Thursday, November 21, 2024

ಧೋನಿಯ ಯಶಸ್ಸಿನ ಹಿಂದೆ ಆ ದೇವಿ!

ಸ್ಪೋರ್ಟ್ಸ್ ಮೇಲ್ ವರದಿ:

ಟೆನಿಸ್ ಬಾಲ್ ಕ್ರಿಕೆಟ್ ಆಡಿಕೊಂಡು ಅವರಿವರು ಕೊಟ್ಟ ಪುಡಿಗಾಸನ್ನು ಕಿಸಿಗೆ ಹಾಕಿಕೊಂಡು, ನಂತರ ರೈಲ್ವೆಯಲ್ಲಿ ಟಿಸಿ ಆಗಿ, ಯಾರದ್ದೋ ಬೈಕ್‌ನಲ್ಲಿ ರೈಡ್ ಮಾಡುತ್ತಿದ್ದ ಮಹೇಂದ್ರ ಸಿಂಗ್  ಧೋನಿ ಇಂದು ಜಗತ್ತಿನ ಶ್ರೀಮಂತ ಕ್ರಿಕೆಟಿಗರಲಿಲ್ಲ ಒಬ್ಬರೆನಿಸಿದ್ದಾರೆ.

ಆದರೆ ಅವರ ಈ ಯಶಸ್ಸಿಗೆ ರಾಂಚಿಯ ದುರ್ಗಾಮಾತೆ ದಿವೋರಿ ಅವರ ಆಶೀರ್ವಾದವೇ ಕಾರಣ ಎನ್ನುತ್ತಾರೆ ರಾಂಚಿಯ ಜಯ. ಭಕ್ತರ ಸಂಖ್ಯೆ ಕಡಿಮೆ  ಇದ್ದ ದೇವಸ್ಥಾನಕ್ಕೆ ಧೋನಿ ಚಿಕ್ಕಂದಿನಿಂದಲೂ ಪೂಜೆ ಮಾಡುತ್ತಾ, ತನಗೆ ಕ್ರಿಕೆಟ್‌ನಿಂದ ಶ್ರೀಮಂತಿಕೆ ಬಂದ ನಂತರ ೭೦೦ ವರ್ಷಗಳಿಂದ ಜೀರ್ಣೋದ್ಧಾರವನ್ನೇ ಕಾಣದ ದೇವಸ್ಥಾನಕ್ಕೆ ಹೊಸ ರೂಪುಕೊಟ್ಟ ಮಹೇಂದ್ರ ಸಿಂಗ್  ಧೋನಿಯನ್ನು ಆ  ಮಾತೆ ಇದುವರೆಗೂ ಕೈ ಬಿಟ್ಟಿಲ್ಲ. ರಾಂಚಿಯ ಯುವ ಗಾಯಕ, ಗೆಳೆಯ ರೋಹನ್ ಪಾಠಕ್ ಸ್ಪೋರ್ಟ್ಸ್ ಮೇಲ್‌ಗೆ ಧೋನಿ ಹಾಗೂ ದೇವಸ್ಥಾನದ ನಂಟಿನ ಕತೆ ಹೇಳಿದ್ದಾರೆ.

ಎಲ್ಲಿದೆ ಈ ದೇವಸ್ಥಾನ?

