ಒಂಟಿಗೈ ಆಟಗಾರ, ಸ್ನೂಕರ್‌ನ ಏಕಲವ್ಯ, ಉಡುಪಿಯ ಶಯನ್ ಶೆಟ್ಟಿ!
ಎರಡೂ ಕೈ ಇದ್ದರೂ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಆಡುವುದೇ ಕಷ್ಟ. ಇನ್ನು ಒಂದು ಕೈಯಲ್ಲೇ ಆಡುವುದೆಂದರೆ? ಅದು ಇನ್ನೂ ಕಷ್ಟ. ಚಿಕ್ಕಂದಿನಲ್ಲಿ ಸಂಭವಿಸಿದ ದುರಂತದಲ್ಲಿ ಎಡಗೈಯನ್ನೇ ಕಳೆದುಕೊಂಡ ಬಾಲಕನೊಬ್ಬ ಒಂಟಿಗೈಯಲ್ಲೇ ಕ್ರೀಡಾ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಾನೀಗ ಹೇಳ ಹೊರಟಿದ್ದು ಇದೇ ತಿಂಗಳ ಕೊನೆಯ ವಾರದಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ದಿವ್ಯಾಂಗರ ವಿಶ್ವ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಒಂಟಿಗೈಯ ಸ್ನೂಕರ್ ತಾರೆ ಶಯನ್ ಶೆಟ್ಟಿಯ ಬಗ್ಗೆ. Ekalavy of Snooker Shayan Shetty playing Snooker in single hand and participating in Para world cup 2025 at Thailand.
ಶಯನ್ ಶೆಟ್ಟಿ ಅವರು ಈಗ ನೆಲೆಸಿರುವುದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ. ಅವರು ಜನಿಸಿದ್ದು ಉಡುಪಿಯಲ್ಲಿ. ಕ್ಯೂ ಸ್ಪೋರ್ಟ್ಸ್ ಜೊತೆಯಲ್ಲಿ ಪ್ರವಾಸೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಪುಣೆಯಲ್ಲಿ ಟ್ರಾವೆಲರ್ ಹಾಲಿಡೇ (http://www.travelr.in) ಎಂಬ ಕಂಪೆನಿಯನ್ನು ನಡೆಸುತ್ತಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮಣ್ ಮೂಲದವರು. ತಂದೆ ಬೆಳ್ಮಣ್ಣಿನ ಶೇಖರ ಶೆಟ್ಟಿ ಹಾಗೂ ತಾಯಿ ಪಡುಬೆಳ್ವೆ ಕುಂಜಾರಗಿರಿಯ ಮಮತಾ ಶೆಟ್ಟಿ. ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವೀಧರ ಶಯನ್ ಶೆಟ್ಟಿ 9 ನೇ ತರಗತಿಯಲ್ಲಿ ಓದುತ್ತಿರುವಾಗ ಲಿಫ್ಟ್ ಅಪಘಾತದಲ್ಲಿ ಎಡಗೈಯನ್ನೇ ಕಳೆದುಕೊಂಡು ಎಲ್ಲ ಹುಡುಗರಂತೆ ಕ್ರಿಕೆಟ್, ಫುಟ್ಬಾಲ್ ಹಾಗೂ ಇತರ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಂಚಿತರಾದರು. ಆದರೂ ತನ್ನಿಂದಾದ ಪ್ರಯತ್ನವನ್ನು ಮಾಡಿ ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಮೂರು ವರ್ಷಗಳ ಬಳಿಕ ಶಯನ್ ಹೊಸ ಬದುಕನ್ನು ಕಂಡುಕೊಂಡರು. ಆದರೆ ಒಂದು ಕೈ ಇಲ್ಲದ ಬದುಕು ಅದು. “ನಾನು ಆಗ ಬಹಳ ನೊಂದುಕೊಂಡಿದ್ದೆ, ಆದರೆ ಈಗ ಒಂಟಿಗೈಯಲ್ಲೇ ಮಾಡಿರುವ ಸಾಧನೆ ಖುಷಿಕೊಟ್ಟಿದೆ, ಸಾಧಿಸಬೇಕಾಗಿರುವುದ ಇನ್ನೂ ಇದೆ,” ಎನ್ನುತ್ತಾರೆ ಶಯನ್ ಶೆಟ್ಟಿ.
