Friday, November 22, 2024

ಏ.30ರ ಬಳಿಕ ಸ್ಮಿತ್‌ ರಾಯಲ್ಸ್‌ಗೆ ಅಲಭ್ಯ

ಜೈಪುರ:   ಇದೇ 30 ರಂದು ರಾಯಲ್‌ ಚಾಲೆಂಜರ್ಸ್ ವಿರುದ್ಧದ ಪಂದ್ಯದ ಬಳಿಕ  ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಅವರು ಪ್ರಸಕ್ತ ಆವೃತ್ತಿಯ  ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಮೇ.  30 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಗೆ ಆಸ್ಟ್ರೇಲಿಯಾ  ತಂಡ ಪೂರ್ವ ತಯಾರಿ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಸ್ಟೀವ್‌ ಸ್ಮಿತ್‌  ಆರ್‌ಸಿಬಿ  ಪಂದ್ಯದ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ. ಗುರುವಾರ ರಾತ್ರಿ ಕೊಲ್ಕತಾ ನೈಟ್‌  ರೈಡರ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ ಮೂರು ವಿಕೆಟ್‌ಗಳಿಂದ ಜಯ ಸಾಧಿಸಿದ ಬಳಿಕ  ಸ್ಮಿತ್‌ ಈ ಕುರಿತು ಸ್ಪಷ್ಟಪಡಿಸಿದ್ದಾರೆ.

ರಾಜಸ್ಥಾನ್‌  ರಾಯಲ್ಸ್ ತಂಡದ ಸ್ಟಾರ್‌ ಆಲ್ರೌಂಡರ್‌ಗಳಾದ ಬೆನ್‌ ಸ್ಟೋಕ್ಸ್‌ ಹಾಗೂ ಜೋಫ್ರ ಆರ್ಚರ್  ಅವರು ಇನ್ನುಳಿದ ಮೂರು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ವಿಶ್ವಕಪ್‌ ಹಿನ್ನೆಲೆಯಲ್ಲಿ  ಇಂಗ್ಲೆಂಡ್‌ ತಂಡದ ತರಬೇತಿ ಶಿಬಿರದಲ್ಲಿ ಫಾಲ್ಗೊಳ್ಳುವ ಸಲುವಾಗಿ ಇವರಿಬ್ಬರು  ಸ್ವದೇಶಕ್ಕೆ ತೆರಳಲಿದ್ದಾರೆ.

” ಈ ಪಂದ್ಯದ ಬಳಿಕ  ಜೋಫ್ರ ಆರ್ಚರ್‌ ಹಾಗೂ ಬೆನ್‌ ಸ್ಟೋಕ್ಸ್‌ ಅವರೂ ಇಂಗ್ಲೆಂಡ್‌ಗೆ ತೆರಳಲಿದ್ದಾರೆ.  ಇವರಿಬ್ಬರು ಆರ್‌ಆರ್‌ಗೆ ಮೌಲ್ಯಯುತ ಆಟಗಾರರಾಗಿದ್ದರು. ಅವರ ಅನುಪಸ್ಥಿತಿ ಕಾಡಲಿದೆ.  ನಾನು ಒಟ್ಟು 13 ಪಂದ್ಯಗಳನ್ನು ಈ ಆವೃತ್ತಿಯಲ್ಲಿ ಪೂರ್ಣಗೊಳಿಸಲಿದ್ದೇನೆ. ಆರ್‌ಸಿಬಿ  ವಿರುದ್ಧದ ಪಂದ್ಯದ ಬಳಿಕ ತವರಿಗೆ ತೆರಳುತ್ತಿದ್ದೇನೆ. ತಂಡದ ಇನ್ನಷ್ಟು ಗೆಲುವಿಗೆ  ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ” ಎಂದು ಪಂದ್ಯದ ಬಳಿಕ ತಿಳಿಸಿದ್ದಾರೆ.

ಗುರುವಾರ  ರಾತ್ರಿ ಕೆಕೆಆರ್‌ ನೀಡಿದ 176 ರನ್‌ ಗುರಿ ಬೆನ್ನತ್ತಿದ ರಾಜಸ್ಥಾನ್‌ ರಾಯಲ್ಸ್‌,  ರಿಯಾನ್‌ ಪರಾಗ್‌ ಅವರ ಕೌಶಲ್ಯಯುತ ಬ್ಯಾಟಿಂಗ್‌ನಿಂದ ಮೂರು ವಿಕೆಟ್‌ಗಳಿಂದ ಗೆಲುವು  ಪಡೆಯಿತು. ಇದರೊಂದಿಗೆ ಆರ್‌ಆರ್ ಪ್ರಸಕ್ತ ಟೂರ್ನಿಯಲ್ಲಿ ನಾಲ್ಕನೇ ಗೆಲವು ದಾಖಲಿಸಿತು.  ಅಲ್ಲದೇ, ಪ್ಲೇ ಆಫ್‌ ಹಾದಿಯನ್ನು ಜೀವಂತವಾಗಿಸಿತು.

ರಾಜಸ್ಥಾನ್‌  ರಾಯಲ್ಸ್‌ 13 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 98 ರನ್‌ ಗಳಿಸಿ  ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ 17 ವರ್ಷದ ಪರಾಗ್‌ ಅವರು ಒಂದು ಜೀವದಾನ  ಪಡೆದಿದ್ದರು. ನಂತರ ಅವರು 31 ಎಸೆತಗಳಲ್ಲಿ 47 ರನ್ ಸಿಡಿಸಿದ್ದರು. ಜತೆಗೆ, ಜೋಫ್ರ  ಆರ್ಚರ್‌ 12 ಎಸೆತಗಳಲ್ಲಿ 27 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

“ಗುರಿ  ಬೆನ್ನತ್ತುವಾಗ ಮಧ್ಯಮ ಕ್ರಮಾಂಕದಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಆದರೆ,  ರಿಯಾನ್‌ ಪರಾಗ್‌ ಆಕರ್ಷಕ ಪ್ರದರ್ಶನ ತೋರಿದರು. ಸಂಕಷ್ಟಕ್ಕೆ ಸಿಲುಕಿದ್ದ ವೇಳೆ  ಆರ್‌ಆರ್‌ಗೆ ಗೆಲುವು ತಂದುಕೊಟ್ಟರು. ಇವರ ಜತೆ ಶ್ರೇಯಸ್‌ ಗೋಪಾಲ್‌ ಹಾಗೂ ಆರ್ಚರ್ ಕೂಡ  ಉತ್ತಮ ಬ್ಯಾಟಿಂಗ್‌ ಮಾಡಿದರು.” ಎಂದು ಸ್ಮಿತ್‌ ಶ್ಲಾಘಿಸಿದರು.

Related Articles