Friday, April 19, 2024

ತಾಯಿ ಕೊನೆಯುಸಿರೆಳೆದ ಸುದ್ದಿಯ ನಡುವೆಯೂ ತಂಡಕ್ಕೆ ಉಸಿರಾಗಿದ್ದ ಜೊಸೆಫ್

ಸ್ಪೋರ್ಟ್ಸ್ ಮೇಲ್ ವರದಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಶನಿವಾರದ ಪಂದ್ಯದಲ್ಲಿ 11 ವರ್ಷಗಳ ಹಿಂದಿನ ದಾಖಲೆಯೊಂದು ಮುರಿಯಲ್ಪಟ್ಟಿತು. ಮುಂಬೈ ಇಂಡಿಯನ್ಸ್ ಪರ ಚೊಚ್ಚಲ ಪಂದ್ಯವನ್ನಾಡಿದ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಅಲ್ಝಾರಿ ಜೊಸೆಫ್  3.4 ಓವರ್‌ಗಳಲ್ಲಿ 1 ಮೇಡನ್ 12 ರನ್ ಹಾಗೂ 6 ವಿಕೆಟ್ ಗಳಿಸಿ ಪಂದ್ಯ ಒಂದರಲ್ಲೇ ಅತಿ ಹೆಚ್ಚು ವಿಕೆಟ್ ಗಳಿಸಿದ ಸಾಧನೆ ಮಾಡಿದರು.  ಸೊಹೈಲ್ ತನ್ವಿರ್  14 ರನ್ ಗೆ 6 ವಿಕೆಟ್ ಗಳಿಸಿದ್ದು ಐಪಿಎಲ್ ನಲ್ಲಿ ಇದುವರೆಗಿನ ದಾಖಲೆ ಆಗಿತ್ತು.

ಪ್ರತಿಯೊಬ್ಬರ ಬದುಕಿನಲ್ಲೂ ನೋವು, ನಲಿವು ಸಹಜವಾಗಿರುತ್ತದೆ. ಆದರೆ ಬದ್ಧತೆ ಹೊಂದಿರುವವರು ಮಾತ್ರ ಯಶಸ್ಸು ಕಾಣುತ್ತಾರೆ. ಎರಡು ತಿಂಗಳ ಹಿಂದೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ವಿಂಡೀಸ್ ಮನೆಯಂಗಣದಲ್ಲಿ  ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ. ಅಲ್ಝಾರಿ ಜೊಸೆಫ್  ಅವರ ತಾಯಿ ತೀರಿಕೊಂಡ ಸುದ್ದಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವನ್ನು ತಲಪುತ್ತದೆ. ಅಲ್ಝಾರಿಗೆ ಮನೆಗೆ ಪ್ರಯಾಣಿಸಲು ಅನುಮತಿ ನೀಡಲಾಗಿತ್ತು. ಆದರೆ  ಪಂದ್ಯವನ್ನು ಮುಗಿಸಿಯೇ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವೆ ಎಂದ ಅಲ್ಝಾರಿ 7 ರನ್ ಗಳಿಸಿದರಲ್ಲದೆ, ಇಂಗ್ಲೆಂಡ್‌ನ  ಎರಡು ವಿಕೆಟ್, ಗಳಿಸಿ ತಂಡ 10 ವಿಕೆಟ್‌ಗಳ ಜಯ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಮೂಲಕ ಅಲ್ಝಾರಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದರು. ಈ ಸುದ್ದಿಯನ್ನು ಕೇಳುತ್ತಲೇ ಫೀಲ್ಡಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ತಂಡದ ಆಟಗಾರರು ಸಂತಾಪ ಸೂಚಕವಾಗಿ ಕಪ್ಪುಪಟ್ಟಿ ಭರಿಸಿ ಆಡಿದರು. ವಿಂಡೀಸ್‌ನ ಎಂಟು ವಿಕೆಟ್ ಉರುಳಿದಾಗ ಅಲ್ಝಾರಿ ಅಂಗಣಕ್ಕಿಳಿದರು. ಆಗ ಇಂಗ್ಲೆಂಡ್ ತಂಡದ ಆಟಗಾರರು ಒಂದೆಡೆ ಸೇರಿ ಯುವ ಆಟಗಾರನಲ್ಲಿ ಧೈರ್ಯ ತುಂಬಿದರು, ಇಡೀ ಕ್ರೀಡಾಂಗಣವೇ ಎದ್ದು ನಿಂತು ಅಲ್ಝಾರಿ ಅವರ ಕ್ರೀಡಾ ಸ್ಪೂರ್ತಿಗೆ ಬೆಂಬಲ ಸೂಚಿಸಿತು. ಇಂಥ ಬದ್ಧತೆ, ತ್ಯಾಗ ಒಬ್ಬ ಕ್ರಿಕೆಟಿಗ ಜನರ ಮನಂದಂಗಣದಲ್ಲಿ ಸದಾ ಉಳಿಯುವಂತೆ ಮಾಡುತ್ತದೆ.
ಶ್ರೀಮಂತ ತಂಡ ಮುಂಬೈ ಇಂಡಿಯನ್ಸ್‌ನ ಬೌಲರ್ ನ್ಯೂಜಿಲೆಂಡ್‌ನ ಆ್ಯಡಂ ಮಿಲ್ನೆ ಅವರ ಅನುಪಸ್ಥಿತಿಯಲ್ಲಿ ಬೇರೇ ಬೌಲರ್‌ಗಳನ್ನು ಬದಲಾಯಿಸಬಹುದಿತ್ತು. ಆದರೆ ವೆಸ್ಟ್‌ಇಂಡೀಸ್‌ನ ಅಲ್ಝಾರಿಯ ಸಾಧನೆ ಹಾಗೂ ಬದ್ಧತೆ ಮುಂಬೈ ಇಂಡಿಯ್ಸ್ ತಂಡದ ಗಮನ ಸೆಳೆಯಿತು. ಬರೇ ಕ್ರಿಕೆಟ್ ಆಡುವುದು, ಹಣ ಮಾಡುವುದು ಗುರಿಯಾಗಬಾರದು. ಇಂಥ ಸ್ಫೂರ್ತಿಯ ಆಟಗಾರರಿಗೆ ಗೌರವ ನೀಡಿದರೆ ಆಂತಡದ ಘನತೆ ಹಾಗೂ ಆಟಗಾರರ ಗೌರವವೂ ಹೆಚ್ಚುತ್ತದೆ.