2000 ಇಸವಿಯಲ್ಲಿ ಸಂಭವಿಸಿದ ಈ ಘಟನೆ ಶಯನ್ ಶೆಟ್ಟಿ ಅವರ ಬದುಕಿಗೆ ಹೊಸ ತಿರುವು ನೀಡಿತೆಂದರೆ ತಪ್ಪಾಗಲಾರದು. ಸಂಕಷ್ಟಗಳ ನಡುವೆಯೇ ಶಯನ್ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದರು. ಗೆಳೆಯರ ನಡುವೆ ಆಗಾಗ ಸಾಂಗ್ಲಿಯಲ್ಲಿರುವ ಟೆಂಪ್ಟೇಷನ್ ಕ್ಲಬ್ (Temptation Club Sangli) ಕ್ಲಬ್‌ನಲ್ಲಿ ಗೆಳೆಯರು ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಆಡುವುದನ್ನು ನೋಡಲು ಹೋಗುತ್ತಿದ್ದರು. ಹಾಗೆ ಒಂದು ದಿನ, “ನನಗೂ ಆಸಕ್ತಿ ಇದೆ, ಆಡಲು ಅವಕಾಶ ಮಾಡಿಕೊಡಿ,ʼ ಎಂದು ಗೆಳೆಯರನ್ನು ವಿನಂತಿಸಿದರು. ಮೊದಲ ಮೊದಲು ಕಷ್ಟವಾಯಿತು. ಆದರೆ ಕೆಲ ದಿನಗಳಲ್ಲೇ ಶಯನ್ ಸ್ನೂಕರ್ ಟೇಬಲ್‌ನಲ್ಲಿ ಪಂಟರ್ ಎನಿಸಿದರು. ಟೇಬಲ್ ಕುಷನ್‌ನ ನೆರವಿನಿಂದ ಶಯನ್ ಲೀಲಾಜಾಲವಾಗಿ ಆಟದಲ್ಲಿ ಪರಿಣತಿ ಪಡೆದರು. ಅಲ್ಲದೆ ಸಾಮಾನ್ಯರೊಂದಿಗೆ ಸ್ಪರ್ಧಿಸಲಾರಂಭಿಸಿದರು. ಏಕೆಂದರೆ ದಿವ್ಯಾಂಗರಿಗಾಗಿಯೇ ಪ್ರತ್ಯೇಕ ಬಿಲಿಯರ್ಡ್ಸ್ ಟೇಬಲ್ ಇದ್ದಿರಲಿಲ್ಲ. ಗುರುವಿಲ್ಲದೆ ತಾನಾಗಿಯೇ ಕಲಿತ ಶಯನ್ ಶೆಟ್ಟಿಯನ್ನು “ಸ್ನೂಕರ್‌ನ ಏಕಲವ್ಯ” ಎಂದೇ ಕರೆಯುತ್ತಾರೆ. ಪುಣೆಯಲ್ಲಿ ಉದ್ಯಮ ಆರಂಭಿಸಿದಾಗಿನಿಂದ ಶಯನ್ ಶೆಟ್ಟಿ ಇಲ್ಲಿನ ಅರಿಝೋನ ಕ್ಲಬ್‌ನಲ್ಲಿ ಅಭ್ಯಾಸ ಮಾಡುತ್ತಾರೆ.
