Friday, November 22, 2024

ಟೆನ್ನಿಸ್ ಬಾಲ್ ಕ್ರಿಕೆಟ್ ನ ಎವರ್ ಗ್ರೀನ್ ಆಟಗಾರ -ನಾಗೇಶ್ ಸಿಂಗ್

ಆರ್.ಕೆ.ಆಚಾರ್ಯ

ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಸುವರ್ಣ ಇತಿಹಾಸವನ್ನು ಬರೆದ ತಂಡ “ಜೈ ಕರ್ನಾಟಕ” ಬೆಂಗಳೂರು.ಕನ್ನಡ ನಾಡಿನ ಈ ಮಣ್ಣಿನಲ್ಲಿ ಆಲದ ಮರದಂತೆ ಬೇರೂರಿಬಿಟ್ಟಿದೆ ಜೈ ಕರ್ನಾಟಕದ ತಲೆಮಾರು.

ಬರೋಬ್ಬರಿ 4 ನೇ ತಲೆಮಾರಿನ ಆಟಗಾರರು ಈಗಿನ ತಂಡದಲ್ಲಿ ನಿರ್ವಹಣೆ ತೋರುತ್ತಿರುವುದು ಹಿರಿಯ ತಂಡದ ಹಿರಿಮೆಗೆ ಗರಿಮೆಯಿದ್ದಂತೆ.