ರಾಂಚಿಯಿಂದ ೬೦ ಕಿಮೀ. ದೂರದಲ್ಲಿರುವ ತಮಾರ್ ಎಂಬ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಚಾಚಿಕೊಂಡಿದೆ ಈ ದೇವಸ್ಥಾನ. ಈ ದೇವಿ ಮೂರ್ತಿಯ ವಿಶೇಷವೆಂದರೆ ಇದು ಉದ್ಭವ ಮೂರ್ತಿ ಎನ್ನುತ್ತಾರೆ ಅಲ್ಲಿಯ ಜನ. ದೇವಿ ಮೂರ್ತಿಗೆ ಸಾಮಾನ್ಯ ೧೦ ಕೈಗಳಿರುತ್ತವೆ. ಆದರೆ ದಿವೋರಿ ದೇವಿ ಮೂರ್ತಿಗೆ ಕೇವಲ ನಾಲ್ಕು ಕೈಗಳು.
ಪುರಾತನವಾಗಿದ್ದರೂ ದೇವಾಲಯ
 ಧೋನಿ ಸಮಯ ಸಿಕ್ಕಾಗೆಲ್ಲ ಆ ದೇವಸ್ಥಾನಕ್ಕೆ  ಭೇಟಿ ನೀಡುತ್ತಿದ್ದರು. ಆದರೆ ಚಿಕ್ಕಂದಿನಲ್ಲಿ ಯಾರೂ ಅವರನ್ನು ಗುರುತಿಸುತ್ತಿರಲಿಲ್ಲ. ೨೦೦೪ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಜನ  ಧೋನಿಯನ್ನು ಗುರುತಿಸಲಾರಂಭಿಸಿದರು. ಜತೆಯಲ್ಲಿ ಅವರನ್ನು ನೋಡುವ ಸಲುವಾಗಿ ದೇವಸ್ಥಾನಕ್ಕೆ ಬರುತ್ತಿದ್ದರು. ಧೋನಿ ಬಂದಾಗಲೆಲ್ಲ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗತೊಡಗಿತು.

ದೇವಸ್ಥಾನದ ಜೀರ್ಣೋದ್ಧಾರ

೭೦೦ ವರ್ಷಗಳ ಹಿಂದಿನ ದೇವಸ್ಥಾನ ಅವನತಿಯ ಅಂಚಿನಲ್ಲಿತ್ತು. ದೇವಸ್ಥಾನ ಅರ್ಚಕ ಮನೋಜ್ ಪಾಂಡ ಅವರೊಂದಿಗೆ  ಧೋನಿ ಮಾತುಕತೆ ನಡೆಸಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ನಡೆಯಿತು. ಸರಕಾರವೂ ಇದಕ್ಕೆ ಬೆಂಬಲ ನೀಡಿತ್ತು. ಅಂದಿನಿಂದ  ಧೋನಿ ಹೆಜ್ಜೆ ಇಟ್ಟಲ್ಲೆಲ್ಲ ಯಶಸ್ಸು. ೨೦೦೮ ಕಾಮನ್‌ವೆಲ್ತ್ ಸರಣಿ ಗೆದ್ದ ನಂತರ  ಧೋನಿ ಮಹಾಪೂಜೆಯನ್ನೇ ನೀಡಿದರು. ಪಾಕಿಸ್ತಾನ ವಿರುದ್ಧದ ಪಂದ್ಯ ಇದ್ದಾಗಲೆಲ್ಲ ಅಣ್ಣ ನರೇಂದ್ರ ಸಿಂಗ್ ಧೋನಿ ಅವರಲ್ಲಿ ಪೂಜೆ ಸಲ್ಲಿಸಲು ಹೇಳುತ್ತಿದ್ದರು. ಕ್ರಿಕೆಟ್‌ನಿಂದ ಬಂದ ಹಣದಲ್ಲಿ ಒಂದು  ಭಾಗವನ್ನು ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿದ್ದರು. ಜಗತ್ತಿನ ಯಾವುದೇ ದೇಶಕ್ಕೆ ಹೋಗಿರಲಿ, ಬರುವಾರಗ ಎಷ್ಟೇ ರಾತ್ರಿಯಾಗಿರಲಿ ಆ ದೇವಿಯ ಮಂದಿರಕ್ಕೆ  ಭೇಟಿ ನೀಡಿ ಬರುವುದನ್ನು  ಧೋನಿ ಮರೆಯುವುದಿಲ್ಲ. ಮದುವೆಯಾದ ನಂತರ ಪತ್ನಿ ಸಾಕ್ಷಿಯೊಂದಿಗೆ ವಿಶೇಷ ಪೂಜೆ ನೀಡಿದ್ದರು. ಪ್ರತಿಯೊಂದು ಸರಣಿಗೂ ಮುನ್ನ ಧೋನಿಯ ಹೆಸರಿನಲ್ಲಿ ಅಲ್ಲಿ ವಿಶೇಷ ಪೂಜೆಯಾಗುತ್ತದೆ. ಸೋಲಿನ ಅಂಚಿನಲ್ಲಿದ್ದ ಪಂದ್ಯವನ್ನು  ಧೋನಿ ಗೆಲ್ಲಿಸಿಕೊಡುವುದನ್ನು ನೋಡಿದಾಗ ಆ ದೇವಿಯ ಕೃಪೆ ಇದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಧೋನಿಯಿಂದ ಎಲ್ಲರಿಗೂ ಒಳಿತು