ಸ್ನೂಕರ್‌ಗಾಗಿ ಎಂಜಿನಿಯರ್ ಹುದ್ದೆ ಸೇರಲು ನಕಾರ: ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವೀಧರ ಶಯನ್ ಶೆಟ್ಟಿ ಅವರಿಗೆ ಹಲವಾರು ಕಂಪೆನಿಗಳಿಂದ ಉದ್ಯೋಗದ ಅವಕಾಶ ಬಂದಿತ್ತು. ಆದರೆ ಸ್ನೂಕರ್‌ನಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಪುಣೆಯಲ್ಲಿ ಗ್ಯಾಲೆಕ್ಸಿ ಸೈನ್ಸ್ ಅಕಾಡೆಮಿ ಎಂಬ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಪಿಯುಸಿ ವಿಜ್ಞಾನದ ಮಕ್ಕಳಿಗೆ ಟ್ಯೂಷನ್ ನೀಡುವ ಕೆಲಸ ಆರಂಭಿಸಿದರು. “ವಿವಿಧ ಕಂಪೆನಿಗಳಿಂದ ಉದ್ಯೋಗಕ್ಕಾಗಿ ಆಫರ್ ಬಂದಿತ್ತು. ಆದರೆ ಸ್ನೂಕರ್‌ನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬುದು ನನ್ನ ಹಂಬಲವಾಗಿತ್ತು. ಕೆಲಸಕ್ಕೆ ಸೇರಿದರೆ ಅಭ್ಯಾಸಕ್ಕೆ ಅವಕಾಶ ಸಿಗುವುದಿಲ್ಲ, ಇದಕ್ಕಾಗಿ ಶೈಕ್ಷಣಿಕ ತರಬೇತಿ ನೀಡುವ ಕೆಲಸ ಆರಂಭಿಸಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡುತ್ತಿದ್ದೆ,” ಎಂದು ಶಯನ್ ಶೆಟ್ಟಿ ಕೊರೋನಾ ಪೂರ್ವದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಬೇರೆಯವರ ಆಟ ನೋಡಲು ಮೊದಲಿಗೇ ಹಾಜರ್: ಒಂಟಿಗೈಯಲ್ಲಿ ಸ್ನೂಕರ್ ಆಡುವುದು ಸುಲಭವಲ್ಲ. ದಿವ್ಯಾಂಗ ಆಟಗಾರರ ಉಪಯೋಗಕ್ಕೆ ಕೆಲವು ಸಲಕರಣೆಗಳಿದ್ದರೂ ಶಯನ್ ಅವುಗಳನ್ನು ಉಪಯೋಗಿಸುತ್ತಿರುಲಿಲ್ಲ. ಹಿರಿಯ ಆಟಗಾರರ ಆಟ ನೋಡಲು ಎಲ್ಲರಿಗಿಂತ ಮುಂಚಿತವಾಗಿ ಕ್ಲಬ್‌ನಲ್ಲಿ ಹಾಜರಿರುತ್ತಿದ್ದರು. “ಸಲಕರಣೆಗಳನ್ನು ಉಪಯೋಗಿಸಿ ಆಡುವುದರಲ್ಲಿ ಪ್ರಯೋಜನವಿಲ್ಲ. ಅದು ಟೈಂ ಪಾಸ್ ಕ್ರೀಡೆಯಾಗುತ್ತದೆ. ಸಲವಾಲುಗಳಿಗಾಗಿ ಒಂದೇ ಕೈಲ್ಲಿ ಆಡುತ್ತಿದ್ದೆ. ಅದು ಕೂಡ ಸಾಮಾನ್ಯರೊಂದಿಗೆ. ಬೇರೆಯವರ ಆಟವನ್ನು ನೋಡಿ ಕಲಿತದ್ದೇ ಹೆಚ್ಚು. ಜೊತೆಯಲ್ಲಿ ಯೂಟ್ಯೂಬ್‌ನಲ್ಲಿ ಅಂತಾರಾಷ್ಟ್ರೀಯ ಆಟಗಾರರು ಹಾಗೂ ಭಾರತದ ಆಟಗಾರರ ಆಟವನ್ನು ನೋಡಿ ಕಲಿಯುತಿದ್ದೆ. ಇದು ನನ್ನ ಆಟವನ್ನ ಉತ್ತಮಪಡಿಸಿಕೊಳ್ಳಲು ಸಾಧ್ಯವಾಯಿತು. ಕ್ಯೂ ಸ್ಟಿಕ್ ಹಾಗೂ ಕ್ಯೂಬಾಲ್ ನಡುವಿನ ಅಂತರ ಬಹಳ ಇದ್ದಾಗ ಮಾತ್ರ ಟೇಬಲ್ ಕುಷನ್‌ನ ನೆರವು ಪಡೆಯುತ್ತಿದ್ದೆ. ಅದು ಸಾಮಾನ್ಯವಾಗಿ ಎಲ್ಲರೂ ಪಡೆಯುತ್ತಾರೆ.
