ಬೆಂಗಳೂರು: ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ, ಕೈತುಂಬ ಸಂಬಳ, ಬದುಕಿಗೆ ಬೇಕಾಗುವ ಎಲ್ಲ ಅನೂಕೂಲ. ಇದೆಲ್ಲ ಇರುವಾಗ ಯಾರಾದರೂ ಸಾಹಸಕ್ಕೆ ಕೈ ಹಾಕುತ್ತಾರಾ? ಕ್ರೀಡಾ ಜಗತ್ತಿನಲ್ಲಿ ನಮಗೆ ಅಂಥವರು ಕಾಣಲು ಸಿಗುತ್ತಾರೆ. ಅಂಥ ಅಪೂರ್ವ ಪ್ರತಿಭೆ ಬೆಂಗಳೂರಿನ ಹೊರವಲಯದ ತಿಂಡ್ಲು ಹಳ್ಳಿಯ ಬೈಕ್ ರೇಸರ್, ರೇಸರ್‌ಗಳಿಗೆ ತರಬೇತಿ ನೀಡುವ ಚಾಂಪಿಯನ್ ದೇವ್ ಯಾನೆ ದೇವರಾಜ್ ವೆಂಕಟೇಶ್. DEV Devaraj Venkatesh left the corporate job became National Motor sports winner and good racers trainer.
ಚಿಕ್ಕಂದಿನಲ್ಲಿ ಕಂಡ ಕನಸನ್ನು ನನಸಾಗಿಸುವ ಹಾದಿಯಲ್ಲಿ ಬೇರೆಯವರು ನಾವೇನು ಆಗಬೇಕೆಂದು ಬಯಸುವ ಪ್ರಯತ್ನಗಳು ಕೆಲವೊಮ್ಮೆ ಅಡ್ಡಿಯನ್ನುಂಟು ಮಾಡುತ್ತವೆ. ದೇವ್ ಅವರು ಚಿಕ್ಕಂದಿನಿಂದಲೂ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಬಯಸಿದವರು. ಅದೇ ಹಾದಿಯಲ್ಲಿ ಮುನ್ನಡೆದವರು. ಆದರೆ ಮನೆಯವರಿಗೆ, ಮಗ ಉನ್ನತ ಶಿಕ್ಷಣ ಪಡೆದು, ದೊಡ್ಡ ಕಂಪೆನಿಯಲ್ಲಿ ಉದ್ಯೋಗ ಗಳಿಸಿ ನೆಮ್ಮದಿಯಾಗಿರಬೇಕೆಂಬ ಹಂಬಲ, ದೇವ್ ಅವರ ತಂದೆಗೆ ಅದೇ ಆಶಯ. ಆದರೆ ದೇವ್ ಎಲ್ಲಿಯೂ ಶಿಕ್ಷಣಕ್ಕೆ ವಂಚನೆ ಮಾಡಲಿಲ್ಲ. ತಂದೆಯವರು ಮಗ ದೇವ್ ಮೋಟಾರ್ ಸ್ಪೋರ್ಟ್ಸ್‌ನಿಂದ ದೂರ ಸರಿದು ಉನ್ನತ ಶಿಕ್ಷಣ ಪಡೆಯಲಿ ಎಂದು ಪದವಿಯ ಬಳಿಕ ಅಮೆರಿಕದಲ್ಲಿರುವ ನಾರ್ಥ್‌ಈಸ್ಟರ್ನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿ ಕಲಿಯಲು ಕಳಿಸಿದರು. ದೇವ್ ಪ್ರೀತಿಯಿಂದಲೇ ಒಪ್ಪಿಕೊಂಡು ಎಂಬಿಎ ಪದವಿ ಮುಗಿಸಿದರು. ಆದರೆ ಅವರ ಮನದಲ್ಲಿ ನೆಲೆನಿಂತಿದ್ದ ಮೋಟಾರ್ ಸ್ಪೋರ್ಟ್ಸ್ ಆಕಾಂಕ್ಷೆಯನ್ನು ಯಾರಿಂದಲೂ ಅಳಿಸಲಾಗಲಿಲ್ಲ. ಭಾರತಕ್ಕೆ ಹಿಂದಿರುಗಿ ಸಿಸ್ಕೋ ಕಂಪೆನಿಯಲ್ಲಿ ಉನ್ನತ ಹುದ್ದೆ ಸೇರಿಕೊಂಡರು. 2021-22ರ ಅವಧಿಯಲ್ಲಿ ಒಟ್ಟು 32 ರೇಸ್‌ಗಳಲ್ಲಿ ಪಾಲ್ಗೊಂಡರು. 29 ರೇಸ್‌ಗಳಲ್ಲಿ ಪೋಡಿಯಂ ಫಿನಿಶ್ ಮಾಡಿ ರಾಜ್ಯಕ್ಕೆ ಕೀರ್ತಿ ತಂದರು. ಸಿಸ್ಕೋ ಕಂಪೆನಿಯಲ್ಲಿ ಶ್ರವಣ್ ಎಂಬುವರು ದೇವ್ ಅವರ ಮೋಟಾರ್ ಸ್ಪೋರ್ಟ್ಸ್‌ಗೆ ಬೆಂಬಲ ನೀಡಿದರು.
