ಸೋಮಶೇಖರ್ ಪಡುಕರೆ ಬೆಂಗಳೂರು
ರಸ್ತೆಯನ್ನು ಸಮತಟ್ಟು ಮಾಡುವ ರೋಲರ್‌ನ ಚಾಲಕನಾಗಿ, ಮನೆಯಲ್ಲಿ ಕುಲುಮೆ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ರಾಜ್ಯದ ಎರಡನೇ ಡಿವಿಜನ್ ಕ್ರಿಕೆಟ್‌ನಲ್ಲಿ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾನೆ. ಬದುಕಿನಲ್ಲಿ ಛಲವೊಂದಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ಹನುಮನಾಳ್ ಗ್ರಾಮದ ವಿಜಯ ಕುಮಾರ್ ಸಾಕ್ಷಿ.
ರಾಜ್ಯ ಕ್ರಿಕೆಟ್ ಸಂಸ್ಥೆಯ ಎರಡನೇ ಡಿವಿಜನ್ ಪಂದ್ಯವೊಂದರಲ್ಲಿ 2 ಬೌಂಡರಿ ಹಾಗೂ 11 ಸಿಕ್ಸರ್ ಮೂಲಕ 92 ರನ್ ಗಳಿಸಿದ ವಿಜಯ ಕುಮಾರ್ ಈಗಾಗಲೇ ಹಲವು ವಿಕೆಟ್‌ಗಳನ್ನು ಕಿತ್ತು ತಾನೊಬ್ಬ ಆಲ್ರೌಂಡರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ 22 ಎಸೆತಗಳಲ್ಲಿ 1 ಬೌಂಡರಿ ಹಾಗೂ 10 ಸಿಕ್ಸರ್‌ನೆರವಿನಿಂದ 74 ರನ್ ಸಿಡಿಸಿ ವಿಜಯ ಕುಮಾರ್ ಅಚ್ಚರಿ ಮೂಡಿಸಿದ್ದಾರೆ.
21 ವರ್ಷದ ವಿಜಯ ಕುಮಾರ್ ಕುಟುಂಬ ಬಡತನವನ್ನೇ ಹೊದ್ದು ಮಲಗಿದೆ. ರೋಲರ್ ಚಾಲನೆ ಹಾಗೂ ಕುಲುಮೆಯಲ್ಲಿ ಕಬ್ಬಿಣ ಹದ ಮಾಡುವ ಕೆಲಸ ಮಾಡುತ್ತಿದ್ದ ವಿಜಯ್ ಸಮಯ ಇದ್ದಾಗ ಟೆನಿಸ್ ಬಾಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದ. ನಂತರ ಅ‘್ಯಾಸ ಮಾಡಿ ಟೆನಿಸ್ ಬಾಲ್ ಪಂದ್ಯಗಳಲ್ಲಿ ಹನುಮನಾಳ್ ಹೀರೋಸ್ ತಂಡದ ಪರ ಆಡಿ ಹಲವು ಟೂರ್ನಿಗಳಲ್ಲಿ ಪಂದ್ಯಶ್ರೇಷ್ಠ ಹಾಗೂ ಐದು ಬಾರಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರನಾದ. ತಂದೆ ದೇವಪ್ಪ ಹಾಗೂ ತಾಯಿ ಉಮಾದೇವಿ ಈಗಲೂ ಕುಲುಮೆಯಲ್ಲಿ ದುಡಿಯುತ್ತಿದ್ದಾರೆ. ಸಹೋದರ ವಿನೋದ್ ಕುಮಾರ್ ಈಗಲೂ ಜೆಸಿಬಿ ಚಾಲನೆ ಮಾಡುತ್ತಿದ್ದಾರೆ. ವಿಜಯ್ ಅವರಲ್ಲಿ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿದ್ದು ಹನುಮನಾಳ್‌ನ ಶರಣು ತಳ್ಳಿಕೇರಿ.
ಓದಲು ಹಣ ಇಲ್ಲ
ಕುಲುಮೆಯಲ್ಲಿ ಗಳಿಸಿದ್ದು ಹಾಗೂ ರೋಲರ್‌ನಲ್ಲಿ ದುಡಿದಿದ್ದು ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿತ್ತು. ಇಬ್ಬರು ಮಕ್ಕಳ ಶಿಕ್ಷಣಕ್ಕೆ ಹಣ ಇಲ್ಲ ಎಂದಾಗ ವಿಜಯ ಕುಮಾರ್ ೯ನೇ ಕ್ಲಾಸಿಗೆ ಓದನ್ನು ನಿಲ್ಲಿಸಿದರು. ಬಿಡುವಿನ ವೇಳೆಯಲ್ಲಿ ಎಲ್ಲೇ ಕ್ರಿಕೆಟ್ ಪಂದ್ಯಗಳು ನಡೆದರೂ ಅಲ್ಲಿಗೆ ಹೋಗಿ ವಿಜಯ್ ಆಡ ತೊಡಗಿದ. ಸ್ಥಳೀಯ ಕ್ರಿಕೆಟ್‌ನಲ್ಲಿ ಪಂದ್ಯ ಗೆಲ್ಲಿಸಿಕೊಡುವ ಆಲ್ರೌಂಡರ್ ಆಗಿ ರೂಪುಗೊಂಡ.