ಶಯನ್ ಆಟಕ್ಕೆ ಪಂಕಜ್ ಆಡ್ವಾಣಿ ಮೆಚ್ಚುಗೆ: 2010ರಲ್ಲಿ ಶಯನ್ ಶೆಟ್ಟಿ ಪುಣೆಯಲ್ಲಿ ಮೊದಲ ಟೂರ್ನಿಯನ್ನು ಆಡಿದರು. ರಿಸರ್ವ್ ಆಟಗಾರನಾಗಿ ಹೋಗಿ ಅದ್ಭುತ ಪ್ರದರ್ಶನ ತೋರಿದರು. ಟೂರ್ನಿಯಲ್ಲಿ ಉತ್ತಮ ಆಟಗಾರನೆಂಬ ಗೌರವಕ್ಕೂ ಪಾತ್ರರಾದರು. ಇಂಟರ್ ಕ್ಲಬ್ ಟೂರ್ನಿಗಳಲ್ಲಿ ಸಾಮಾನ್ಯರೊಂದಿಗೆ ಆಡಿ ಪ್ರಭುತ್ವ ಸಾಧಿಸುವುದು ಒಂಟಿಗೈಯಲ್ಲಿ ಅಷ್ಟು ಸುಲಭವಲ್ಲ. ಆದರೆ ಸ್ನೂಕರ್‌ನ ಏಕಲವ್ಯ ಶಯನ್‌ಗೆ ಅದು ಅಸಾಧ್ಯವಾಗಲಿಲ್ಲ.
ಅದೇ ವರ್ಷ ಪುಣೆಯಲ್ಲಿ ಅಖಿಲ ಭಾರತ ಸ್ನೂಕರ್ ಚಾಂಪಿಯನ್‌ಷಿಪ್ ನಡೆಯಿತು. ಈ ಟೂರ್ನಿಯಲ್ಲಿ ಶಯನ್ ಸಾಮಾನ್ಯರೊಂದಿಗೆ ಸ್ಪರ್ಧಿಸಿ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದರು. ಆದರೆ ಅವರಿಗೆ ಇಲ್ಲೊಂದು ಗೌರವ ಸಿಕ್ಕಿತು, ಅದು ವಿಶ್ವ ಸ್ನೂಕರ್ ಚಾಂಪಿಯನ್ ಪಂಕಜ್ ಆಡ್ವಾಣಿ ಅವರಿಂದ ಮೆಚ್ಚುಗೆಯ ಮಾತು. “ಸುಮಾರು 20 ನಿಮಿಷಗಳ ಕಾಲ ಪಂಕಜ್ ಆಡ್ವಾಣಿ ಅವರು ನನ್ನ ಆಟವನ್ನು ಕುತೂಹಲದಿಂದ ವೀಕ್ಷಿಸಿದರು. ಅವರಿಗೆ ಬಹಳ ಅಚ್ಚರಿಯಾಯಿತು. ಬಹಳ ಹೊತ್ತು ನನ್ನೊಂದಿಗೆ ಮಾತನಾಡಿದರು. ಕೆಲವು ಸಲಹೆಗಳನ್ನೂ ನೀಡಿದರು. ,” ಎಂದು ಶಯನ್ ಶೆಟ್ಟಿ ನೆನಪಿನ ಬುತ್ತಿಯನ್ನು ಹಂಚಿಕೊಂಡರು.