ಜೈ ಕರ್ನಾಟಕ ತಂಡ ಒಂದು ಕುಟುಂಬದಂತೆ.ಒಂದೇ ಕುಟುಂಬದ ಅವಳಿ ಸಹೋದರರು ಕೂಡ ಈ ತಂಡವನ್ನು ಪ್ರತಿನಿಧಿಸಿರುವುದು ಉಲ್ಲೇಖನಿಯ.ದಂತಕಥೆಗಳಾದ ಮನೋಹರ್-ಬಾಬು,ರಾಜೇಶ್-ಕುಮ್ಮಿ ಯಂತಹ ಸಹೋದರರು ತಂಡದಲ್ಲಿದ್ದರೆ, ಒಂದೇ ಮನೆಯ 4 ಸಹೋದರರು “ಜೈ ಕರ್ನಾಟಕ ” ತಂಡವನ್ನು ಪ್ರತಿನಿಧಿಸಿರುವುದು ಕ್ರಿಕೆಟ್ ವಲಯದಲ್ಲಿ ಅಪೂರ್ವ. ಆ ನಾಲ್ಕು ಆಟಗಾರರು ನಾಗೇಶ್ ಸಿಂಗ್,ಭಗವಾನ್ ಸಿಂಗ್,ಅಂಬರೀಶ್ ಸಿಂಗ್ ಹಾಗೂ ಅನೀಷ್.
ಪ್ರಾರಂಭದ ದಿನಗಳಲ್ಲಿ(1988-96) ಇಂದಿರಾ ನಗರದ “ಕ್ಲಾಸಿಕ್ ಕ್ರಿಕೆಟರ್ಸ್” ತಂಡವನ್ನು ಪ್ರತಿನಿಧಿಸುತ್ತಿದ್ದ ನಾಗೇಶ್ ಸಿಂಗ್, ಅದ್ಭುತ ಆಲ್ ರೌಂಡರ್ ಪ್ರದರ್ಶನ ತೋರುತ್ತಿರುವ ಸಮಯದಲ್ಲಿ, ಪ್ರಾಕ್ಟೀಸ್ ಗಾಗಿ “ಹೆಚ್.ಎ.ಎಲ್” ಗ್ರೌಂಡ್ ನಲ್ಲಿ ಅಭ್ಯಸಿಸುತ್ತಿರುವುದನ್ನು ಗಮನಿಸಿದ ಟೆನ್ನಿಸ್ ಬಾಲ್ ನ ದಂತಕಥೆ HAL ನ ಉದ್ಯೋಗಿ ಮನೋಹರ್ ರವರ ಗಮನಕ್ಕೆ ನಾಗೇಶ್ ಸಿಂಗ್  ಬರುತ್ತಾರೆ. 1996 ರಿಂದ ಜೈ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಸುವರ್ಣಾವಕಾಶ ಲೂಯಿ ಭಾಯ್ ಪಾಲಿಗೆ ಬಂದೊದಗುತ್ತದೆ.
 ಚಮತ್ಕಾರಿ ದಿಗ್ಗಜ ಬೌಲರ್ ಗಳಾದ ಮನೋಹರ್,ಮಂಜು,ಮೆರಿನ್ ಅವರ ಜೊತೆ ಅದ್ಭುತ ಬೌಲಿಂಗ್ ಪ್ರದರ್ಶನ ತೋರುತ್ತಾ, ಕರಾವಳಿ ಸೇರಿದಂತೆ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ರಾಜ್ಯಾದ್ಯಂತ ಜೈ ಕರ್ನಾಟಕ ತಂಡ,ಮತ್ತು ಆಟಗಾರರು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿರುವುದು ತಂಡಕ್ಕೆ ಹೆಮ್ಮೆಯ ವಿಚಾರ. ಕ್ರಮೇಣ ಬೌಲಿಂಗ್ ಜೊತೆ ಬ್ಯಾಟಿಂಗಲ್ಲೂ ಮಿಂಚತೊಡಗಿದ ಕುಳ್ಳನೆಯ ವಾಮನಮೂರ್ತಿ, ಅಂದಿನ ದಾಖಲೆಯ 38 ಸರಣಿ ಶ್ರೇಷ್ಟ ಪ್ರಶಸ್ತಿ ವಿಜೇತ ಆಟಗಾರ ರಾಜೇಶ್ ರವರ ಜೊತೆ ಕೂಡ ಇನ್ನಿಂಗ್ಸ್ ಆರಂಭಿಸಿರುವರು.2009 ರ ನಂತರ ಲೆದರ್ ಬಾಲ್ ಲೀಗ್ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದ ನಾಗೇಶ್ ರವರು ಮತ್ತೆ 2016 ರಲ್ಲಿ ತಂಡದಲ್ಲಿ ಮತ್ತೆ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.ಇಂದಿಗೂ ನವ ಯುವಕರನ್ನು ನಾಚಿಸುವ ಪ್ರದರ್ಶನ ನೀಡುತ್ತಾ,ಒಂದಿನಿತು ಸುಸ್ತಾಗದಂತೆ ಕಾಣುವ ನಾಗೇಶ್ ಭಾಯ್ ಟೆನ್ನಿಸ್ ಕ್ರಿಕೆಟ್ ನ ಎವರ್ ಗ್ರೀನ್ ಆಟಗಾರ.
ಪ್ರಸ್ತುತ ಯುವ ಆಟಗಾರರಿಗಾಗಿ ತಂಡದಲ್ಲಿ ಜಾಗ ಬಿಟ್ಟು ಕೊಟ್ಟಿದ್ದರೂ,ರಾಜ್ಯದ ಪ್ರತಿಷ್ಟಿತ ತಂಡಗಳು 50 ರ ಹರೆಯದ ನಾಗೇಶ್ ರವರಿಗೆ ಬುಲಾವ್ ನೀಡುತ್ತಿರುವುದು ಅದ್ಭುತ ಪ್ರದರ್ಶನದ ಕಾರಣ,ಅಧಮ್ಯ ಉತ್ಸಾಹಿ,ಜೀವನದುದ್ದಕ್ಕೂ ಕ್ರಿಕೆಟ್ ಆರಾಧಿಸಿದ ಜೀವ,ಎಲ್ಲಾ ತಂಡಗಳ ಜೊತೆಗೂ ಅತ್ಯುತ್ತಮ ಬಾಂಧವ್ಯ ಹೊಂದಿರುವ ಇವರು ಇಂದಿಗೂ ಪ್ರತಿಷ್ಟಿತ ಪಂದ್ಯಾಟಗಳಲ್ಲಿ ಅಂಪಾಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗ ಪಡೆದಿರುವ,ಅಜಾತಶತ್ರು, ಪಾದರಸದ ವ್ಯಕ್ತಿತ್ವದ ಆಟಗಾರ “ನಾಗೇಶ್ ಸಿಂಗ್”ರವರಿಗೆ, ಕನ್ನಡದ ಮೊತ್ತಮೊದಲ ಕ್ರೀಡಾ ವೆಬ್ ಸೈಟ್
www.wordpress-451521-1958220.cloudwaysapps.com ವತಿಯಿಂದ ಶುಭಾಶಯಗಳು…

Related Articles