Tuesday, December 3, 2024

ಚೆಸ್‌ ಒಲಂಪಿಯಾಡ್‌ನಲ್ಲಿ ಮೊದಲ ಬಾರಿಗೆ ಕ್ರೀಡಾ ಜ್ಯೋತಿ

ಬೆಂಗಳೂರು:  ಮಹಾಬಲಿಪುರಂನಲ್ಲಿ ನಡೆಯಲಿರುವ 44ನೇ ಚೆಸ್‌ ಒಲಂಪಿಯಾಡ್‌ನಲ್ಲಿ ಕ್ರೀಡಾ ಜ್ಯೋತಿಯನ್ನು ಜಾರಿಗೆ ತರಲಾಗುವುದು ಮತ್ತು ಮುಂದೆ ನಡೆಯುವ ಪ್ರತಿಯೊಂದು ಚೆಸ್‌ ಒಲಂಪಿಯಾಡ್‌ನಲ್ಲಿ ಕ್ರೀಡಾ ಜ್ಯೋತಿ (ಟಾರ್ಚ್‌ ರಿಲೇ) ಇರುತ್ತದೆ ಎಂದು ಅಂತಾರಾಷ್ಟ್ರೀಯ ಚೆಸ್‌ ಫೆಡರೇಷನ್‌ (ಫಿಡೆ) ತಿಳಿಸಿದೆ.

ಚೆಸ್‌ ಕ್ರೀಡೆ ಹುಟ್ಟಿದ್ದೇ ಭಾರತದಲ್ಲಿ, ಆದ್ದರಿಂದ ಇಲ್ಲಿ ನಡೆಯಲಿರುವ ಚೆಸ್‌ ಒಲಂಪಿಯಾಡ್‌ನಲ್ಲಿ ಐತಿಹಾಸಿಕವಾಗಿ ಹೊಸತನವನ್ನು ಕಾಣಬೇಕೆಂಬ ಉದ್ದೇಶದಿಂದ ಫಿಡೆ ಈ ತೀರ್ಮಾನ ಕೈಗೊಂಡಿದೆ. ಭಾರತದಲ್ಲಿ ಈ ವರ್ಷ ನಡೆಯಲಿರುವುದು 44ನೇ ಚೆಸ್‌ ಒಲಂಪಿಯಾಡ್‌.

ಚೆಸ್‌ ಹುಟ್ಟಿದ ನಾಡಿನಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗುತ್ತಿದೆ. ವಿಶ್ವನಾಥನ್‌ ಆನಂದ್‌ ಅವರಂಥ ಶ್ರೇಷ್ಠ ಆಟಗಾರರನ್ನು ನೀಡಿದ ಭಾರತ ಈಗ ಜಾಗತಿಕ ಚೆಸ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಎರಡು ಬಾರಿ ಸೋಲಿಸಿದ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಆರ್‌. ಪ್ರಗ್ನಾನಂದ ಚೆಸ್‌ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ ಆಟಗಾರ. ವಿಶ್ವನಾಥನ್‌ ಆನಂದ್‌ ಮತ್ತು ಪ್ರಗ್ನಾನಂದ ಇಬ್ಬರೂ ಚೆನ್ನೈನವರಾದ ಕಾರಣ ಅಲ್ಲಿ ಚೆಸ್‌ ಒಲಂಪಿಯಾಡ್‌ ನಡೆಸುತ್ತಿರುವುದು ಅರ್ಥಪೂರ್ಣ,

ಒಲಿಂಪಿಕ್ಸ್‌ ಮಾದರಿಯಲ್ಲಿ ಕ್ರೀಡಾಜ್ಯೋತಿಯು ಜಗತ್ತಿನಾದ್ಯಂತ ಪ್ರಯಾಣ ಮಾಡಿ ನಂತರ ಭಾರತವನ್ನು ಪ್ರವೇಶಿಸಲಿದೆ. ಒಲಿಂಪಿಕ್ಸ್‌ನಲ್ಲೂ ಇದೇ ರೀತಿ ಕ್ರೀಡಾ ಜ್ಯೋತಿ ಜಗತ್ತನ್ನು ಸುತ್ತಿ ನಂತರ ಆತಿಥೇ ದೇಶಕ್ಕೆ ಆಗಮಿಸುವುದು. ಈ ಬಾರಿ ಸಮಯದ ಅಭಾವ ಇರುವುದರಿಂದ ಕ್ರೀಡಾ ಜ್ಯೋತಿ ಭಾರತದಲ್ಲಿ ಮಾತ್ರ ಪ್ರಯಾಣ ಮಾಡಲಿದೆ.

ಜುಲೈ 28 ರಿಂದ ಆಗಸ್ಟ್‌ 10ರ ವರೆಗೆ ಮಹಾಬಲಿಪುರಂನಲ್ಲಿ ಚೆಸ್‌ ಒಲಂಪಿಯಾಡ್‌ ನಡೆಯಲಿದ್ದು, ವಿಶ್ವನಾಥನ್‌ ಆನಂದ್‌ ಕ್ರೀಡಾ ಜ್ಯೋತಿಗೆ ಚಾಲನೆ ನೀಡಲಿದ್ದಾರೆ.

“ಚೆಸ್‌ ಕ್ರೀಡೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಮತ್ತು ಜಗತ್ತಿನಾದ್ಯಂತ ಇರುವ ಚೆಸ್‌ ಅಭಿಮಾನಿಗಳನ್ನು ಹುರಿದುಂಬಿಸುವ ಉದ್ದೇಶದಿಂದ ಈ ಹೊಸ ಕ್ರಮವನ್ನು ಕೈಗೊಳ್ಳಲಾಗಿದೆ,” ಎಂದು ಫಿಡೆ ಅಧ್ಯಕ್ಷ ಆರ್ಕಡಿ ಡೊರ್ಕೊವಿಚ್‌ ಹೇಳಿದ್ದಾರೆ.

Related Articles