Friday, November 22, 2024

ಸಿಟ್ಟಿನ ಅಲೆಗೆ ಸಿಲುಕಿದ ಧೋನಿ!

ಸ್ಪೋರ್ಟ್ಸ್ ಮೇಲ್ ವರದಿ

‘ಕ್ಯಾಪ್ಟನ್ ಕೂಲ್‌‘ ಎಂದೇ  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜನಮನ್ನಣೆ ಪಡೆದಿರುವ ಭಾರತ ಕ್ರಿಕೆಟ್ ತಂಡದ ಸಹನೆಯ ಮೂರ್ತಿ ಮಹೇಂದ್ರ ಸಿಂಗ್  ಧೋನಿ, ಗುರುವಾರ ರಾತ್ರಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸ್ಟಿಟನ ಅಲೆಗೆ ಸಿಲುಕಿ ತಾಳ್ಮೆ ಕಳೆದುಕೊಂಡು ಅಂಗಣಕ್ಕಿಳಿದ ಘಟನೆ ನಡೆಯಿತು. ಧೋನಿಯ ಈ ವರ್ತನೆಗಾಗಿ ಪಂದ್ಯ ಶುಲ್ಕದಲ್ಲಿ ಶೇ. 50ರಷ್ಟು ದಂಡ ವಿಧಿಸಲಾಗಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು ಅಂತಿಮ ಓವರ್‌ನಲ್ಲಿ 18 ರನ್ ಗಳಿಸಬೇಕಾಗಿತ್ತು. ಬೆನ್ ಸ್ಟೋಕ್ಸ್ ಬೌಲರ್. ಸ್ಟ್ರೈಕರ್‌ನಲ್ಲಿ ರವೀಂದ್ರ ಜಡೇಜಾ ಮೊದಲ ಎಸೆತವನ್ನು ಎದುರಿಸುತ್ತ ಜಡೇಜಾ ಬೀಳುತ್ತಲೇ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು, ಅಷ್ಟರೊಳಗೆ ಸ್ಟೋಕ್ಸ್ ಕೂಡ ನೆಲಕ್ಕುರುಳಿದ್ದರು. ಎರಡನೇ ಎಸೆತ ನೋಬಾಲ್ ಒಂದು ರನ್. ಈ ಬಾರಿ  ಧೋನಿಗೆ ಸ್ಟ್ರೈಕ್ . 2 ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಧೋನಿ ಯಾರ್ಕರ್‌ಗೆ ಬಲಿಯಾಗಿ ಕ್ಲೀನ್ ಬೌಲ್ಡ್. ನಾಲ್ಕನೇ ಎಸೆತದಲ್ಲಿ ಮೈಕಲ್ ಸ್ಯಾಂಟ್ನರ್ 2 ರನ್ ಗಳಿಸಿದರು. ಆದರೆ ಅದು ನೋಬಾಲ್ ಎಂದು ಚೆನ್ನೈ  ತಂಡದ ಇಬ್ಬರೂ ಆಟಗಾರರು ವಾದ  ಮಾಡಿದರು. ಆದರೆ ಅಂಪೈರ್ ಅದಕ್ಕೆ ಪುರಸ್ಕಾರ ನೀಡಲಿಲ್ಲ.
ಆಗಲೇ ಧೋನಿಗೆ ಸಿಟ್ಟು ನೆತ್ತಿಗೇರಿತು. ಶಾಂತವಾದ ಕಡಲು ಇದ್ದಕ್ಕಿದ್ದಂತೆ ಅಬ್ಬರದ ಅಲೆಗಳನ್ನು ಸೃಷ್ಟಿಸುವಂತೆ ಧೋನಿ ಡಗೌಟ್‌ನಿಂದ ಕೈ ಮಾಡುತ್ತಲೇ ಅಂಗಣಕ್ಕೆಧಾವಿಸಿದರು. ಧೋನಿ ತಮ್ಮ ವಿರೋ‘ವನ್ನು ವ್ಯಕ್ತಪಡಿಸಬಹುದು, ಆದರೆ ಎಲ್ಲೆಯನ್ನು ಮೀರಿ ಅಂಗಣಕ್ಕೆ ಇಳಿಯುತ್ತಾರೆಂದು ಯಾರೂ ಊಹಿಸಿರಲಿಲ್ಲ. ಪಿಚ್ ಕಡೆಗೆ ಧಾವಿಸಿ ಬಂದ ಧೋನಿ ಅಂಪೈರ್ ಜತೆ ವಾದ ಮಾಡಿದರೂ ಅಂಪೈರ್ ನೋ ಬಾಲ್ ನೀಡಲಿಲ್ಲ. ವೈಡ್, ನೋಬಾಲ್ ಸೇರಿದಂತೆ ಏನೆಲ್ಲ ಎಸೆತಗಳನ್ನು ಎಸೆಯಲು ಸಾಧ್ಯವಿದೆಯೋ ಅವೆಲ್ಲವನ್ನೂ  ಎಸೆದ ಸ್ಟೋಕ್ಸ್ ಅವರ ಕೊನೆಯ ಎಸೆತದಲ್ಲಿ ಸ್ಯಾಂಟ್ನರ್ ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗೆ  ಧೋನಿಯ ತಾಳ್ಮೆಯ ಕಟ್ಟೆ ಒಡೆದು ಸಿಟ್ಟಿನಿಂದ ಅಥವಾ ವ್ಯಂಗ್ಯವಾಗಿ ಉತ್ತರಿಸಿದ್ದುಂಟು, ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ  ಮುಸ್ತಾಫಿಜೂರ್ ರೆಹಮಾನ್‌ಗೆ ಮುಂಗೈಯಿಂದ ತಿವಿದು ಪಂದ್ಯಶುಲ್ಕದ ಶೇ. 75 ಭಾಗವನ್ನು ದಂಡವಾಗಿ ನೀಡಿದ್ದರು. ಹೀಗೆ ಸಣ್ಣ ಪುಟ್ಟ ಸಂದರ್ಭರ್ಗಳಲ್ಲಿ ಧೋನಿ ತಮ್ಮ ತಾಳ್ಮೆಯನ್ನು ಕಳೆದುಕೊಂಡಿರುವುದಕ್ಕೆ ಹಲವಾರು ಉದಾಹರಣೆಗಳಿವೆ. ಆದರೆ ಇದೇ ಮೊದಲ ಬಾರಿ ಅಂಗಣಕ್ಕಿಳಿದು ಅಂಪೈರ್ ಜತೆ ನೋಬಾಲ್‌ಗಾಗಿ ವಾದ ನಡೆಸಿದರು. ಇದರಿಂದ ಚೆನ್ನೈ ‘ ಸೂಪರ್ ಕಿಂಗ್ಸ್ ತಂಡಕ್ಕೆ ಫೇರ್  ಪ್ಲೇನಲ್ಲಿ ಅಂಕ ಕಡಿಮೆಯಾಗಬಹುದು. ಧೋನಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಮೂಲ್ಯ 58 ರನ್ ಗಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು

Related Articles