕರ್ಷಕ ಟ್ರೋಫಿಯ ಸಹಿತ 2,22,000 ರೂ ನಗದು, ಹಾಗೂ ರನ್ನರ್ಸ್ ಸೀಶೋರ್ ನ್ಯಾಶ್ 1,11,000 ರೂ ನಗದು ಸಹಿತ ಆಕರ್ಷಕ ಟ್ರೋಫಿಯನ್ನು ಪಡೆಯಿತು. ಟೂರ್ನಿಯ ನೇರ ಪ್ರಸಾರವನ್ನು ಗಿರೀಶ್ ರಾವ್ ರವರ “ಕ್ರಿಕ್ ಸೇ” ಸೊಗಸಾಗಿ ಬಿತ್ತರಿಸಿದರೆ, ಪ್ರಶಾಂತ್ ಅಂಬಲಪಾಡಿ,ವಿನಯ್ ಉದ್ಯಾವರ,ಜಾಕಿರ್ ಹುಸೇನ್ ಹಾಗೂ ಅಲ್ಫಾಝ್ ಹೊನ್ನಾಳ ವೀಕ್ಷಕ ವಿವರಣೆಯನ್ನು ಹಾಗೂ ತೀರ್ಪುಗಾರರಾಗಿ
ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಹಾಗೂ ಸಂಗಡಿಗರು ಕಾರ್ಯನಿರ್ವಹಿಸಿದರು…