Thursday, November 21, 2024

ಆಸೀಸ್‌ನಲ್ಲಿ ಮಂಗಳೂರಿನ ಮಿಂಚು ಅಕ್ಷಯ್‌ ಬಲ್ಲಾಳ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ಮಂಗಳೂರಿನ ಕ್ರಿಕೆಟಿಗರೊಬ್ಬರು “ಯುನಿವರ್ಸಲ್‌ ಬಾಸ್‌” ಖ್ಯಾತಿಯ ಆಟಗಾರ ಕ್ರಿಸ್‌ ಗೇಲ್‌ ಜೊತೆಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್‌ ಅಂಗಣದಲ್ಲಿ ಆಡುತ್ತಿದ್ದಾರೆಂದರೆ ಅದು ಕನ್ನಡಿಗರ ಹೆಮ್ಮೆ. ಅದೊಂದು ಅಪೂರ್ವ ಕ್ಷಣ. ಆ ಗೌರವಕ್ಕೆ ಪಾತ್ರರಾದ ಆಟಗಾರ ಬೇರೆ ಯಾರೂ ಅಲ್ಲ. ಕರ್ನಾಟಕ ಮತ್ತು ಕೇರಳ ಕ್ರಿಕೆಟ್‌ನಲ್ಲಿ ಮಿಂಚಿದ ಆಲ್ರೌಂಡರ್‌ ವಿಟ್ಲ ಅರಮನೆ ಮೂಲದ, ಮಂಗಳೂರಿನ ಕದ್ರಿ ಕಂಬಳದ ಅಕ್ಷಯ್‌ ಬಲ್ಲಾಳ್‌.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ದಿ ಟ್ವಿಲೈಟ್‌ ಟಿ20 ಕ್ರಿಕೆಟ್‌ನಲ್ಲಿ ಎಂಡೆವೊರ್‌ ಹಿಲ್ಸ್‌ ಕ್ರಿಕೆಟ್‌ ಕ್ಲಬ್‌ ಪರ ಆಡುತ್ತಿರುವ ಅಕ್ಷಯ್‌ ಬಲ್ಲಾಳ್‌ ಜಗತ್ತಿನ ಶ್ರೇಷ್ಠ ಆಟಗಾರರಾದ ಕ್ರಿಸ್‌ ಗೇಲ್‌, ತಿಲಕರತ್ನೆ ದಿಲ್ಷಾನ್‌, ಲಹಿರು ತಿರಿಮನ್ನೆ, ದಿಮುತ್‌ ಕರುಣಾರತ್ನೆ, ಶೊಯೇಬ್‌ ಮಲಿಕ್‌ ಅವರೊಂದಿಗೆ ಆಡುತ್ತಿದ್ದಾರೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಹೋಮ್ಸ್‌ಗ್ಲೆನ್‌ ಶಿಕ್ಷಣ ಸಂಸ್ಥೆಯಲ್ಲಿ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಅಧ್ಯಯನ ಮಾಡುತ್ತಿರುವ ಅಕ್ಷಯ್‌ ಬಲ್ಲಾಳ್‌ ಬಿಡುವಿನ ಸಮಯದಲ್ಲಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ಲೋಬೋ ಟ್ಯಾಲೆಂಟ್‌ ಎಂಟರ್ಟೈನ್‌ಮೆಂಟ್‌ ಜೊತೆ ಒಪ್ಪಂದ ಮಾಡಿಕೊಂಡಿತುವ ಅಕ್ಷಯ್‌ ಆ ಕಂಪೆನಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜಗತ್ತಿನ ಶ್ರೇಷ್ಠ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಈ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ.

