ಸ್ಪೋರ್ಟ್ಸ್ ಮೇಲ್ ವರದಿ
ಈ ಕ್ರಿಕೆಟ್‌ನಲ್ಲಿ ವಿಚಿತ್ರ ದಾಖಲೆಗಳು ಸಂಭವಿಸುತ್ತಿರುತ್ತವೆ. ರನ್ ಹೊಡೆದರೂ ದಾಖಲೆ, ಹೊಡೆಯದಿದ್ದರೂ ದಾಖಲೆ, ಕ್ಲೀನ್ ಬೌಲ್ಡ್ ಆದರೂ ದಾಖಲೆ, ಆಗದಿದ್ದರೂ ದಾಖಲೆ. ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಎರಡೂ ಇನಿಂಗ್ಸ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಸಾಧನೆಗೆ ವಿರುದ್ಧವಾದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಆ ಮೂಲಕ ವೈಲ್ಯದ ನಡುವೆಯೂ ಮಾಧ್ಯಮಗಳ ಪಾಲಿನ ಆಹಾರವಾಗಿದ್ದಾರೆ.
ಕುದುರೆಯನ್ನು ನೀರಿರುವ ತನಕ ಕರೆದುಕೊಂಡು ಹೋಗಬಹುದು, ಆದರೆ ನೀರನ್ನು ಕುದುರೆಯೇ ಕುಡಿಯಬೇಕು. ರಾಹುಲ್ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ನಂಬಿಕೆ ಇಟ್ಟು, ಇಂಗ್ಲೆಂಡ್ ಟೆಸ್ಟ್‌ನಲ್ಲೇ ವಿರೋಧಗಳ ನಡುವೆಯೂ ಆಡುವ ಹನ್ನೊಂದರಲ್ಲಿ ಅವಕಾಶ ಕಲ್ಪಿಸಿದ್ದರು. ಅಲ್ಲಿಯೂ ಮಿಂಚದ ರಾಹುಲ್ ಅವರನ್ನು ಮತ್ತೆ ಆಸೀಸ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಯಿತು. ಆದರೆ ಆರಂಭಿಕ ಆಟಗಾರನ ಕೊಡುಗೆ ಮಾತ್ರ ತೃಪ್ತಿದಾಯಕವಾಗಿರಲಿಲ್ಲ.
ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 44 ರನ್ ಗಳಿಸಿದ್ದನ್ನು ಹೊರತುಪಡಿಸದರೆ ರಾಹುಲ್ 2,2,0 ಸಾಧನೆ ಮಾಡಿದ್ದಾರೆ. ಪರ್ತ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಲ್ಲಿ ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಸುನಿಲ್ ಗವಾಸ್ಕರ್ ಅವರ ದಾಖಲೆಯೊಂದನ್ನು ಸರಿಗಟ್ಟಿದರು. ವೀಕ್ಷಕ ವಿವರಣೆಯಲ್ಲಿದ್ದ ಗವಾಸ್ಕರ್ ತಮ್ಮ ದಾಖಲೆಯೊಂದನ್ನು ಸರಿಗಟ್ಟಿರುವುದಕ್ಕೆ ಮನದಲ್ಲೇ ಖುಷಿಪಟ್ಟರು!.
11 ಟೆಸ್ಟ್ ಇನಿಂಗ್ಸ್‌ನಲ್ಲಿ ರಾಹುಲ್ 7 ಬಾರಿ ಕ್ಲೀನ್ ಬೌಲ್ಡ್ ಆಗಿದ್ದಾರೆ. ಆರಂಭಿಕ ಆಟಗಾರನಾಗಿ ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್‌ನಲ್ಲಿ ಕ್ಲೀನ್ ಬೌಲ್ಡ್ ಆದ ಸಾಧನೆ ಮಾಡಿದರರು. ಮೂರು ಬಾರಿ ಕ್ಲೀನ್ ಬೌಲ್ಡ್ ಆಗಿರುವ ಖ್ಯಾತಿ ಇದುವರೆಗೂ ಸುನಿಲ್ ಗವಾಸ್ಕರ್ ಅವರ ಹೆಸರಿನಲ್ಲಿದೆ. ಗವಾಸ್ಕರ್ 125 ಟೆಸ್ಟ್ ಪಂದ್ಯಗಳನ್ನಾಡಿ ಈ ಕುಖ್ಯಾತಿಗೆ ಹೆಸರಾಗಿದ್ದರೆ, ರಾಹುಲ್ 33ನೇ ಟೆಸ್ಟ್ ಪಂದ್ಯದಲ್ಲೇ ಆ ಮೈಲಿಗಲ್ಲು ಮುಟ್ಟಿದರು.
ಸದ್ಯದ ಸ್ಥಿತಿ ನೋಡಿದರೆ ಕೆ.ಎಲ್. ರಾಹುಲ್ ಅವರಿಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಲಕ್ಷಣ ದಟ್ಟವಾಗಿದೆ.