Thursday, November 21, 2024

ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ರಂಜನ್‌ ನಾಗರಕಟ್ಟೆ

sportsmail:

ವಿದ್ಯಾರ್ಥಿಗಳ ಬದುಕು ಕೇವಲ ಓದಿಗೆ ಮೀಸಲಾಗಬಾರದು, ಕ್ರೀಡೆಯಿಂದಲೂ ಜಾಗತಿಕ ಮಟ್ಟದಲ್ಲಿ ಮಿಂಚಬಹುದು, ಬದುಕನ್ನು ಕಟ್ಟಿಕೊಳ್ಳಬಹುದು. ಒಲಿಂಪಿಕ್ಸ್‌ನಲ್ಲಿ ಭಾರತ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಾದರೆ ಪೋಷಕರು ಓದಿನ ಜತೆಯಲ್ಲಿ ತಮ್ಮ ಮಕ್ಕಳನ್ನು ಕ್ರೀಡೆಯಲ್ಲೂ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕು ಎಂದು ಕ್ರೀಡಾ ಪ್ರೋತ್ಸಾಹಕ, ಚೆಸ್‌ ತಜ್ಞ, ಮುಂಬಯಿಯ ಡಿಜಿ ಫ್ಲಿಕ್‌ ಇನ್ಷುರೆನ್ಸ್‌ನ ನಿರ್ದೇಶಕ ರಂಜನ್‌ ನಾಗರಕಟ್ಟೆ ಅವರು ಅಭಿಪ್ರಾಯಪಟ್ಟರು.

 

ಅವರು ಟಾರ್ಪೆಡೊಸ್‌ ಸ್ಪೋರ್ಟ್ಸ್‌ ಕಾರ್ನಿವಲ್‌ ಇದರ ಅಂಗವಾಗಿ ಕುಂದಾಪುರದಲ್ಲಿ ಶನಿವಾರ ಆರಂಭಗೊಂಡ ಅಖಿಲ ಭಾರತ ಟಾರ್ಪೆಡೊಸ್‌ ರಶ್ಮೀ ಶೆಟ್ಟಿ ಸ್ಮಾರಕ ಫಿಡೆ ರೇಟೆಡ್‌ ಚೆಸ್‌ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿದರು.

ಕರಾವಳಿಯ ಕ್ರೀಡಾ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಿನ. ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆ, ಅಖಿಲ ಭಾರತ ಚೆಸ್‌ ಸಂಸ್ಥೆ, ಉಡುಪಿ ಜಿಲ್ಲಾ ಚೆಸ್‌ ಅಸೋಸಿಯೇಷನ್‌ ಸಹಯೋಗದೊಂದಿಗೆ ಟಾರ್ಪೆಡೊಸ್‌ ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷ ಗೌತಮ್‌ ಶೆಟ್ಟಿ ಅವರ ಮುಂದಾಳತ್ವದಲ್ಲಿ ಈ ಚಾಂಪಿಯನ್‌ಷಿಪ್‌ ನಡೆಯುತ್ತಿದೆ.

ಇಲ್ಲಿನ ಹರಿಪ್ರಸಾದ್‌ ಹೊಟೇಲ್‌ನ ಆತಿಥ್ಯ ಸಭಾಗಂಣದಲ್ಲಿ ಎರಡು ದಿನಗಳ ಕಾಲ ಈ ಚಾಂಪಿಯನ್ಷಿಪ್‌ ನಡೆಯಲಿದೆ.

ಕೇವಲ ಓದಿನಿಂದ ಸಾಧನೆ ಮಾಡಿದವರಿದ್ದಾರೆ, ಅದೇ ರೀತಿ ಓದಿನ ಜತೆಯಲ್ಲಿ ಕ್ರೀಡೆಯಲ್ಲೂ ನಮ್ಮನ್ನು ತೊಡಗಿಸಿಕೊಂಡರೆ ಸಾಧನೆಗೆ ಮತ್ತಷ್ಟು ಮೆರಗು ಸಿಗುತ್ತದೆ. ಇದು ಕೇವಲ ಕ್ರೀಡಾಕೂಟವಲ್ಲ, ಇದೊಂದು ಹಬ್ಬ ಎಂದು ಹೇಳಿದ ರಂಜನ್‌ ಅವರು, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಛೋಪ್ರಾ, ಮನು ಬಾಕರ್‌ ಅವರಂಥ ಕ್ರೀಡಾಪಟುಗಳು ಸಾಧನೆ ಮಾಡುವಲ್ಲಿ ಅವರ ಹೆತ್ತವರ ಪ್ರೋತ್ಸಾಹ ಪ್ರಮುಖವಾಗಿತ್ತು. ಕುಂದಾಪುರದಂಥ ಚಿಕ್ಕ ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಈ ಕ್ರೀಡಾಕೂಟದಿಂದ ಇಲ್ಲಿಂದ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಹಾರೈಸಿದರು.

ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಮಂಗಳೂರಿನ ಇಂಟರ್‌ನ್ಯಾಷನಲ್‌ ಮಾಸ್ಟರ್‌ ವಿಯಾನಿ ಡಿʼಕುನ್ಹಾ ಅವರು ಮುಖ್ಯ ಅತಿಥಿ ರಂಜನ್‌ ನಾಗರಕಟ್ಟೆ ಅವರೊಂದಿಗೆ ಚೆಸ್‌ ಆಡುವ ಮೂಲಕ ಚಾಂಪಿಯನ್‌ಷಿಪ್‌ಗೆ ಚಾಲನೆ ನೀಡಿದರು.

