Friday, November 22, 2024

ಫೀರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಕೊಹ್ಲಿಗೆ ಸತ್ವ ಪರೀಕ್ಷೆ

ನವದೆಹಲಿ: ಹ್ಯಾಟ್ರಿಕ್‌ ಗೆಲುವಿನ ಉತ್ಸಾಹದಲ್ಲಿ ತೇಲುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) 46ನೇ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಾಳೆ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಸೆಣಸಲು ಸಜ್ಜಾಗಿದೆ. ಇನ್ನೂ ತವರು ನೆಲದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತೊಂದು ಜಯದ ತುಡಿತದಲ್ಲಿದೆ.

ಕಿಂಗ್ಸ್‌ ಇಲೆವೆನ್‌ ವಿರುದ್ಧ ತವರು ನೆಲದಲ್ಲಿ ಹಾಗೂ ಜೈಪುರದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆರ್‌ಸಿಬಿ ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿದೆ. ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧದ ಕಳೆದ ಪಂದ್ಯದಲ್ಲಿ ಆರ್‌ಸಿಬಿ 81 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಎ.ಬಿ ಡಿವಿಲಿಯರ್ಸ್‌ ಹಾಗೂ ಮಾರ್ಕುಸ್ ಸ್ಟೋಯಿನಿಸ್‌ ಅದ್ಭುತ ಬ್ಯಾಟಿಂಗ್‌ ಮಾಡಿದ್ದರು. ಇದೇ ಆತ್ಮವಿಶ್ವಾಸದಲ್ಲಿರುವ ಆರ್‌ಸಿಬಿ ನಾಳೆ ಕಣಕ್ಕೆ ಇಳಿಯಲಿದೆ. ಮುಖ್ಯವಾಗಿ ಇದೇ ಅಂಗಳದಲ್ಲಿ ಆಡಿ ಬೆಳೆದ ನಾಯಕ ವಿರಾಟ್‌ ಕೊಹ್ಲಿಗೆ ಈ ಪಿಚ್‌ ಕುರಿತು ಹೆಚ್ಚು ಅರಿವಿದೆ. ಇದನ್ನು ನಾಳಿನ ಪಂದ್ಯದಲ್ಲಿ ಅಳವಡಿಸಿಕೊಳ್ಳಬಹುದು. ಕಳೆದ ಮೂರು ಪಂದ್ಯಗಳಲ್ಲಿ ಬೌಲಿಂಗ್‌ ವಿಭಾಗ ಸಾಕಷ್ಟು ಸುಧಾರಣೆ ಕಂಡಿದೆ. ಕೋಟ್ಲಾ ಮೈದಾನದಲ್ಲಿ ಪಿಚ್‌ ನಿಧಾನಗತಿಯಲ್ಲಿದ್ದು, ಅಲ್ಲಿನ ಪಿಚ್‌ಗೆ ತಕ್ಕಂತೆ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಬೌಲಿಂಗ್‌ ಕೋಚ್‌ ನೆಹ್ರಾ ಆರ್‌ಸಿಬಿ ಬೌಲರ್‌ಗಳಿಗೆ ಅಗತ್ಯ ಸಲಹೆಗಳನ್ನು ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿದ್ದಾರೆ. ಶಿಖರ್‌ ಧವನ್‌ ಬುದ್ಧಿವಂತಿಕೆಯ ಆಟ ಪ್ರದರ್ಶನ ತೋರುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಿಷಭ್‌ ಪಂತ್‌ ಸಮಯಕ್ಕೆ ತಕ್ಕಂತೆ ಬ್ಯಾಟ್‌ ಬೀಸುತ್ತಿದ್ದು, ಇದು ತಂಡಕ್ಕೆ ಲಾಭವಾಗಲಿದೆ.

ಎರಡೂ ತಂಡಗಳಲ್ಲಿ ಬೌಲಿಂಗ್‌ ವಿಭಾಗ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಡೆಲ್ಲಿಯಲ್ಲಿ ಕಗಿಸೋ ರಬಡಾ ಅತ್ಯಮೂಲ್ಯ ಬೌಲರ್‌ ಆಗಿದ್ದು, ಅವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುವಲ್ಲಿ ಉಳಿದವರು ವಿಫಲರಾಗಿದ್ದಾರೆ. ಸಂದೀಪ್‌ ಲಾಮಿಚನ್ನೆ ಕಳೆದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದರು.

ಪ್ರಸಕ್ತ ಟೂರ್ನಿಯ ಆರಂಭದ ಸತತ ಆರು ಪಂದ್ಯಗಳಲ್ಲಿ ಸೋಲಿನಿಂದ ನೋವು ಅನುಭವಿಸಿದ್ದ ಆರ್‌ಸಿಬಿ ಆಟಗಾರರು, ಕಳೆದ ಹ್ಯಾಟ್ರಿಕ್‌ ಜಯದಿಂದ ಎಲ್ಲ ಆಟಗಾರರು ಆತ್ಮವಿಶ್ವಾಸದಲ್ಲಿ ಇದ್ದಾರೆ. ಜತಗೆ, ಪಂದ್ಯದಲ್ಲಿ ಒತ್ತಡ ವಿಲ್ಲದೇ ಪ್ರದರ್ಶನ ತೋರುತ್ತಿದ್ದಾರೆ. ನಾಳೆಯ ಪಂದ್ಯದಲ್ಲೂ ಕೂಡ ಇದೇ ಲಯ ಆರ್‌ಸಿಬಿ ಮುಂದುವರಿಸುವ ನಿರೀಕ್ಷೆಯಲ್ಲಿದೆ.
ಡೆಲ್ಲಿ ಖಾತೆಯಲ್ಲಿ 14 ಅಂಕಗಳಿದ್ದು, ಪ್ಲೇಆಫ್‌ ಸನಿಹದಲ್ಲಿದೆ. ಆದರೆ, ಆರ್‌ಸಿಬಿ ಪ್ಲೇ ಆಫ್‌ ಹಾದಿ ಜೀವಂತವಾಗಿರಿಸಲು ಇನ್ನುಳಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸುವ ಅಗತ್ಯತೆ ಇದೆ.

Related Articles