ಸ್ಪೋರ್ಟ್ಸ್ ಮೇಲ್ ವರದಿ
ಡಿಎನ್ಐ ಹೋಮ್ ಥಿಯೇಟರ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ 110 ರನ್ಗಳ ಬೃಹತ್ ಅಂತರದಲ್ಲಿ ಜಯ ಗಳಿಸಿ ಆಳ್ವಾಸ್ ಮೂಡಬಿದಿರೆ ತಂಡ ಪ್ರತಿಷ್ಠಿತ ಟಾರ್ಪೆಡೋಸ್ ಟಿ10 ಎಲೈಟ್ ಕ್ರಿಕೆಟ್ ಚಾಂಪಿಯನ್ಷಿಪ್ ಗೆದ್ದುಕೊಂಡಿದೆ. ಕಾರ್ಪೊರೇಟ್ ವಿಭಾಗದಲ್ಲಿ ಇಂಡಿಯನ್ ಪೋರ್ಟ್ ಚಾಂಪಿಯನ್ ಪಟ್ಟ ತನ್ನದಾಸಿಕೊಂಡಿತು.
ಪಣಂಬೂರಿನ ಎನ್ಎಂಪಿಟಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಲಾಲ್ ಸಚಿನ್ ಅವರ ಅರ್ಧ ಶತಕ (50)ದ ನೆರವಿನಿಂದ ಮೂಡಬಿದಿರೆಯ ತಂಡ 10 ಓವರ್ಗಳಲ್ಲಿ ಸವಾಲಿನ 134 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಡಿಎನ್ಐ ಹೋಮ್ ಥಿಯೇಟರ್ ರನ್ ಗಳಿಸುವುದಕ್ಕಿಂತ ವೇಗವಾಗಿ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ಕೇವಲ 24 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಶ್ರೀಷ ಆಚಾರ್ಯ 9 ರನ್ಗೆ 5 ವಿಕೆಟ್ ಗಳಿಸಿ ನಲ್ ಪಂದ್ಯದ ಪಂದ್ಯಶ್ರೇಷ್ಠ ಹಾಗೂ ಟೂರ್ನಿಯ ಉತ್ತಮ ಬೌಲರ್ ಗೌರವಕ್ಕೆ ಪಾತ್ರರಾದರು. ಆಳ್ವಾಸ್ನ ಲಾಲ್ ಸಚಿನ್ ಶ್ರೇಷ್ಠ ಬ್ಯಾಟ್ಸ್ಮನ್ ಗೌರವ ಗಳಿಸಿದರು. ವಿಜೇತ ತಂಡ 1 ಲಕ್ಷ ರೂ. ನಗದು ಬಹುಮಾನ ಗೆದ್ದುಕೊಂಡಿತು. ಬೆಳಿಗ್ಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ಬೆದ್ರಾ ಬುಲ್ಸ್ ವಿರುದ್ಧ ಗೆದ್ದು ಸೆಮಿಫೈನಲ್ ತಲುಪಿದರೆ, ಡಿಎನ್ಐ ತಂಡ ಬಲಿಷ್ಠ ಇಂಡಿಯನ್ ಪೋರ್ಟ್ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತು ತಲುಪಿತ್ತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಂತಿಲ್ ಕುಮಾರ್, ಜಿಲ್ಲೆಗೆ ಉತ್ತಮ ಕ್ರಿಕೆಟ್ ಅಂಗಣ ಬೇಕಿದೆ, ಅದಕ್ಕಾಗಿ ಹಲವು ವರ್ಷಗಳಿಂದ ಸೂಕ್ತ ಸ್ಥಳ ನೋಡುತ್ತಿದ್ದಾರೆ, ಆದರೆ ವಿವಿಧ ಕಾರಣಗಳಿಂದಾಗಿ ಅದು ಕೈಗೂಡುತ್ತಿಲ್ಲ. ಆದರೆ ಈ ಬಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಎಂಆರ್ಪಿಎಲ್ನ ಮುಖ್ಯ ಜನರಲ್ ಮ್ಯಾನೇಜರ್ ಶರತ್ ಬುಡಾಳೆ, ಎನ್ಎಂಪಿಟಿಯ ಡೆಪ್ಯುಟಿ ಕನ್ಸರ್ವೇಟಿವ್ ಮತ್ತು ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಕ್ಯಾಪ್ಟನ್ ಎಸ್.ಆರ್. ಪಟ್ನಾಯಕ್, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯದ ಸಮನ್ವಯಕಾರ ಮನೋಹರ್ ಅಮೀನ್, ಮಾಜಿ ಎಂಎಲ್ಎ ಮೊಯ್ದೀನ್ ಬಾವಾ, ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಹಾಗೂ ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಾಜಿ ಕ್ರಿಕೆಟಿಗರಾದ ವಿಜಯ್ ಆಳ್ವಾ, ಉದಯ್ ಕುಮಾರ್ ವೈ, ಮಂಜುನಾಥ್ ಮಲ್ಯ ಹಾಗೂ ಯುವ ಪ್ರತಿಭೆ ಯಶ್ ಅವರನ್ನು ಸನ್ಮಾನಿಸಲಾಯಿತು. ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಗೌತಮ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕೆಪಿ ಸತೀಶ್ ವಂದಿಸಿದರು