ಆಸ್ಟ್ರೇಲಿಯಾದ ಚಾಡ್‌ಸ್ಟೋನ್‌ನಿಂದ sportsmail ಜೊತೆ ಮಾತನಾಡಿದ ಅಕ್ಷಯ್‌ ಬಲ್ಲಾಳ್‌, “ಕ್ರಿಕೆಟ್‌ ಬದುಕಿನಲ್ಲಿ ಒಂದು ದಿನ ಕ್ರಿಸ್‌ ಗೇಲ್‌ ಜೊತೆ ಆಡುತ್ತೇನೆ ಎಂದು ಊಹಿಸಿಯೂ ಇರಲಿಲ್ಲ. ಆದರೆ ಇಂದು ಆ ಅವಕಾಶ ಸಿಕ್ಕಿತು. ಗಂಭೀರ ಕ್ರಿಕೆಟ್‌ನ ಜೊತೆಯಲ್ಲೇ ಮನರಂಜನೆ ನೀಡುವ ಆಟಗಾರ ಗೇಲ್‌. ನಾವು ಪಂದ್ಯದಲ್ಲಿ ಸೋತೆವು. ಆದರೆ ಇನ್ನಿಂಗ್ಸ್‌ ಮುಗಿಯುತ್ತಿದ್ದಂತೆ ಗೇಲ್‌, ಅಲ್ಲಿರುವ ಪ್ರೇಕ್ಷಕರ ಜೊತೆ ನೃತ್ಯ ಮಾಡುತ್ತಿದ್ದರು. ಈ ಕಾರಣಕ್ಕಾಗಿ ಇಡೀ ಕ್ರಿಕೆಟ್‌ ಜಗತ್ತು ಅವರನ್ನು ಮೆಚ್ಚಿದೆ. ನಮ್ಮ ತಂಡದಲ್ಲಿ ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್ಷಾನ್‌ ಕೂಡ ಇದ್ದಾರೆ. ಲಹಿರು ತಿರಿಮನ್ನೆ, ಪಾಕಿಸ್ತಾನದ ಆಲ್ರೌಂಡರ್‌ ಶೊಯೇಬ್‌ ಮಲಿಕ್‌ ಕೂಡ ಇದ್ದಾರೆ, ಇವರೆಲ್ಲರೊಂದಿಗೆ ಆಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ,” ಎಂದರು.

“ಆಸ್ಟ್ರೇಲಿಯಾದಿಂದ ಕೋಚಿಂಗ್‌ನಲ್ಲಿ ಲೆವೆಲ್‌ ಒನ್‌ ಕೋರ್ಸ್‌ ಪೂರ್ಣಗೊಳಿಸಿರುವೆ, ಈಗ ಲೆವೆಲ್‌ ಟು ಕೋರ್ಸ್‌ ಪೂರ್ಣಗೊಳಿಸುವ ಗುರಿ ಹೊಂದಿರುವೆ, ಈ ನಡುವೆ ಎಂಡೆವೊರ್‌ ಹಿಲ್ಸ್‌ ಕ್ರಿಕೆಟ್‌ ಕ್ಲಬ್‌ನ ಜೂನಿಯರ್‌ ಡೆವಲಪ್‌ಮೆಂಟ್‌ ಯೋಜನೆಯಲ್ಲಿ ಸಹಾಯಕ ಕೋಚ್‌ ಆಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ, ಮುಂದೆ ಕೋಚಿಂಗ್‌ನಲ್ಲಿ ಮುಂದುವರಿಯಬೇಕೆಂಬ ಹಂಬಲ ಇದೆ. ಸದ್ಯ ವೃತ್ತಿಪರ ಕ್ರಿಕೆಟ್‌ ಕಡೆಗೆ ಹೆಚ್ಚಿನ ಒತ್ತು ನೀಡುವೆ,” ಎಂದರು.

ಕೇರಳದಲ್ಲಿ ಅರಳಿದ ಕನ್ನಡಿಗ ಅಕ್ಷಯ್‌:

13 ಮತ್ತು 15 ವಯೋಮಿತಿಯ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ 32 ವರ್ಷ ಹರೆಯದ ಅಕ್ಷಯ್‌ ಬಲ್ಲಾಳ್‌ ತಮ್ಮ ಹೆಚ್ಚಿನ ಕ್ರಿಕೆಟ್‌ ಬದುಕನ್ನು ಕೇರಳದಲ್ಲಿ ಕಳೆದಿದ್ದಾರೆ. ಕರ್ನಾಟಕದಲ್ಲಿ ಅವಕಾಶ ಕ್ಷೀಣಿಸಿದಾಗ ಅವರು ಈ ತೀರ್ಮಾನವನ್ನು ಕೈಗೊಂಡರು. 19 ಮತ್ತು 22 ವರ್ಷವಯೋಮಿತಿಯ ಕೇರಳ ತಂಡದಲ್ಲಿ ಆಡಿದ ಅಕ್ಷಯ್‌ ನಂತರ ವಿಜಯ ಹಜಾರೆ ಟ್ರೋಫಿಯಲ್ಲಿಯೂ ಕೇರಳ ತಂಡವನ್ನು ಪ್ರತಿನಿಧಿಸಿದರು. ಉತ್ತಮ ಆಲ್ರೌಂಡರ್‌ ಆಗಿರುವ ಅಕ್ಷಯ್‌ ಆಫ್‌ ಮತ್ತು ಲೆಗ್‌ ಸ್ಪಿನ್‌ ಬೌಲಿಂಗ್‌ನಲ್ಲಿ ನಿಪುಣರು. ಕೇರಳ ರಣಜಿ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಅಕ್ಷಯ್‌, ರಣಜಿಯಲ್ಲಿ ಕಾಯ್ದಿರಿಸಿದ ಆಟಗಾರರಾಗಿದ್ದರು. ಸರ್‌ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಕೇರಳ ಪರ ಆಡಿದ್ದರು. ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಮಂಗಳೂರು ಯುನೈಟೆಡ್‌, ಬೆಳಗಾವಿ ಪ್ಯಾಂಥರ್ಸ್‌ ಹಾಗೂ ಶಿವಮೊಗ್ಗ ಲಯನ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದರು.

