ಸೋಮಶೇಖರ್ ಪಡುಕರೆ, ಬೆಂಗಳೂರು:
ಮೈಸೂರಿನಲ್ಲಿ ಕೃಷಿಕ ಕೃಷ್ಣಪ್ಪ ಎಂಬುವರು ನಿತ್ಯವೂ ಕುಸ್ತಿಪಟುವೊಬ್ಬರ ಮನೆಗೆ ಹಾಲನ್ನು ನೀಡುತ್ತಿದ್ದರು. ಅವರು ಮಕ್ಕಳಿಗೆ ಕುಸ್ತಿ ಕಲಿಸುವುದು ಮತ್ತು ಕುಸ್ತಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನೋಡಿ ತನ್ನ ಮಗನೂ ಅವರಂತೆ ಕುಸ್ತಿಪಟುವಾಗಲಿ ಎಂದು ಮನದಲ್ಲೇ ಹಾರೈಸುತ್ತಿದ್ದರು. ಹಲವು ಬಾರಿ ಮಗನಲ್ಲಿಯೂ ಈ ವಿಷಯವನ್ನು ಹೇಳಿದ್ದರು. ತಂದೆಯ ಆಸೆಯಂತೆ ಕುಸ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದು, ಕೋಚ್ ಆಗಿ, ವಿಶ್ವ ಕ್ಯಾಡೆಟ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟು, ಕುಸ್ತಿಯಲ್ಲಿಯೇ ಸಂಶೋಧನಾ ಗ್ರಂಥ ಬರೆದು, ಡಾಕ್ಟರೇಟ್ ಪದವಿ ಗಳಿಸಿ, ಇತ್ತೀಚಿಗೆ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಎರಡು ಐತಿಹಾಸಿಕ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಕರ್ನಾಟಕ ಕ್ರೀಡಾ ಇಲಾಖೆಯ ಕೋಚ್ ಮೈಸೂರಿನ ತೊಣಚಿಕೊಪ್ಪಲ್‌ದ ಡಾ. ವಿನೋದ್ ಕುಮಾರ್ ಕೆ. ಕರ್ನಾಟಕದ ಕುಸ್ತಿಯ ಆಸ್ತಿ ಎಂದರೆ ಅತಿಶಯೋಕ್ತಿ ಆಗಲಾರದು.
ಕರ್ನಾಟಕ ಎಲ್ಲ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದರೂ ಅಮೆಚೂರ್ ಕುಸ್ತಿಯಲ್ಲಿ ಇದುವರೆಗೂ ಹೆಸರಿಸುವ ಸಾಧನೆ ಮಾಡಿಲ್ಲ. ಸಾಂಪ್ರದಾಯಿಕ ಕುಸ್ತಿಯಲ್ಲಿ ನಾವು ಪ್ರಭುತ್ವ ಸಾಧಿಸಿದ್ದರೂ ಮ್ಯಾಟ್‌ನಲ್ಲಿ ಆಡುವ ಅಮೆಚೂರ್ ಕುಸ್ತಿಯಲ್ಲಿ ಪದಕಗಳ ಬರ ಕಾಣುತ್ತದೆ. ಆದರೆ ಕಳೆದ ಐದು ವರ್ಷಗಳಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದಾವಣಗೆರೆ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಕುಸ್ತಿ ತರಬೇತುದಾರರಾಗಿರುವ ವಿನೋದ್ ಕುಮಾರ್ ರಾಜ್ಯ ಕುಸ್ತಿಯಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಹಲವಾರು ದಶಕಗಳ ನಂತರ ಕರ್ನಾಟಕದ ಇಬ್ಬರು ಕುಸ್ತಿಪಟುಗಳು ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆಯಲ್ಲಿ ಹಿರಿಯ ಕೋಚ್ ವಿನೋದ್ ಕುಮಾರ್ ಅವರ ಪಾತ್ರ ಪ್ರಮುಖವಾದುದು.