ಬೆಂಗಳೂರಿನ ನಂಟು
ಬೆಂಗಳೂರಿನಲ್ಲಿ ಪಂದ್ಯವೊಂದನ್ನು ಆಡುತ್ತಿರುವಾಗ ಹೆರಾನ್ಸ್ ಕ್ರಿಕೆಟ್ ಕ್ಲಬ್‌ನ ಸಂಘಟನಾ ಕಾರ್ಯದರ್ಶಿ ಹಾಗೂ ಮಾಜಿ ಕ್ರಿಕೆಟಿಗ ಮುರಳೀಧರ್ ಅವರು ವಿಜಯ್ ಕುಮಾರ್ ಅವರನ್ನು ಗುರುತಿಸಿ ತಮ್ಮ ಕ್ಲಬ್‌ನಲ್ಲಿ ಆಡುವ ಅವಕಾಶ ಕೊಟ್ಟರಲ್ಲದೆ, ತಮ್ಮಿಂದಾದ ಎಲ್ಲ ರೀತಿಯ ನೆರವನ್ನು ನೀಡಿ ಸಲಹತೊಡಗಿದರು. ಈಗ ವಿಜಯ್ ಕುಮಾರ್ ಉತ್ತಮ ಕ್ರಿಕೆಟಿಗರಾಗಿ ರೂಪುಗೊಂಡಿದ್ದಾರೆ. ಪ್ರಭಾವ ಇಲ್ಲದ ಕಾರಣ ಅವರಿಗೆ ಇದುವರೆಗೂ ರಾಜ್ಯ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ.
ಸದ್ಯ ಮುರಳೀ‘ರ್ ಅವರಲ್ಲೇ ತರಬೇತಿ ಪಡೆಯುತ್ತಿರುವ ವಿಜಯ್ ಕುಮಾರ್ ಮೈಸೂರಿನಲ್ಲಿ ಎರಡನೇ ಡಿವಿಜನ್ ಪಂದ್ಯವನ್ನು ಆಡುತ್ತಿದ್ದಾರೆ. ಮೈಸೂರು ಅಂಡರ್‌ರೈಟರ್ಸ್ ತಂಡದ ಪರ ಆಡುತ್ತಿರುವ ವಿಜಯ್ ಕುಮಾರ್ ನಿಜವಾಗಿಯೂ ಸ್ಫೋಟಕ ಬ್ಯಾಟ್ಸ್‌ಮನ್. ಕೇವಲ 31 ಎಸೆತಗಳಲ್ಲಿ 2 ಬೌಂಡರಿ 11 ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾಗಿದ್ದರು. 6 ಓವರ್‌ಗಳಲ್ಲಿ 2 ವಿಕೆಟ್ ಗಳಿಸಿ ಗಮನ ಸೆಳೆದಿದ್ದರು. ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಈ ಪ್ರತಿಭೆಯ ಆಟವನ್ನು ಗಮನಿಸಿದರೆ, ಅಥವಾ ಆತನು ಆಡಿದ ಪಂದ್ಯಗಳ ಸ್ಕೋರ್ ಪಟ್ಟಿಯನ್ನಾದರೂ ಗಮನಿಸಿದರೆ ಅವಕಾಶ ನೀಡಲೇಬೇಕಾಗಬಹುದು. ಆದರೆ ಆ ಕೆಲಸ ಆಗಬೇಕಿದೆ.
ಕೆಪಿಎಲ್ ಫ್ರಾಂಚೈಸಿಗಳೇ ಇತ್ತ ಗಮನಿಸಿ
ಪ್ರತಿಯೊಂದು ಕ್ರಿಕೆಟ್ ಟೂರ್ನಿಗಳನ್ನು ಮಾಡುವಾಗ, ಪ್ರಾಯೋಜಕರನ್ನು ಸಂಪರ್ಕಿಸುವಾಗ ನಾವು ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತೇವೆ, ಗ್ರಾಮೀಣ ಪ್ರದೇಶಕ್ಕೆ ಕ್ರಿಕೆಟ್ ಕೊಂಡೊಯ್ಯುತ್ತೇವೆ ಎಂದೆಲ್ಲ ಹೇಳಿಕೆ ನೀಡುವ ಕರ್ನಾಟಕ ಪ್ರೀಮಿಯರ್ ಲೀಗ್‌ನ ಸಂಘಟಕರು ಹಾಗೂ ಫ್ರ್ಯಾಂಚೈಚೈಸಿ ಮಾಲೀಕರು ವಿಜಯ್ ಕುಮಾರ್ ಅವರಂಥ ಪ್ರತಿಭೆಗಳನ್ನು ಗುರುತಿಸಬೇಕಾಗಿದೆ. ಪ್ರತಿಭಾನ್ವೇಷಣೆ ಕಾರ್ಯಕ್ರಮ ಹಮ್ಮಿಕೊಂಡು ಅದರಲ್ಲಿ ಸಿಕ್ಕ ಪ್ರತಿಭೆಗಳಿಗೆ ಆಡುವ ಅವಕಾಶ ನೀಡಬೇಕಾದ ಅಗತ್ಯವಿದೆ. ಇದು ಸಾಧ್ಯವಾದರೆ ಮಾತ್ರ ನಾವು ನಡೆಸುವ ಯಾವುದೇ ಲೀಗ್‌ಗಳಿಗೆ ಒಂದು ಅರ್ಥವಿರುತ್ತದೆ. ಇಲ್ಲವಾದಲ್ಲಿ ಇಂಥ ಲೀಗ್‌ಗಳು ಎಷ್ಟು ನಡೆದರೇನಂತೆ?