ಹೊಸದಿಲ್ಲಿ: ಚೆಸ್ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಇದರ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಅದರ ಅಧ್ಯಕ್ಷ ಅರ್ಕಡೆ ಡೊರ್ಕೊವಿಚ್ ಪ್ರಕಟಿಸಿದ್ದಾರೆ.
ಡೊರ್ಕೊವಿಚ್ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಡೊರ್ಕೊವಿಚ್ ಚುನಾವಣೆಯಲ್ಲಿ ಗೆದ್ದಲ್ಲಿ ಆನಂದ್ ಅವರು ಉಪಾಧ್ಯಕ್ಷರಾಗಲಿದ್ದಾರೆ. “ಚೆಸ್‌ನ ಉಜ್ವಲ ಮತ್ತು ಉತ್ತಮ ಭವಿಷ್ಯದ ಭಾಗವಾಗುವ ಆಶಯವಿದೆ,” ಎಂದು ಆನಂದ್ ಅವರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಫಿಡೆ ಚುನಾವಣೆಯಲ್ಲಿ ಡೊರ್ಕೊವಿಚ್ ಅವರಿಗೆ ಬೆಂಬಲ ನೀಡುವುದಾಗಿ ಆನಂದ್ ಕಳೆದ ತಿಂಗಳು ಪ್ರಕಟಿಸಿದ್ದಾರೆ.
“ಅರ್ಕಡಿ ಡೊರ್ಕೊವಿಚ್ ಅವರಿಗೆ ಬೆಂಬಲ ನೀಡಲು ಒಪ್ಪಿಕೊಂಡಿರುವೆ, ಈ ಬಗ್ಗೆ ನಾವು ಚರ್ಚಿಸಿದ್ದೇವೆ, ಆದರೆ ಯಾವ ಪಾತ್ರ ಅಥವಾ ಯಾವ ಸಾಮರ್ಥ್ಯದಲ್ಲಿ ಭಾಗಿಯಾಗಲಿದ್ದೇವೆ ಎಂಬುದರ ತೀರ್ಮಾನವಾಗಿಲ್ಲ. ಈ ಕ್ರೀಡೆಗಾಗಿ ಡೊರ್ಕೊವಿಚ್ ಅವರ ತಂಡ ಉತ್ತಮ ಕೆಲಸಗಳನ್ನು ಮಾಡಿದೆ,ʼ ಎಂದು ಆನಂದ್ ಹೇಳಿದ್ದಾರೆ.
ಆದರೆ ಆನಂದ್ ಅವರು ಫಿಡೆಯ ಯಾವುದೇ ಪದಾಧಿಕಾರಿಗಳ ಹುದ್ದೆಗೆ ಸ್ಪರ್ಧಿಸುವುದಿಲ್ಲ, ಬದಲಾಗಿ ಚುನಾವಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವೆ ಎಂದಷ್ಟೇ ಹಿಂದೆ ಹೇಳಿದ್ದರು.
“ವಿಶ್ವನಾಥನ್ ಅವರೊಂದಿಗೆ ಈ ವಿಷಯದ ಕುರಿತು ಚರ್ಚಿಸಿದ್ದು, ಅವರು ನಮ್ಮ ತಂಡದ ಬಹುದೊಡ್ಡ ಭಾಗವಾಗಲಿದ್ದಾರೆ,” ಎಂದು ಡೊರ್ಕೊವಿಚ್ ಹೇಳಿದ್ದಾರೆ. ಕುತೂಹಲದ ಸಂಗತಿಯೆಂದರೆ 2019ರಲ್ಲಿ ಫಿಡೆಯ ಏಷ್ಯಾ ಖಂಡದ ಸಹಾಯಕರನ್ನಾಗಿ ಆನಂದ್ ಅವರನ್ನು ನೇಮಿಸಿದ್ದೇ ಡೊರ್ಕೊವಿಚ್.
ಮಹಾಬಲಿಪುರಂನಲ್ಲಿ ಜುಲೈ -ಆಗಸ್ಟ್ ತಿಂಗಳಲ್ಲಿ ನಡೆಯಲಿರುವ 44ನೇ ಚೆಸ್ ಒಲಂಪಿಯಾಡ್ ವೇಳೆ ಫಿಡೆ ಚುನಾವಣೆ ನಡೆಯಲಿದೆ. ಚುನಾವಣೆ ಬಳಿಕ ಫಿಡೆ ಸಾಮಾನ್ಯ ಸಭೆಯು ಆಗಸ್ಟ್ 7-8 ರವರೆಗೆ ನಡೆಯಲಿದೆ.