ಮುಂಬೈ:
ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ಕಾರ್ಯಾಚರಣೆ ನಿರ್ದೇಶಕರಾಗಿ ಭಾರತ ತಂಡದ ಮಾಜಿ ಎಡಗೈ ವೇಗಿ ಜಹೀರ್ ಖಾನ್ ನೇಮಕಗೊಂಡಿದ್ದಾರೆ.
ಈ ಕುರಿತು ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದ್ದು, ಇಂದು ಪಿಂಕ್ ನಗರಿ ಜೈಪುರದಲ್ಲಿ ನಡೆಯುತ್ತಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ತಂಡದ ಮಾಲೀಕರಾದ ನೀತಾ ಅಂಬಾನಿ ಹಾಗೂ ಆಕಾಶ್ ಅಂಬಾನಿ ಅವರೊಂದಿಗೆ ಮಾಜಿ ವೇಗಿ ಜಹೀರ್ ಖಾನ್ ಕಾಣಿಸಿಕೊಂಡರು.
ಆ ಮೂಲಕ ತನ್ನ ಎರಡು ದಶಕಗಳ ಕ್ರಿಕೆಟ್ ವೃತ್ತಿ ಜೀವನದ ಅನುಭವವನ್ನು ಮುಂಬೈ ಇಂಡಿಯನ್ಸ್ ತಂಡದ ಯಶಸ್ಸಿಗೆ ಧಾರೆ ಎರೆಯಲಿದ್ದಾರೆ. 2009, 2010 ಹಾಗೂ 2014ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ 30 ಪಂದ್ಯಗಳಲ್ಲಿ ಆಡಿದ್ದ ಜಹೀರ್, ಒಟ್ಟು 29 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ತಂಡದಲ್ಲಿ ಹೊಸ ಜವಾಬ್ದಾರಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ದೇಶೀಯ ಯುವ ಆಟಗಾರರಿಗೆ ಪ್ರೋತ್ಸಾಹ ಹಾಗೂ ಉತ್ತಮ ಪ್ರದರ್ಶನ ಕಾಯ್ದುಕೊಂಡಿರುವ 18 ಆಟಗಾರರನ್ನು ಮುಂಬೈ ಇಂಡಿಯನ್ಸ್ ತಂಡ ಉಳಿಸಿಕೊಂಡಿದೆ. ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಇಶಾನ್ ಕಿಶಾನ್(ವಿ.ಕೀ), ಸೂರ್ಯ ಕುಮಾರ್ ಯಾದವ್, ಮಯಾಂಕ್ ಮಾರ್ಕಂಡೆ, ರಾಹುಲ್ ಚಹಾರ್, ಅನುಕುಲ್ ರಾಯ್, ಸಿದ್ದೇಶ್ ಲಾಡ್, ಆದಿತ್ಯ ತಾರೆ, ಕ್ವಿಂಟನ್ ಡಿ ಕಾಕ್, ಕಿರೊನ್ ಪೊಲಾರ್ಡ್, ಬೆನ್ ಕಟ್ಟಿಂಗ್, ಮಿಚೆಲ್ ಮೆಕ್ ಗ್ಲೆಂಗ್ಯಾಮ್, ಎವಿನ್ ಲೆವಿಸ್ ಆ್ಯಡಂ ಮಿಲ್ನೆ, ಜೇಸನ್ ಬೆಹ್ರೆನ್‌ಡೊರ್ಫ್ ಸೇರಿದಂತೆ 18 ಆಟಗಾರರು ಪ್ರಸ್ತುತ ತಂಡದಲ್ಲಿದ್ದಾರೆ.