ಮೊದಲ ಸ್ಥಾನಿ ವಿನೋದ್: ಕಾಲೇಜು ಶಿಕ್ಷಣದ ನಂತರ ವಿನೋದ್ ಬಿಪಿಎಡ್ (ದೈಹಿಕ ಶಿಕ್ಷಣ) ಪದವಿಗೆ ಸೇರಿ ಅಲ್ಲಿ ಮೊದಲ ಸ್ಥಾನ ಗಳಿಸಿದರು. ನಂತರ ಎಂಪಿಎಡ್‌ನಲ್ಲೂ ಮೊದಲ ಸ್ಥಾನ. ಕುಸ್ತಿ ಕೋಚಿಂಗ್ ಡಿಪ್ಲೋಮಾದಲ್ಲಿಯೂ ʼಎʼ ಶ್ರೇಣಿಯಲ್ಲಿ ತೇರ್ಗಡೆಯಾದರು. ಕುಸ್ತಿಯಲ್ಲಿ ಡಾಕ್ಟರೇಟ್ ಪಡೆದು ಅಪೂರ್ವ ಸಾಧನೆ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಡಾ. ಮಾದಿಲ್ ಅಲಗನ್ ಅವರ ನೆರವಿನಲ್ಲಿ ವಿನೋದ್ ಡಾಕ್ಟರೇಟ್ ಪದವಿ ಪೂರ್ಣಗೊಳಿಸಿದ್ದರು. ಕುಸ್ತಿಪಟುಗಳಿಗೆ ಆಹಾರ ಸೇವನೆಯ ಕ್ರಮದ ಅರಿವಿರುವದು ಮುಖ್ಯ ಈ ಹಿನ್ನೆಯಲ್ಲಿ ವಿನೋದ್ ಕುಮಾರ್ ಸ್ಪೋರ್ಟ್ಸ್ ನ್ಯೂಟ್ರಿಷನ್‌ನಲ್ಲಿ ಎಂಎಸ್‌ಸಿ ಪದವಿ ಗಳಿಸಿದರು. ತರಬೇತುದಾರರಿಗೆ ಕ್ರೀಡಾಪಟುಗಳ ಮನಸ್ಸನ್ನು ಅರಿತುಕೊಳ್ಳುವುದು ಮುಖ್ಯ, ಅದಕ್ಕಾಗಿ ಡಾ. ವಿನೋದ್ ಕುಮಾರ್ ಕ್ರೀಡಾಮನಃಶಾಸ್ತ್ರವನ್ನೂ ಕಲಿತು ಪರಿಪೂರ್ಣ ಕೋಚ್ ಆಗಿ ಈಗ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಕೀರ್ತಿ: 2021ರಲ್ಲಿ ಯೂರೋಪ್‌ನ ಹಂಗರಿಯಲ್ಲಿ ನಡೆದ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಫ್ರೀಸ್ಟೈಲ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು. ಈ ಐತಿಹಾಸಿಕ ಸಾಧನೆಯಲ್ಲಿ ತಂಡಕ್ಕೆ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದು ಕರ್ನಾಟಕದ ಹೆಮ್ಮೆಯ ಕೋಚ್ ವಿನೋದ್ ಕುಮಾರ್. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲೂ ಭಾರತ ಕುಸ್ತಿ ಪಡೆ ಐತಿಹಾಸಿಕ ಸಾಧನೆ ಮಾಡುವಲ್ಲಿ ವಿನೋದ್ ಕುಮಾರ್ ಅವರ ಪಾತ್ರ ಪ್ರಮುಖವಾಗಿತ್ತು. ಸಾಗರ್, ಜೈದೀಪ್, ಜಸ್ಕರಣ್ ಸಿಂಗ್, ಅಮಾನ್ ಮತ್ತು ಸಾಹಿಲ್ ಹೀಗೆ ಅನೇಕ ಕುಸ್ತಿಪಟುಗಳ ಯಶಸ್ಸಿನ ಹಿಂದೆ ವಿನೋದ್ ಕುಮಾರ್ ಅವರ ಶ್ರಮ ಇದೆ.