ದೇಶದ ಉತ್ತಮ ರೇಸಿಂಗ್ ತರಬೇತುದಾರ: ಭಾರತದ ಶ್ರೇಷ್ಠ ರೇಸರ್‌ಗಳಲ್ಲಿ ಒಬ್ಬರಾದ ಟ್ರೈಬಲ್ ಸಂಜಯ್ ಅವರ ಟ್ರೈಬಲ್ ಅಡ್ವೆಂಚರ್ ಅಕಾಡೆಮಿಯಲ್ಲಿ ಯುವ ರೇಸರ್‌ಗಳಿಗೆ ತರಬೇತಿ ನೀಡುತ್ತಿದ್ದ ದೇವ್ ಒಂದು ದಿನ ಉದ್ಯೋಗವನ್ನು ತೊರೆಯುವ ಮನಸ್ಸು ಮಾಡಿದರು. ಪತ್ನಿ ಕುಶಲ ಅವರಲ್ಲಿ ಈ ವಿಷಯ ತಿಳಿಸಿದರು. ದೇವ್ ಅವರಲ್ಲಿರುವ ಸಾಹಸ ಪ್ರವೃತ್ತಿ ಮತ್ತು ಆತ್ಮವಿಶ್ವಾಸವನ್ನು ಚೆನ್ನಾಗಿ ಬಲ್ಲ ಕುಶಲ ಅವರು ಕೆಲಸ ಬಿಡಲು ಒಪ್ಪಿಕೊಂಡರು. “ಅಂದು ನನ್ನ ಪತ್ನಿ ಕುಶಲ ನನ್ನ ನಿಲುವಿಗೆ ಸಮ್ಮತಿ ನೀಡದೇ ಇರುತ್ತಿದ್ದರೆ ಬದುಕಿನಲ್ಲಿ ಇಂಥ ಸಾಧನೆ ಮಾಡಲಾಗುತ್ತಿರಲಿಲ್ಲ,” ಎಂದು ದೇವ್ ತಮ್ಮ ಪತ್ನಿಯನ್ನು ಸ್ಮರಿಸುತ್ತಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚು: ಟ್ರೈಬಲ್ ಸಂಜಯ್ ಅವರು ದೇವನ ಹಳ್ಳಿ ಸಮೀಪ ಚಿನ್ನಕೆಂಪನಹಳ್ಳಿಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ Trible Adventure ಅಕಾಡೆಮಿಯಲ್ಲಿ ಮುಖ್ಯ ರೇಸಿಂಗ್ ತರಬೇತುದಾರರಾಗಿರುವ ದೇವ್ ಅವರು ತರಬೇತಿ ನೀಡಿರುವ ಅನೇಕ ಯುವ ಮೋಟಾರಿಸ್ಟ್‌ಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಈಗ 11 ವರ್ಷ ಬೈರವ್ 10ನೇ ವಯಸ್ಸಿನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದುದು ದೇವ್ ಅವರ ತರಬೇತಿಗೆ ಸಿಕ್ಕ ದೊಡ್ಡ ಗೌರವ. ಯುವ ಚಾಂಪಿಯನ್ ವಿಸ್ಮಯ್ ಕೂಡಾ ದೇವ್ ಅವರ ಗರಡಿಯಲ್ಲಿ ಪಳಗಿದವ. ಪ್ರಸಕ್ತ ರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್ ರೇಸಿಂಗ್‌ನಲ್ಲಿ ಕೇರಳದ ರೆಯಾನ್ ಈಗ ಅಗ್ರ ಸ್ಥಾನದಲ್ಲಿದ್ದಾರೆ. ಇದರಿಂದಾಗಿ ದೇವ್ ಅವರ ತರಬೇತಿ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ದೇಶದ ಇತರ ಭಾಗಗಳಿಗೂ ಹಬ್ಬಿದೆ.