ಒಂದು ಹದಿನೈದು ವರ್ಷಗಳ ಹಿಂದೆ ಆ ದೇವಸ್ಥಾನಕ್ಕೆ ಹೋಗುವರ ಸಂಖ್ಯೆ ವಿರಳವಾಗಿತ್ತು. ದಿನಕ್ಕೆ ೪೦ ರಿಂದ ೫೦ ಜನ ಪೂಜೆ ಮಾಡಿ ಹೋಗುತ್ತಿದ್ದರು. ಸುತ್ತಲೂ ನಾಲ್ಕೈದು  ಅಂಗಡಿ ಮುಂಗಟ್ಟುಗಳು ಇದ್ದವು.ಆದರೆ ಇಂದು ಹಾಗಲ್ಲ. ಧೋನಿಯ ಸ್ಪರ್ಷದಿಂದಾಗಿ ಆ ದೇವಸ್ಥಾನಕ್ಕೆ ಬರುವವರ ಸಂಖ್ಯೆ ದಿನಕ್ಕೆ ಸಾವಿರ ತಲುಪಿದೆ. ಮೊದಲು ೫೦೦ ರೂ. ಆದಾಯ, ನಂತರ ೫೦೦೦ ಈಗ ತಿಂಗಳಿಗೆ ೫ ಲಕ್ಷ ರೂ.ವರೆಗೂ ಆದಾಯ ಬರುತ್ತಿದೆ. ಮೊದಲು ಧೋನಿಯನ್ನು ಗುರುತಿಸುವಲ್ಲಿ ವಿಲರಾದ ಜನ ಈಗ  ಧೋನಿ ಬಂದರೆಂದರೆ ತಮ್ಮ ಅಂಗಡಿಗಳನ್ನು ಬಿಟ್ಟು ಸುತ್ತುವರಿಯುತ್ತಾರೆ. ರಾಂಚಿಯಿಂದ ರಸ್ತೆ ಮೂಲಕ ಜೆಮ್ಷೆಡ್ಪುರಕ್ಕೆ ತೆರಳುವ ಪ್ರಯಾಣಿಕರು ಈ ದೇವಸ್ಥಾನಕ್ಕೆ ನಿತ್ಯವೂ ಬರುತ್ತಾರೆ. ಮೊದಲು ದೇವಸ್ಥಾನದ ಕಡೆಗೆ ತಲೆಹಾಕಿ ಮಲಗದ ರಾಂಚಿಯ ಪ್ರಮುಖರು ಈಗ ನಿತ್ಯವೂ ಪೂಜೆ ಸಲ್ಲಿಸುತ್ತಾರೆ. ಅಂದು ಯಾರದ್ದೋ ಬೈಕ್ ಎರವಲು ಪಡೆದು ರೈಡ್ ಮಾಡಿದ್ದ ಧೋನಿಯಲ್ಲಿ ಜಗತ್ತಿನ ಉತ್ತಮ ಬ್ರಾಂಡ್‌ನ ೨೨ ಬೈಕ್‌ಗಳಿಗೆ, ಅಲ್ಲದೆ ದುಬಾರಿ ಕಾರುಗಳೂ ಇವೆ. ಇದು ಧೋನಿ ಮ್ಯಾಜಿಕ್.. ಹಾಗೂ ದೇವಿಯ ಕೃಪೆ.

Related Articles