ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರದರ್ಶನವು ಮುಂಬರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡದ ಆಯ್ಕೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಾಲ್ಯದ ತರಬೇತುದಾರ ರಾಜ್ ಕುಮಾರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
“ಐಪಿಎಲ್ ಪ್ರದರ್ಶನವು ವಿಶ್ವಕಪ್ 15 ಸದಸ್ಯರ ಭಾರತದ ತಂಡದ ಆಯ್ಕೆಗೆ ಮಾನದಂಡವಾಗಿರುವುದಿಲ್ಲ. ಐಪಿಎಲ್ ಹಾಗೂ ವಿಶ್ವಕಪ್ ಸಂಪೂರ್ಣ ಬದಲಾವಣೆಯಿಂದ ಕೂಡಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಅವರು ಚುಟುಕು ಟೂರ್ನಿಯ ಪ್ರದರ್ಶನವನ್ನು ಗಣನೆಗೆ ತೆಗೆದುಕೊಳ್ಳದೇ ತಂಡದ ಆಯ್ಕೆ ಅಂತಿಮಗೊಳಿಸಲಿದ್ದಾರೆ ಎಂಬ ವಿಶ್ವಾಸವಿದೆ” ಎಂದರು.
ಭಾರತ ವಿಶ್ವಕಪ್ ತಂಡದ ಬ್ಯಾಟಿಂಗ್ ನಾಲ್ಕನೇ ಕ್ರಮಾಂಕ ಆಯ್ಕೆ ಮಾಡುವುದು ದೊಡ್ಡ ತಲೆ ನೋವಾಗಿದೆ. ಈ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ಆಯ್ಕೆ ಮಾಡಲು ಇನ್ನೂ ಗೊಂದಲ್ಲವಿದೆ. ಏಕೆಂದರೆ, ಈ ಸ್ಥಾನದ ಸಂಭಾವ್ಯ ಆಟಗಾರರು ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಕೆ.ಎಲ್. ರಾಹುಲ್ ಹಾಗೂ ಅಂಬಾಟಿ ರಾಯುಡು ಇಬ್ಬರಿಗೂ 15 ಆಟಗಾರರ ತಂಡದಲ್ಲಿ ಅವಕಾಶ ನೀಡಬೇಕು. ಇವರಲ್ಲಿ ಒಬ್ಬರಿಗೆ ಪಂದ್ಯದ ಅಂತಿಮ 11ರಲ್ಲಿ ಸ್ಥಾನ ಕಲ್ಪಿಸಬೇಕು. ಇನ್ನೊಬ್ಬರನ್ನು ಮೀಸಲಿರಿಸಬೇಕು ಎಂದರು.
“ಇಂಗ್ಲೆಂಡ್ ಪಿಚ್ ಗೆ ಅನುಗುಣವಾಗಿ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ವೇಗಿಗಳಿಗೆ ಸಹಕರಿಸುವಂತಿದ್ದರೆ ಇಬ್ಬರು ವೇಗಿಗಳು ಹಾಗೂ ಇಬ್ಬರು ಆಲ್ರೌಂಡರ್ಗಳಿಗೆ ಅವಕಾಶ ನೀಡಬಹುದು. ಅದರಂತೆ ಹಾರ್ದಿಕ್ ಪಾಂಡ್ಯ ಹಾಗೂ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಬಹುದು” ಎಂದು ಅಂದಾಜಿಸಿದರು.
“ಯಜುವೇಂದ್ರ ಚಾಹಲ್ ಹಾಗೂ ಕುಲ್ದೀಪ್ ಯಾದವ್ ಅವರುಗಳಿಗೆ 15 ಆಟಗಾರರ ತಂಡದಲ್ಲಿ ಸ್ಥಾನ ಕಲ್ಪಿಸುವುದು ಸ್ಪಷ್ಟವಾಗಿದೆ. ಹೀಗಾಗಿ, ರವೀಂದ್ರ ಜಡೇಜಾ ಅವರು ಸ್ಥಾನ ಪಡೆಯುವುದು ಕಷ್ಟವಾಗಿದೆ. ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಕೊಹ್ಲಿ ಅವರನ್ನು ಭಾರತ ತಂಡದ ನಾಯಕತ್ವಕ್ಕೆ ಹೋಲಿಕೆ ಮಾಡಬಾರದು. ಭಾರತ ತಂಡದ ದಾಖಲೆಗಳು ಅವರ ನಾಯಕತ್ವದ ಸಾಮಾರ್ಥ್ಯ ತಿಳಿಸುತ್ತದೆ. ಭಾರತ ವಿಶ್ವಕಪ್ನೊಂದಿಗೆ ಸ್ವದೇಶಕ್ಕೆ ಮರಳಲಿದೆ” ಎಂಬ ನಂಬಿಕೆ ಎಂದರು.
ಇಂಗ್ಲೆಂಡ್ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ಗೆ 15 ಆಟಗಾರರ ಭಾರತ ತಂಡವನ್ನು ಬಿಸಿಸಿಐ ನಾಳೆ ಆಯ್ಕೆ ಮಾಡಲಿದೆ. ಜೂ. 5 ರಂದು ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.