ಕೇರಳ ತಂಡಕ್ಕೆ ನಾಯಕ:  ಎರಡು ಋತುವಿನಲ್ಲಿ ಕೇರಳದ 25 ವರ್ಷ ವಯೋಮಿತಿಯ ತಂಡದ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು. ಕೇರಳ ತಂಡದ ಉತ್ತಮ ಆಟಗಾರನೆಂಬ ಗೌರವಕ್ಕೂ ಪಾತ್ರರಾಗಿದ್ದರು. ಈ ಅವಧಿಯಲ್ಲಿ ಒಮ್ಮೆ ಸರಣಿ ಶ್ರೇಷ್ಠ ಗೌರವಕ್ಕೂ ಭಾಜನರಾದರು. 22 ವರ್ಷ ವಯೋಮಿತಿಯ ಕ್ರಿಕೆಟಿಗರಿಗಾಗಿ ಕೇರಳ ಕ್ರಿಕೆಟ್‌ ಸಂಸ್ಥೆ ನೀಡುವ ವಾರ್ಷಿಕ ಪ್ರಶಸ್ತಿಯನ್ನು ಸ್ವೀಕರಿಸಿದ ಗೌರವ ಅಕ್ಷಯ್‌ ಬಲ್ಲಾಳ್‌ ಅವರಿಗೆ ಸಲ್ಲುತ್ತದೆ.

2016ರಲ್ಲಿ ಮಂಗಳೂರಿನಲ್ಲಿ ನಡೆದ ಮಂಗಳೂರು ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ್ದ ಅಕ್ಷಯ್‌ ಬಲ್ಲಾಳ್‌, ಉತ್ತಮ ಪ್ರದರ್ಶನ ತೋರಿ ಸರಣಿ ಶ್ರೇಷ್ಠ, ಅತಿ ಹೆಚ್ಚು ರನ್‌ ಗಳಿಸಿ ಆರೆಂಜ್‌ ಕ್ಯಾಪ್‌, ಅತಿ ಹೆಚ್ಚು ವಿಕೆಟ್‌ ಗಳಿಸಿ ಪರ್ಪಲ್‌ ಕ್ಯಾಪ್‌ ಗಳಿಸಿದ ಅದ್ಭುತ ಆಟಗಾರ.

ಮಂಗಳೂರು ವಲಯದ 19 ವರ್ಷ ವಯೋಮಿತಿಯ ತಂಡದ ಪ್ರಧಾನ ಕೋಚ್‌, ಮಂಗಳೂರು ವಲಯ 25 ವರ್ಷ ವಯೋಮಿತಿಯ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ, ಬೆಂಗಳೂರಿನ ಸೋಷಿಯಲ್‌ ಕ್ರಿಕೆಟ್‌ ಕ್ಲಬ್‌ನ ಸಹಾಯಕ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿರುತ್ತಾರೆ.

