ಢಾಕ:
ಮೆಹದಿ ಹಸನ್(12 ವಿಕೆಟ್) ಅವರ ಎರಡೂ ಇನಿಂಗ್ಸ್ಗಳಲ್ಲಿ ಮಾಡಿದ ಸ್ಪಿನ್ ಮೋಡಿ ಸಹಾಯದಿಂದ ಬಾಂಗ್ಲಾದೇಶ, ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 184 ರನ್ ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಬಾಂಗ್ಲಾ ಕ್ಲೀನ್ ಸ್ವೀಪ್ ಮಾಡಿಕೊಂಡಿತು.
ಪ್ರಥಮ ಇನಿಂಗ್ಸ್ ನಲ್ಲಿ ಬಾಂಗ್ಲಾದೇಶ 508 ರನ್ ಬೃಹತ್ ಮೊತ್ತ ದಾಖಲಿಸಿತ್ತು. ಇದಾದ ಬಳಿಕ, ಪ್ರಥಮ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಆಫ್ ಸ್ಪಿನ್ನರ್ ಮೆಹದಿ ಹಸನ್(7 ವಿಕೆಟ್) ಸ್ಪಿನ್ ಮೋಡಿಗೆ ನಲುಗಿ ಕೇವಲ 111 ರನ್‌ಗಳಿಗೆ ಸರ್ವ ಪತನವಾಯಿತು. ಶೀಮ್ರೊನ್ ಹೆಟ್ಮೇರ್(39) ಹಾಗೂ ಶೇನ್ ಡೌರಿಚ್(37) ಬಿಟ್ಟರೆ ಇನ್ನುಳಿದ ಬ್ಯಾಟ್ಸ್ ಮನ್‌ಗಳು ವಿಫಲರಾದರು.
ಬಳಿಕ ಫಾಲೋ ಆನ್‌ಗೆ ಸಿಲುಕಿದ ವೆಸ್ಟ್ ಇಂಡೀಸ್ ಮತ್ತೇ ದ್ವಿತೀಯ ಇನಿಂಗ್ಸ್ ಆರಂಭ ಮಾಡಿತು. ಶಿಮ್ರೊನ್ ಹೆಟ್ಮೇರ್(93) ಹಾಗೂ ಕೇಮರ್ ರೋಚ್(37*) ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್ ಮನ್‌ಗಳು ಈ ಇನಿಂಗ್ಸ್ ನಲ್ಲೂ ಕೂಡ ಅದೇ ರಾಗ ಅದೇ ತಾಳ ಎಂಬಂತೆ ಪೆವಿಲಿಯನ್ ಹಾದಿ ಹಿಡಿದರು.
ಬಾಂಗ್ಲಾದೇಶ ಪರ ಪ್ರಥಮ ಇನಿಂಗ್ಸ್ ನಲ್ಲಿ ಏಳು ವಿಕೆಟ್ ಪಡೆದಿದ್ದ ಮೆಹದಿ ಹಸನ್ ಈ ಇನಿಂಗ್ಸ್ ನಲ್ಲೂ ಐದು ವಿಕೆಟ್ ಪಡೆದು ಮಿಂಚಿದರು. ವೆಸ್ಟ್ ಇಂಡೀಸ್ ಪರ ಏಕಾಂಗಿ ಹೋರಾಟ ನಡೆಸಿದ ಶಿಮ್ರೊನ್ ಹೆಟ್ಮೇರ್ 92 ಎಸೆತಗಳಲ್ಲಿ ಒಂಬತ್ತು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 93 ರನ್ ಗಳಿಸಿ ಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದರು. ಇವರನ್ನು ಬಿಟ್ಟರೆ, ಕೇಮರ್ ರೋಚ್ ಅಜೇಯ 37 ರನ್ ಗಳಿಸಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ 59.2 ಓವರ್‌ಗಳಿಗೆ ತನ್ನೆೆಲ್ಲ ವಿಕೆಟ್ ಕಳೆದುಕೊಂಡು 213 ರನ್‌ಗಳಿಗೆ ಶಕ್ತವಾಯಿತು. ಇದರೊಂದಿಗೆ ಇನ್ನೂ ಎರಡು ದಿನ ಬಾಕಿ ಇರುವಂತೆಯೇ ಬಾಂಗ್ಲಾದೇಶ ಇನಿಂಗ್ಸ್ ಹಾಗೂ 184 ರನ್ ಗಳಿಂದ ಗೆಲುವು ಸಾಧಿಸಿತು.