ಬೆಂಗಳೂರು:
ತಾಯಿಯ ಯಶಸ್ಸಿನ ಹೆಜ್ಜೆಯಲ್ಲೇ ಮುನ್ನಡೆದ ಕೊಡಗಿನ ಬಾಡರಕೇರಿಯ ಆರ್ಯನ್ ಪ್ರಜ್ವಲ್ ಕಶ್ಯಪ್ ಗುಜರಾತಿನಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ 400 ಮೀ. ಹರ್ಡಲ್ಸ್ನಲ್ಲಿ ಬೆಳ್ಳಿಯ ಪದಕ ಗೆದ್ದು ಕೊಲಂಬಿಯಾದಲ್ಲಿ ನಡೆಯಲಿರುವ 20ವರ್ಷ ವಯೋಮಿತಿಯ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ಅರ್ಹತೆ ಪಡೆದಿದ್ದಾರೆ.
ವಿಶೇಷವೆಂದರೆ ಆರ್ಯನ್ ಪ್ರಜ್ವಲ್ ಕಶ್ಯಪ್ ಅವರ ತಾಯಿ ಸರೋಜ ಕೂಡ ಹರ್ಡಲ್ಸ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದು ಈಗ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಮೈಸೂರಿನ ಪ್ರಭಾಕರ್ ಅವರಲ್ಲಿ ತರಬೇತಿ ಪಡೆಯುತ್ತಿರುವ ಆರ್ಯನ್ಗೆ ಅಥ್ಲೆಟಿಕ್ಸ್ ಕೋಚ್ ಸುಮಂತ್ ಕೂಡ ಯಶಸ್ಸಿಗೆ ನೆರವು ನೀಡುತ್ತಿದ್ದಾರೆ. 52.75 ಸೆಕೆಂಡುಗಳಲ್ಲಿ ಗುರಿ ತಲುಪಿದ ಆರ್ಯನ್ ಬೆಳ್ಳಿ ಗೆದ್ದರು. ವಿಶ್ವ ಚಾಂಪಿಯನ್ಷಿಪ್ಗೆ ಅರ್ಹರಾಗಲು 53.20 ಸೆಕೆಂಡುಗಳಲ್ಲಿ ಗುರಿ ತಲುಪಬೇಕಾಗಿತ್ತು. ಪಂಜಾಬ್ನ ಹರ್ದೀಪ್ ಚಿನ್ನ ಗೆದ್ದರು.
ಕೃಷಿಕ ಜೋಯಪ್ಪ ಬಿ.ಎಂ. ಮತ್ತು ಸರೋಜ ದಂಪತಿಯ ಪುತ್ರರಾಗಿರುವ ಆರ್ಯನ್, ಮೈಸೂರಿನ ಮಹೇಶ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಹರ್ಡಲ್ಸ್ನಲ್ಲಿ ಹಲವಾರು ಪದಕಗಳನ್ನು ಗೆದ್ದಿರುತ್ತಾರೆ.