ರೇಸ್ ಸಂಘಟನೆ: ದೇವ್ ರೇಸ್‌ನಲ್ಲಿ ಪಾಲ್ಗೊಳ್ಳವುದು, ಜತರಬೇತಿ ನೀಡುವುದು ಮಾತ್ರವಲ್ಲ ಟ್ರೈಬಲ್ ಅಕಾಡೆಮಿಯಲ್ಲಿ ರಾಷ್ಟ್ರೀಯ ಮಟ್ಟದ ರೇಸ್‌ಗಳ ಆತಿಥ್ಯವನ್ನು ವಹಿಸಿ ಯಶಸ್ಸು ಕಂಡಿದ್ದಾರೆ. ಐಎನ್‌ಆರ್‌ಸಿ ರೇಸ್‌ಗಳು, ಸೂಪರ್ ಕ್ರಾಸ್ ರೇಸ್‌ಗಳು ಮತ್ತು ಆಫ್‌ರೋಡ್ ರೇಸಿಂಗ್‌ಗಳನ್ನು ಆಯೋಜಿಸಿರುವ ದೇವ್ ಈಗ ಭಾರತ ಮಾತ್ರವಲ್ಲ ಜಗತ್ತಿನ ಇತರ ಭಾಗದ ರೇಸಿಂಗ್ ವಲಯದಲ್ಲೂ ಜನಪ್ರಿಯಗೊಂಡಿದ್ದಾರೆ.
ಟ್ರೈಬಲ್ ಜೊತೆ KTM: ಜಗತ್ತಿನ ಶ್ರೇಷ್ಠ ಮೋಟಾರ್ ಸ್ಪೋರ್ಟ್ಸ್ ಬ್ರಾಂಡ್ KTM ಈಗ ಟ್ರೈಬಲ್ ಅಕಾಡೆಮಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಟ್ರೈಬಲ್ ಅಕಾಡೆಮಿಯಲ್ಲಿ KTM ತನ್ನ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ. ದೇವ್ ಇದರ ಅಧಿಕೃತ ಟ್ರೈನರ್ ಕೂಡ ಆಗಿದ್ದಾರೆ. “ಚಿಕ್ಕಂದಿನಲ್ಲಿ ನಾನೇನು ಕನಸು ಕಂಡಿದ್ದೇನೋ ಅದು ಈಗ ನನಸಾಗಿದೆ. KTM ನಂಥ ಪ್ರಸಿದ್ಧ ಬ್ರಾಂಡ್ ನಮ್ಮ ಜೊತೆ ಇರುವುದಕ್ಕೆ ಕನ್ನಡಗಿನಾದ ನಾನು ಹೆಮ್ಮೆ ಪಡುತ್ತೇನೆ. ಇಲ್ಲಿ ಸಂಜಯ್ ಅವರ ನೆರವು ಅಪಾರ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಪತ್ನಿ ಕುಶಲ ಅವರು ಅಂದು ಕೈಗೊಂಡ ತೀರ್ಮಾನ ನಿಜವಾಗಿಯೂ ಫಲ ನೀಡಿದೆ. ಬದುಕಿನಲ್ಲಿ ನಮಗೆ ಯಾವುದು ಇಷ್ಟವೋ ಅದರಲ್ಲೇ ಸಾಧನೆ ಮಾಡಬೇಕು. ಇನ್ನೊಬ್ಬರ ಒತ್ತಾಸೆಗೆ ಮಣಿದು ನಮ್ಮ ಗುರಿಯನ್ನು ಬದಲಾಯಿಸಬಾರದು,” ಎನ್ನುತ್ತಾರೆ ದೇವ್.