ಬೆಲ್ಜಿಯಂಗೆ ಆಯ್ಕೆಯಾದರೂ ಕೊರೋನ ಅಡ್ಡಿ: ರಾಷ್ಟ ಮಟ್ಟದಲ್ಲಿ ನಡೆದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಶಯನ್ ಶೆಟ್ಟಿ ಅವರಿಗೆ ವಿಶ್ವ ದಿವ್ಯಾಂಗರ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಂಸ್ಥೆ ನಡೆಸುವ ಬೆಲ್ಜಿಯಂ ಓಪನ್‌ನಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿತ್ತು. ಆದರೆ ಕೊರೋನ ಕಾರಣ ಆ ಟೂರ್ನಿ ರದ್ದಾಗಿತ್ತು. ಈ ವರ್ಷ ಅಂದರೆ ಇದೇ ತಿಂಗಳು ಶಯನ್ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ವಿಶ್ವ ಪ್ಯಾರಾ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸ್ನೂಕರ್ ಮತ್ತು ಬಲಿಯರ್ಡ್ಸ್‌ಗೆ ಒಲಿಂಪಿಕ್ಸ್‌ನಲ್ಲಿ ಅವಕಾಶ ನೀಡಬೇಕು: ಸ್ನೂಕರ್ ಹಾಗೂ ಬಿಲಿಯರ್ಡ್ಸ್‌ನ್ನು ಈಗ ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ ಆಡುತ್ತಿದ್ದಾರೆ. ಹಿಂದೆ ಮಹಿಳೆಯರು ಆಡುತ್ತಿಲ್ಲ ಎಂಬ ಕಾರಣ ನೀಡಿ ಒಲಿಂಪಿಕ್ಸ್‌ನಿಂದ ಕೈ ಬಿಡಲಾಗಿತ್ತು. 1960ರಲ್ಲಿ ರೋಮ್‌ನಲ್ಲಿ ನಡೆದ ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ನೂಕರ್ ಗೆ ಅವಕಾಶ ನೀಡಲಾಗಿತ್ತು. ಆಗ ಪುರುಷರು ಮಾತ್ರ ಸ್ಪರ್ಧಿಸುತ್ತಿದ್ದರು. 1972ರ ಹೈಡಲ್‌ಬರ್ಗ್ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ವಿಭಾಗಗಳಲ್ಲಿ ಸ್ನೂರಕ್ ಸ್ಪರ್ಧೆ ನಡೆಯಿತು. ಆದರೂ ಪುರುಷರು ಮಾತ್ರ ಸ್ಪರ್ಧಿಸಿದರು. ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಮೂರು ದೇಶಗಳಿಂದ ನಾಲ್ಕು ಸ್ಪರ್ಧಿಗಳು ಪಾಲ್ಗೊಂಡಿದ್ದರು. ವರ್ಷದಿಂದ ವರ್ಷಕ್ಕೆ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಯಿತು. 1988ರಲ್ಲಿ ಇಂಗ್ಲೆಂಡ್‌ನ ಸ್ಟೋಕ್ ಮಾಂಡೆವಿಲ್ಲೆಯಲ್ಲಿ ನಡೆದ 7ನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ರಾಷ್ಟ್ರಗಳಿಂದ ಆರು ಮಂದಿ ಸ್ಪರ್ಧಿಗಳಿದ್ದರು. ಮಹಿಳಾ ಸ್ಪರ್ಧಿಗಳು ಇಲ್ಲದ ಕಾರಣ 1988ರಿಂದ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ನೂಕರ್ ಸ್ಪರ್ಧೆಯನ್ನು ಕೈ ಬಿಡಲಾಯಿತು. 2032ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೆ ಸ್ನೂಕರ್‌ಗೆ ಅವಕಾಶ ಇದೆ ಎಂಬ ಸುದ್ದಿ ಕೇಳಿ ಬಂದಿದೆ.
Please Subscribe Our YouTube sports channel
“ನಾವು ಯಾವುದಕ್ಕೂ ಮೊದಲು ರಾಷ್ಟ್ರೀಯ ಫೆಡರೇಷನ್ ಸ್ಥಾಪಿಸಬೇಕು, ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಅದು ಬೆಂಗಳೂರಿನಲ್ಲೇ ಸ್ಥಾಪನೆಯಾಗಬಹುದು. ಜಾಗತಿಕ ದಿವ್ಯಾಂಗರ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಸಂಸ್ಥೆಯ ಜೊತೆಗೆ ಸಂಪರ್ಕ ಹೊಂದಿದ್ದೇವೆ. ನಮ್ಮ ಪ್ರಕಾರ 2028ರ ಪ್ಯಾರಾಲಿಂಪಿಕ್ಸ್‌ನಲ್ಲಿ ಅವಕಾಶ ನೀಡಬೇಕು. ಸಾಕಷ್ಟು ಪ್ಯಾರಾ ಆಟಗಾರರು ಇದ್ದಾರೆ. ಅವರೆಲ್ಲರಿಗೂ ಅವಕಾಶ ಸಿಕ್ಕಂತಾಗುತ್ತದೆ. ಇನ್ನೂ ಅನೇಕರು ಈ ಕ್ರೀಡೆಯನ್ನು ಆಯ್ಕೆ ಮಾಡಲು ಪ್ರೇರಣೆ ಸಿಕ್ಕಂತಾಗುತ್ತದೆ,” ಎಂದು ಶಯನ್ ಶೆಟ್ಟಿ ಹೇಳಿದ್ದಾರೆ.