ಬೆಂಗಳೂರಿನ ಸುರಾನ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುವ ಅಕ್ಷಯ್‌ ಬಲ್ಲಾಳ್‌ ಆಸ್ಟ್ರೇಲಿಯಾ ಕ್ರಿಕೆಟ್‌ನ ಬಗ್ಗೆ ಮಾತನಾಡಿ, “ಇಲ್ಲಿ ಭಾರತದಲ್ಲಿರುವಷ್ಟು ಪಂದ್ಯಗಳು ನಡೆಯುವುದಿಲ್ಲ. ಹೆಚ್ಚಾಗಿ ಬಿಡುವಿನ ದಿನಗಳಲ್ಲಿ ಮಾತ್ರ ಕ್ರಿಕೆಟ್‌ ಆಡುತ್ತಾರೆ. ಇಲ್ಲಿ ವೃತ್ತಿಪರತೆಗೆ ಮೊದಲ ಆದ್ಯತೆ. ಉತ್ತಮವಾಗಿ ಆಡುವ ಯಾವುದೇ ವಯಸ್ಸಿನ ಆಟಗಾರನಿಗೂ ಅವಕಾಶ ನೀಡುತ್ತಾರೆ. ಇಲ್ಲಿ ಕ್ರಿಕೆಟ್‌ಗಿಂತ ಎಎಫ್‌ಎಲ್‌ಗೆ (ಆಸ್ಟ್ರೇಲಿಯನ್‌ ಫುಟ್ಬಾಲ್‌ ಲೀಗ್‌) ಹೆಚ್ಚಿನ ಒತ್ತು ನೀಡುತ್ತಾರೆ. ಯಾವುದೇ ಕ್ರೀಡೆ ಇರಲಿ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ. ಕಠಿಣ ಅಭ್ಯಾಸದ ಮೂಲಕ ಆಟಗಾರರನ್ನು ಪಳಗಿಸುತ್ತಾರೆ. ಇಲ್ಲಿನ ಕ್ಲಬ್‌ಗಳಲ್ಲಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನದ ಆಟಗಾರರೇ ಹೆಚ್ಚಿರುತ್ತಾರೆ,” ಎಂದರು.

ಮಂಗಳೂರಿನ ಮೋಹನ್‌ ಕೃಷ್ಣ ಮತ್ತು ಶ್ಯಾಮಲ ಕುಮಾರಿಯವರ ಅವಳಿ ಮಕ್ಕಳಲ್ಲಿ ಒಬ್ಬರಾಗಿರುವ ಅಕ್ಷಯ ಬಲ್ಲಾಳ್‌ ಚಿಕ್ಕಂದಿನಿಂದಲೂ ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಇವರ ಸಹೋದರಿ ಅಕ್ಷತಾ. ಇನ್ನೊಬ್ಬ ಸಹೋದರ ಆಕಾಶ್‌ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಅಕ್ಷಯ್‌ ಅವರ ಪತ್ನಿ ಐಶ್ವರ್ಯ ಬಲ್ಲಾಳ್‌ ಪತಿಯ ಕ್ರಿಕೆಟ್‌ ಬದುಕಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.

“ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಈಗ ಕ್ರೀಡೆಯಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಆಸ್ಟ್ರೇಲಿಯಾದಲ್ಲಿ ಪ್ರತಿಯೊಂದು ಕ್ರೀಡೆಗೂ ಪ್ರಾಮುಖ್ಯತೆ ನೀಡುತ್ತಾರೆ. ಇಲ್ಲಿ ತರಬೇತಿ ಪಡೆಯಲು ಜಗತ್ತಿನ ವಿವಿಧ ಭಾಗಗಳಿಂದ ಆಗಮಿಸುತ್ತಾರೆ. ಕ್ರೀಡೆಗೆ ಹೆಚ್ಚಿನ ಒತ್ತು ಕೊಡುತ್ತಿರುವ ದೇಶಗಳಲ್ಲಿ ಆಸ್ಟ್ರೇಲಿಯಾ ಅಗ್ರ ಸ್ಥಾನದಲ್ಲಿದೆ. ಮೆಲ್ಬರ್ನ್‌ ನಗರವನ್ನು ಜಗತ್ತಿನ ಕ್ರೀಡಾರಾಜಧಾನಿ ಎಂದು ಗುರುತಿಸುತ್ತಾರೆ. ಆಸ್ಟ್ರೇಲಿಯಾ ಪ್ರತಿಯೊಂದು ಕ್ರೀಡೆಯಲ್ಲೂ ಚಾಂಪಿಯನ್‌ ಪಟ್ಟವನ್ನು ತನ್ನದಾಗಿಸಿಕೊಳ್ಳುತ್ತದೆ ಹೇಗೆ ಎಂಬುದನ್ನು ಕಂಡುಕೊಳ್ಳಬೇಕಾದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ ತರಬೇತಿಯನ್ನು ಗಮನಿಸಬೇಕು,” ಎಂದು ಅಕ್ಷಯ್‌ ಬಲ್ಲಾಳ್‌ ಹೇಳಿದರು.

Related Articles