ಒಳ್ಳೆ ರೇಸರ್ಸ್‌ಗಳನ್ನು ಸಿದ್ಧಗೊಳಿಸಬೇಕು: ಮೋಟಾರ್ ಸ್ಪೋರ್ಟ್ಸ್‌ಗೆ ಭಾರತದಲ್ಲಿ ಉತ್ತಮ ಬೇಡಿದೆ ಇದೆ. ಚಾಂಪಿಯನ್‌ಷಿಪ್ ಗೆದ್ದ ನಂತರ ಒಂದು ಹಂತದ ಬಳಿಕ ಅನೇಕರು ಅದರಿಂದ ದೂರವಾಗುತ್ತಾರೆ. ಬದುಕಿನುದ್ದಕ್ಕೂ ರೇಸ್ನ್ ಲ್ಲಿ ಅನುಭವಿಸಿದ ನೋವುಗಳನ್ನು ನುಂಗಿಕೊಂಡು ಅವರು ವಿರಮಿಸುತ್ತಾರೆ. ಆದರೆ ಸ್ಪರ್ಧೆಯಿಂದ ಹೊರಗಿದ್ದರೂ ತನ್ನ ಸೇವೆ ಮೋಟಾರ್ ಸ್ಪೋರ್ಟ್ಸ್‌ಗೆ ಮೀಸಲಿಡಬೇಕು ಎಂದು ಬಯಸಿರುವ 32 ವರ್ಷದ ದೇವ್, ಭಾರತದಲ್ಲಿ ಉತ್ತಮ ರೇಸರ್‌ಗಳನ್ನು ಸಜ್ಜುಗೊಳಿಸಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. “ನಮಗೆ ಬದುಕು ಕೊಟ್ಟ ಈ ಸಾಹಸ ಕ್ರೀಡೆಯನ್ನು ಮುಂದುವರಿಸಿಕೊಂಡು ಹೋಗಬೇಕು. ನಮ್ಮಲ್ಲಿರುವ ಅನುಭವಗಳು ಇನ್ನೊಬ್ಬರಿಗೆ ನೆರವಾಗಬೇಕು. ಬದುಕಿನ ಹಾದಿಯಲ್ಲಿ ಅಡೆ ತಡೆಗಳು ಇರುವುದು ಸಹಜ. ಅವೆಲ್ಲವನ್ನೂ ದಾಟಿ ಮುನ್ನಡೆದರೇ ಯಶಸ್ಸು ಸಿಗುವುದು. ಈ ಹಿನ್ನೆಲೆಯಲ್ಲಿ ನಾನು ತರಬೇತಿ ನೀಡುತ್ತಿರುವೆ. ನನ್ನ ಕೆಲಸ ನನಗೆ ತೃಪ್ತಿ ನೀಡಿದೆ. ನಾವು ಮಾಡುವ ಉತ್ತಮ ಕಾರ್ಯ ನಮಗೆ ಖುಷಿಕೊಟ್ಟರೆ ಅದೇ ಯಶಸ್ಸು,” ಎನ್ನುತ್ತಾರೆ ದೇವ್.
“ಅಕಾಡೆಮಿಯ ಯಶಸ್ಸಿನಲ್ಲಿ ದೇವ್ ಅವರ ಪಾತ್ರ ಪ್ರಮುಖವಾದುದು, ಅವರಂಥ ಬದ್ಧತೆಯ ರೇಸರ್ ಉತ್ತಮ ಟ್ರೈನರ್‌ನ್ನು ನಾನು ಇದುವರೆಗೂ ಕಂಡಿಲ್ಲ. ರೇಸ್‌ಗಾಗಿಯೇ ತನ್ನ ಬದುಕನ್ನು ಮುಡುಪಾಗಿಟ್ಟ ದೇವ್ ಹಲವಾರು ಚಾಂಪಿಯನ್ನರುಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಟ್ರೈಬಲ್ ಅಕಾಡೆಮಿಯ ಮುಖ್ಯಸ್ಥ ಟ್ರೈಬಲ್ ಸಂಜಯ್ ಹೇಳಿದ್ದಾರೆ.