ಮುಂಬಯಿ: ಆನ್‌ಲೈನ್‌ನಲ್ಲಿ ಕಾಣುವ ಕೆಲವು ದೇಶದ ಪಂದ್ಯಗಳ ಸ್ಕೋರ್ ಕಾರ್ಡ್ ಅಸಲಿ ಎಂದು ತಿಳಿಯಬೇಡಿ. ಐಸಿಸಿಯಿಂದ ಹಣ ಪಡೆಯುವುದಕ್ಕಾಗಿ ಕೆಲವರು ನಕಲಿ ಕ್ರಿಕೆಟ್ ಕೂಡ ಆಡುತ್ತಿದ್ದಾರೆ! ಎಂದು ಫ್ರಾನ್ಸ್‌ನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವುದಾಗಿ ಕ್ರಿಕ್‌ಇನ್ಫೋ ತಿಳಿಸಿದೆ. Fake cricket matches in France to claim ICC funds.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯಿಂದ ಮಹಿಳಾ ಕ್ರಿಕೆಟ್ ಸಂಸ್ಥೆಗೆ ಆರ್ಥಿಕ ನೆರವನ್ನು ಪಡೆಯುವ ಸಲುವಾಗಿ ಫ್ರಾನ್ಸ್ ಕ್ರಿಕೆಟ್ (ಎಫ್‌ಸಿ) ನಕಲಿ ಕ್ರಿಕೆಟ್ ಆಡುತ್ತಿರುವುದು ಬೆಳಕಿಗೆ ಬಂದಿದೆ. ಪಂದ್ಯ ನಡೆದಿರುವುದೇ ಇಲ್ಲ, ಆದರೆ ಸ್ಕೋರ್ ಬೋರ್ಡ್ ಮಾತ್ರ ಆನ್‌ಲೈನ್‌ನಲ್ಲಿ ನಿಮಗೆ ಸಿಗುತ್ತದೆ.
ಫ್ರಾನ್ಸ್ ಮಾಜಿ ಆಟಗಾರ್ತಿ ಹಾಗೂ ಫ್ರಾನ್ಸ್ ಕ್ರಿಕೆಟ್ ಮಂಡಳಿಯ ಸದಸ್ಯೆ ಟ್ರೇಸಿ ರೋಡ್ರಿಗಸ್ ಅವರು ಫ್ರಾನ್ಸ್ 24 ಸುದ್ದಿ ಸಂಸ್ಥೆಯ ಮುಂದೆ ಈ ಸಂಗತಿಯನ್ನು ಬಲು ಮಾಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಈ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಐಸಿಸಿ ಹೇಳಿಕೆ ನೀಡಿದೆ. 2021ರಲ್ಲಿ ಮಂಡಳಿಯಲ್ಲಿದ್ದ ರೋಡ್ರಿಗಸ್ ಈ ವರ್ಷದ ಆರಂಭದಲ್ಲಿ ತೊರೆದಿದ್ದರು. ಮಹಿಳಾ ಕ್ರಿಕೆಟ್ ನಡೆಯುತ್ತಿದೆ ಎಂದು ಫ್ರಾನ್ಸ್ ಮಂಡಳಿ ಹೇಳಿಕೊಳ್ಳುತ್ತಿದೆ, ಸ್ಕೋರ್ ಬೋರ್ಡ್ ಕೂಡ ಇರುತ್ತದೆ. ಆದರೆ ಅಂಗಣಕ್ಕೆ ಹೋಗಿ ನೋಡಿದರೆ ಅಲ್ಲಿ ಪಂದ್ಯವೇ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಎರಡು ಮೂರು ಬಾರಿ ಕ್ರಿಕೆಟ್ ಟೂರ್ನಿ ನಡೆಯುವ ಅಂಗಣಕ್ಕೆ ಹೋಗಿದ್ದೇನೆ, ಜನರು ವಿಹಾರ ಮಾಡುತ್ತಿದ್ದರೆ ಪುಟ್ಟ ಮಕ್ಕಳು ಸೈಕ್ಲಿಂಗ್ ಮಾಡುತ್ತಿರುತ್ತಾರೆ, ಮರುದಿನ ನೋಡಿದರೆ ಆನ್‌ಲೈನ್‌ನಲ್ಲಿ ಸ್ಕೋರ್ ಬೋರ್ಡ್ ಇರುತ್ತದೆ,” ಎಂದು ರೋಡ್ರಿಗಸ್ ಹೇಳಿದ್ದಾರೆ.
ಫ್ರಾನ್ಸ್ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟ್‌ಗಾಗಿ 2022ರಲ್ಲಿ 4.33 ಕೋಟಿ ನಿಗದಿಪಡಿಸಲಾಗಿದೆ. ಅದರಲ್ಲಿ 2.66 ಕೋಟಿ ರೂ. ನೀಡಲಾಗಿದೆ. ಇದು ನಕಲಿ ಪಂದ್ಯಗಳಿಗೆ ಐಸಿಸಿ ನೀಡಿದ ಹಣ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ತನಿಖೆ ನಡೆಸುವುದಾಗಿ ಐಸಿಸಿ ತಿಳಿಸಿದೆ.