ದಾಖಲೆಯ ಹೆಜ್ಜೆ

ಅಲ್ಝಾರಿ ಜೊಸೆಫ್  ಅವರ ಕ್ರಿಕೆಟ್ ಬದುಕಿನ ಹೆಜ್ಜೆಯನ್ನು ಗಮನಿಸಿದಾಗ ಅಲ್ಲಿ ಯಶಸ್ಸಿನ ಹೆಜ್ಜೆಗಳೇ ಹೆಚ್ಚು ಮೂಡಿವೆ. 2015ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟ ಅಲ್ಝಾರಿ ಮೊದಲ ಪಂದ್ಯದಲ್ಲೇ 99 ರನ್‌ಗೆ 5 ವಿಕೆಟ್. ಎರಡನೇ ಪಂದ್ಯದಲ್ಲಿ  46ರನ್‌ಗೆ 7 ವಿಕೆಟ್ ಗಳಿಸಿ ಗಮನ ಸೆಳೆದರು. ಈ ಸಾಧನೆ ಅವರನ್ನು 2016ರ ಅಂಡರ್ 16 ವಿಶ್ವಕಪ್‌ನಲ್ಲಿ ವಿಂಡೀಸ್ ತಂಡದಲ್ಲಿ ಸ್ಥಾನ ಸಿಗುವಂತೆ ಮಾಡಿತು.ಒಟ್ಟು  ಆರು ಪಂದ್ಯಗಳಲ್ಲಿ 13 ವಿಕೆಟ್  ಕಿರಿಯ ವಿಶ್ವಕಪ್‌ನಲ್ಲಿ ವಿಂಡೀಸ್ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದರು. ಅಲ್ಲದೆ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಮೂರನೇ ಬೌಲರ್ ಎನಿಸಿದರು. ಅದೇ ವರ್ಷ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು, ಎರಡು ತಿಂಗಳ ಬಳಿಕ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪ್ರವೇಶಿಸಿದರು. ಟೆಸ್ಟ್‌ನಲ್ಲಿ 25 ಹಾಗೂ ಏಕದಿನದಲ್ಲಿ 24 ವಿಕೆಟ್ ಗಳಿಸಿರುವ ಅಲ್ಝಾರಿ ವಿಂಡೀಸ್‌ನ ‘ರವಸೆಯ ಯುವ ಆಟಗಾರ.

Related Articles