Sunday, November 24, 2024

ಬಿಎಫ್‌ಸಿಗೆ ಸೋಲುಣಿಸಿದ ಎಫ್‌ಸಿಬಿಯು

ಬೆಂಗಳೂರು, ನವೆಂಬರ್‌ 28: ಇರ್ಫಾನ್‌ ಯರವಾಡ್‌ ಗಳಿಸಿದ ಎರಡು ಅಮೂಲ್ಯ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್‌ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ ಬೆಂಗಳೂರು ಫುಟ್ಬಾಲ್‌ ಕ್ಲಬ್‌ ತಂಡದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಪ್ರಭುತ್ವವನ್ನು ಮುಂದುವರಿಸಿದೆ.

ಎರಡು ಬಾರಿ ಚಾಂಪಿಯನ್‌ ತಂಡ ಎಫ್‌ಸಿಬಿಯು ಪರ ಇರ್ಫಾನ್‌ ಯರವಾಡ್‌ 79 ಮತ್ತು 89 ನೇ ನಿಮಿಷಗಳಲ್ಲಿ ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ಅತ್ಯಂತ ರೋಚಕವಾಗಿ ನಡೆದ ಪಂದ್ಯದ 8ನೇ ನಿಮಿಷದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡಕ್ಕೆ ಗೋಲು ಗಳಿಸುವ ಅರ್ಧ ಅವಕಾಶ ಇದ್ದಿತ್ತು, ಆದರೆ ಯರವಾಡ್‌ ಅವರ ಗುರಿ ನೇರವಾಗಿ ಎದುರಾಳಿಯ ಗೋಲ್‌ಕೀಪರ್‌ ಕೈಗೆ ಚೆಂಡು ತಲುಪಿತು. ಆದರೆ ಬಿಎಫ್‌ಸಿ ತಕ್ಕ ತಿರುಗೇಟು ನೀಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 25ನೇ ನಿಮಿಷದಲ್ಲಿ ಬಿಎಫ್‌ಸಿ ಗೋಲು ಗಳಿಸುವಲ್ಲಿ ಯಶಸ್ವಿಯಾಗಿ 1-0 ಅಂತರದಲ್ಲಿ ಮೇಲುಗೈಸಾಧಿಸಿತು. ಎಫ್‌ಸಿಬಿಯು ತಂಡ ಫ್ರೀಕಿಕ್‌ ಮೂಲಕ ಗೋಲು ಗಳಿಸುವ ಪ್ರಯತ್ನ ನಡೆಸಿದರೂ ಪ್ರಥಮಾರ್ಧದಲ್ಲಿ ಅದು ಸಾಧ್ಯವಾಗಲಿಲ್ಲ.

ಸ್ಥಿರ ದಾಳಿಯನ್ನು ಮುಂದುವರಿಸಿದ ಎಫ್‌ಸಿಬಿಯು ಕೆಲವು ಅವಕಾಶಗಳನ್ನು ಗೋಲಾಗಿಸುವಲ್ಲಿ ವಿಫಲವಾಯಿತು. ಏನಮ್‌ ಜೈರ್ವಾ 79ನೇ ನಿಮಿಷದಲ್ಲಿ ನೀಡಿದ ಪಾಸ್‌ ಮೂಲಕ ಯರವಾಡ್‌ ತಂಡದ ಪರ ಮೊದಲ ಗೋಲು ಗಳಿಸುವುದರೊಂದಿಗೆ ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಹೆಡರ್‌ ಮೂಲಕ ದಾಖಲಾದ ಈ ಗೋಲು ಎಫ್‌ಸಿಬಿಯು ಆತ್ಮಬಲವನ್ನು ಹೆಚ್ಚಿಸಿತು. 84ನೇ ನಿಮಿಷದಲ್ಲಿ ಎಫ್‌ಸಿಬಿಯು ಆಟಗಾರ ಅಶೋಕ್‌ಗೆ ಗೋಲು ಗಳಿಸುವ ಅವಕಾಶವಿದ್ದಿತ್ತು. ಆದರೆ ತುಳಿದ ಚೆಂಡು ಗೋಲ್‌ಬಾಕ್ಸ್‌ನಿಂದ ಹೊರಸಾಗಿತು. 89ನೇ ನಿಮಿಷದಲ್ಲಿ ಯರವಾಡ್‌ ಬಿಎಫ್‌ಸಿಯ ಡಿಫೆಂಡರ್‌ ಸಮ್ಮುಖದಲ್ಲೇ ನೆಗೆದು ಚೆಂಡನ್ನು ನಿಯಂತ್ರಿಸಿ ಹೆಡರ್‌ ಮೂಲಕ ತಂಡದ ಪರ ಎರಡನೇ ಗೋಲು ಗಳಿಸಿದರು. ಈ ಮೂಲಕ ಅತ್ಯಂತ ಕುತೂಹಲದ ಪಂದ್ಯದಲ್ಲಿ ಎಫ್‌ಸಿಬಿಯು 2-1 ಅಂತರದಲ್ಲಿ ಜಯ ಗಳಿಸಿತು.

Related Articles