 

ಕರ್ನಾಟಕದಲ್ಲಿ ಚೆಸ್‌ ಕ್ರೀಡೆಯನ್ನು ರಕ್ಷಿಸಿ, ಪೋಷಿಸುತ್ತಿರುವ ಅಂತಾರಾಷ್ಟ್ರೀಯ ತೀರ್ಪುಗಾರ ಹಾಗೂ ಯುನೈಟೆಡ್‌ ಕರ್ನಾಟಕ ಚೆಸ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ವಸಂತ್‌ ಬಿ.ಎಚ್.‌ ಮಾತನಾಡಿ, ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇಂಥ ಕಠಿಣ ಪರಿಸ್ಥಿತಿಯಲ್ಲೂ ರಾಷ್ಟ್ರೀಯ ಮಟ್ಟದ ಟೂರ್ನಿಯನ್ನು ಸುಸಜ್ಜಿತವಾಗಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಮುಂಬರುವ ಚಾಂಪಿಯನ್ಷಿಪ್‌ಗಳಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳಿಗೆ ಇದು ಉತ್ತಮ ವೇದಿಕೆ ಎಂದು ಹೇಳಿದರು.

ಉಡುಪಿ ಜಿಲ್ಲಾ ಚೆಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಅಮಿತ್‌ ಕುಮಾರ್‌ ಶೆಟ್ಟಿ, ಟಾಟಾ ಎಕನಾಮಿಕ್‌ ಕನ್ಸಲ್ಟೆನ್ಸಿ ಸರ್ವಿಸಸ್‌ನ ಮಾಜಿ ಉಪಾಧ್ಯಕ್ಷ ರಮೇಶ್‌ ನಾಗಪ್ಪ ಶೆಟ್ಟಿ, ನಾಗರತ್ನ ನಾಗರಕಟ್ಟೆ, ರಾಷ್ಟ್ರೀಯ  ಚೆಸ್‌ ತೀರ್ಪುಗಾರ ಬಾಬು ಪೂಜಾರಿ, ಟಾರ್ಪೆಡೊಸ್‌ ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷ ಗೌತಮ್‌ ಶೆಟ್ಟಿ ಈ ಸಂದರ್ಭದಲ್ಲಿ ಹಾಜರಿದ್ದರು.

ಸನ್ಮಾನ:

ಇದೇ ವೇಳೆ ಅಂತಾರಾಷ್ಟ್ರೀಯ ತೀರ್ಪುಗಾರ ವಸಂತ್‌ ಬಿ,ಎಚ್., ಅಂತಾರಾಷ್ಟ್ರೀಯ ಚೆಸ್‌ ಆಟಗಾರ ಮಂಗಳೂರಿನ ಇಂಟರನ್‌ನ್ಯಾಷನಲ್‌ ಮಾಸ್ಟರ್‌ ವಿಯಾನಿ ಡಿʼಕುನ್ಹಾ, ಜಾಗತಿಕ ಚೆಸ್‌ನಲ್ಲಿ ಮಿಂಚಿದ ವಿಶೇಷ ಚೇತನ ಚೆಸ್‌ ಪಟು ಬಸ್ರೂರಿನ ಸಮರ್ಥ್‌ ಜೆ. ರಾವ್‌ ಅವರನ್ನು ಸನ್ಮಾನಿಸಲಾಯಿತು. ಗೌತಮ್‌ ಶೆಟ್ಟಿ ಚಾಂಪಿಯನ್ಷಿಪ್‌ನ ಕುರಿತು ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಿಯಾಂಕ್‌ ಪಾಟೀಲ್‌ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ರಾಜ್ಯಗಳಿಂದ 268 ಆಟಗಾರರು:

ಕುಂದಾಪುರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಫಿಡೆ ರೇಟಿಂಗ್‌ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಸ್ಪರ್ಧಿಗಳು ಭಾಗಿಯಾಗಿರುವುದು ವಿಶೇಷ. ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ, ಡೆಲ್ಲಿ, ಹೈದರಾಬಾದ್‌ ಹಾಗೂ ಆತಿಥೇಯ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 268 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.

ಇಂಡಿಯನ್‌ ಕೋಚ್‌ ಫ್ಯಾಕ್ಟರಿಯ ಶ್ಯಾಮ್‌ ನಿಖಿಲ್‌ ಪಿ.( 2389) ಅಗ್ರ ಸೀಡ್‌ ಆಟಗಾರರಾಗಿರುತ್ತಾರೆ. ಕರ್ನಾಟಕದ ಐಎಂ ವಿಯಾನಿ ಆಂಟೋನಿಯೋ ಡಿʼಕುನ್ಹಾ (2363), ಇಂಡಿಯನ್‌ ರೈಲ್ವೇಸ್‌ನ ಐಎಂ ರತ್ನಾಕರನ್‌ ಕೆ. (2346), ಕರ್ನಾಟಕದ ಪ್ರೀತಂ ಶರ್ಮಾ(2318), ತಮಿಳುನಾಡಿನ ಐಎಂ ಮುತ್ತಯ್ಯ (2214) ಮತ್ತು ಎಫ್‌ಎಂ ಸೆಂಥಿಲ್‌ ಮಾರನ್‌ (2171), ಐಎಂ ಹರಿಕೃಷ್ಣ ಎ. (2085)  ಮೊದಲಾದ ಆಟಗಾರರು 2,00,000 ಲಕ್ಷ ರೂ, ಬಹುಮಾನ ಮೊತ್ತದ ಚಾಂಪಿಯನ್ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲಲು ಮುಂದಾಗಿದ್ದಾರೆ. 9 ಸುತ್ತಿನಿಂದ ಕೂಡಿರುವ ಚಾಂಪಿಯನ್ಷಿಪ್‌ ಭಾನುವಾರ ಕೊನೆಗೊಳ್ಳಲಿದೆ.

Related Articles