ಕುಸ್ತಿ ಸಂಸ್ಥೆಗೆ ಹೊಸ ಕಾಯಕಲ್ಪ: ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹೊಸದಾಗಿ ರೂಪಿತಗೊಂಡಿರುವ ಪದಾಧಿಕಾರಿಗಳ ತಂಡದಲ್ಲಿ ವಿನೋದ್ ಕುಮಾರ್ ಅವರು ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ವಿನೋದ್ ಕುಮಾರ್, “ಮೊದಲ ಬಾರಿಗೆ ಕುಸ್ತಿಪಟುಗಳಲ್ಲಿ ಆಟ ಮತ್ತು ಬದುಕಿನ ಬಗ್ಗೆ ಶಿಸ್ತು ಮೂಡಿಸುವಲ್ಲಿ ಕ್ರಮ, ಉತ್ತಮ ಗುಣ ಮಟ್ಟದ ತರಬೇತಿ, ಕುಸ್ತಿ ಸಂಸ್ಥೆಯಿಂದಲೇ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅಗತ್ಯವಾಗಿ ಬೇಕಾಗುವ ಮೂಲಭೂತ ಸೌಕರ್ಯ, ಪ್ರತಿ ಜಿಲ್ಲೆಯಲ್ಲಿಯೂ ತರಬೇತಿಗೆ ಅವಕಾಶ ಕಲ್ಪಿಸಲಾಗುವುದು,” ಎಂದರು.
“ಕ್ರೀಡೆಯ ಬಗ್ಗೆ ಅಪಾರ ಕಾಳಜಿ ಇರುವ ಬಿ, ಗುಣರಂಜನ್ ಶೆಟ್ಟಿ ಅವರ ಅಧ್ಯಕ್ಷತೆ ಹಾಗೂ ಜೆ. ಶ್ರೀನಿವಾಸ್ ಅವರು ಕಾರ್ಯದರ್ಶಿಯಾಗಿರುವುದು ಸಂಸ್ಥೆಗೆ ಮತ್ತಷ್ಟು ಬಲ ಬಂದಂತಾಗಿದೆ, ಅವರ ಮುಂದಾಳತ್ವದಲ್ಲಿ ಮತ್ತು ಇತರ ಪದಾಧಿಕಾರಿಗಳ ಸಹಯೋಗದೊಂದಿಗೆ ರಾಜ್ಯದಲ್ಲಿ ಕುಸ್ತಿ ಕ್ರೀಡೆಗೆ ಇನ್ನೂ ಹೆಚ್ಚಿನ ನೆರವು ಸಿಗುವಂತೆ ಮಾಡಲಾಗುವುದುಮ” ಎಂದರು.
ಒಬ್ಬ ಕ್ರೀಡಾಪಟುವಿನ ಯಶಸ್ಸಿನ ಹಿಂದೆ ಒಬ್ಬ ಉತ್ತಮ ಕೋಚ್ ಶ್ರಮ ಇರುತ್ತದೆ. ಯುವ ಸಮಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನೋದ್ ಕುಮಾರ್ ಮುಂದಿನ ದಿನಗಳಲ್ಲಿ ಉತ್ತಮ ಕುಸ್ತಿಪಟುಗಳನ್ನು ಹುಟ್ಟುಹಾಕುವ ಗುರಿ ಹೊಂದಿದ್ದಾರೆ. ತನ್ನ ಯಶಸ್ಸಿನ ಹಿಂದೆ ಪತ್ನಿ ನಿರೀಕ್ಷಿತ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ, ಕ್ರೀಡಾ ಇಲಾಖೆಯಲ್ಲಿ ಡಾ. ಜೀತೇಂದ್ರ ಶೆಟ್ಟಿ ಅವರ ಪ್ರೋತ್ಸಾಹ ಸದಾ ಸ್ಮರಣಿಯ ವಿನೋದ್ ಹೇಳಿದ್ದಾರೆ.