ಸ್ಪೋರ್ಟ್ಸ್ ಮೇಲ್ ವರದಿ
ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಯೋಗಾಸನ ಸ್ಪರ್ಧೆಯಲ್ಲಿ ಮೂಡುಬಿದಿರೆ ವಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು 14 ವರ್ಷ ವಯೋಮಿತಿಯ ಬಾಲಕರ ತಂಡ ಹಾಗೂ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ನೀಡಲ್ಪಡುವ ಜಿಲ್ಲೆಯ ಪ್ರತಿಷ್ಠಿತ ಯೋಗಕುಮಾರಿ ಪ್ರಶಸ್ತಿಯನ್ನು ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪ್ರಿಯಾಂಕ ಬಸವರಾಜ್ ಬಳೊಬಳ ಪಡೆದುಕೊಂಡರೆ, ಬಾಲಕರ ವಿಭಾಗದಲ್ಲಿ ನೀಡಲ್ಪಡುವ ಜಿಲ್ಲೆಯ ಪ್ರತಿಷ್ಠಿತ ಯೋಗಕುಮಾರ ಪ್ರಶಸ್ತಿಯನ್ನು ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮಲ್ಲಿಕಾರ್ಜುನ ಸುಭಾಷ್ ತಮ್ಮದಾಗಿಸಿಕೊಂಡಿದ್ದಾರೆ.
ಕಾರ್ಕಳದಲ್ಲಿ ನಡೆಯುವ ವಿಭಾಗಮಟ್ಟದ ಯೋಗಾಸನ ಸ್ಪರ್ಧೆಗೆ ಆಳ್ವಾಸ್ ಪ್ರೌಢಶಾಲೆಯ ಮಲ್ಲಿಕಾರ್ಜುನ, ಪವನ್, ಮಿಲನ್, ಸಂಗಮೇಶ್, ಸಂಜು, ಪ್ರಿಯಾಂಕ, ರೂಪ, ಸುಪ್ರೀತ, ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ವಿಜೇತ ಯೋಗಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಮತ್ತು ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿ ನಗರ, ಕೈರಂಗಳ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ ನಡೆಯಿತು.