ಗೋವಿಂದರಾಜು ಸರ್ವಾಧಿಕಾರಿ ಧೋರಣೆ ಖಂಡಿಸಿ ಪ್ರತಿಭಟನೆ
ಬೆಂಗಳೂರು: ಖೋ ಖೋ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಭಾರತ ಪುರುಷ ಹಾಗೂ ಮಹಿಳಾ ತಂಡದಲ್ಲಿದ್ದ ಕರ್ನಾಟಕದ ಆಟಗಾರರಿಗೆ ಗೌರವ ನೀಡುವುದರ ಜೊತೆಯಲ್ಲಿ ನಗದು ಬಹುಮಾನದಲ್ಲಿ ಏರಿಕೆಯಾಗಬೇಕು, ಇದಕ್ಕೆಲ್ಲ ಅಡ್ಡಿ ಮಾಡುತ್ತಿರುವ ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜುವಿನ ಸರ್ವಾಧಿಕಾರಿ ಧೋರಣೆ ಕೊನೆಯಾಗಬೇಕು ಎಂದು ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ನೇತ್ರತ್ವದಲ್ಲಿ ರಾಜ್ಯದ ವಿವಿಧ ಕ್ರೀಡಾ ಸಂಘಟನೆಗಳು ಹಾಗೂ ಕ್ರೀಡಾಪಟುಗಳು ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. Demanding job and cash award for Kho Kho world cup winning state players Karnataka State Kho Kho Association protest at Freedom Park.
ವಿಶ್ವ ಚಾಂಪಿಯನ್‌ಷಿಪ್ ಗೆದ್ದಿರುವ ಭಾರತ ಪುರುಷರ ತಂಡದ ಆಟಗಾರ ಮಂಡ್ಯದ ಗೌತಮ್ ಎಂ ಕೆ ಹಾಗೂ ಮಹಿಳಾ ತಂಡದ ಆಟಗಾರ್ತಿ ಚೈತ್ರಾ ಅವರಿಗೆ ಎ ಅಥವಾ ಬಿ ಶ್ರೇಣಿಯ ಉದ್ಯೋಗವನ್ನು ನೀಡಬೇಕು. ಅಲ್ಲದೆ ತಲಾ 80 ಲಕ್ಷ ರೂ. ನಗದು ಬಹುಮಾನ ಘೋಷಿಸಬೇಕು ಎಂದು ಪ್ರತಿಭಟೆನೆಯಲ್ಲಿ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್ ಸರಕಾರವನ್ನು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮಾನ್ಯತೆ ಪಡೆದ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಕ್ರೀಡಾ ಸಂಸ್ಥೆಗಳಿಗೆ ರಾಜ್ಯ ಸರಕಾರ ನೇರವಾಗಿ ಅನುದಾನ ನೀಡಬೇಕು. ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಮೂಲಕ ಅನುದಾನ ನೀಡುವ ಕ್ರಮವನ್ನು ರದ್ದುಗೊಳಿಸಬೇಕು. ಖೋ ಖೋ ಸಂಸ್ಥೆ 2018ರಿಂದ ಯಾವುದೇ ಅನುದಾನವನ್ನು ಪಡೆಯಲಿಲ್ಲ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ರಾಜ್ಯ ಒಲಿಂಪಿಕ್ಸ್ ಸಂಸ್ಥೆಗೆ ಈ ವಿಷಯದಲ್ಲಿ ಪತ್ರ ಮುಖೇನ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ರಾಷ್ಟ್ರೀಯ ಫೆಡರೇಷನ್‌ಗೆ ನೋಂದಣೆಯಾಗಿರುವ ಕ್ರೀಡಾ ಸಂಸ್ಥೆಗಳಿಗೆ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್‌ನ ಸದಸ್ಯತ್ವ ಕಡ್ಡಾಯವಾಗಿ ನೀಡಬೇಕು ಎಂದು ಪ್ರತಿಭಟನೆಯಲ್ಲಿ ರಾಜ್ಯ ಸರಕಾರವನ್ನು ಆಗ್ರಹಿಸಲಾಗಿದೆ.
ರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ನಿಯಮಗಳು ಜಾರಿಗೆ ಬರಬೇಕು. ರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ತೆಯ ಅನುಮತಿ ಇಲ್ಲದೆ ಕಾನೂನುಗಳನ್ನು ಬದಲಾವಣೆ ಮಾಡುವುದು ನಿಲ್ಲಬೇಕು. ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆಗೆ ನೀಡಿರುವ ಅನುದಾನ ದುರುಪಯೋಗ ಆಗಿರುವ ಆರೋಪಗಳಿದ್ದು ಆ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಪ್ರತಿಭಟನೆಯ ವೇಳೆ ಸರಕಾರವನ್ನು ಆಗ್ರಹಿಸಲಾಯಿತು.