Saturday, April 20, 2024

ಇತಿಹಾಸ ಬರೆಯಲು ಭಾರತಕ್ಕೆ ಡ್ರಾವೊಂದೇ ಸಾಕು

ಶಾರ್ಜಾ, ಜನವರಿ 13

ಯುಎಇಯ ಶಾರ್ಜಾದಲ್ಲಿ ಸೋಮವಾರ ರಾತ್ರಿ ನಡೆಯಲಿರುವ ಬೆಹರಿನ್ ವಿರುದ್ಧದ ಪಂದ್ಯದಲ್ಲಿ ಕೇವಲ ಡ್ರಾ ಸಾಧಿಸಿದರೂ ಭಾರತ ತಂಡ ಏಷ್ಯನ್ ಕಪ್‌ನ ನಾಕೌಟ್ ಹಂತ ತಲುಪಲಿದೆ.

ಎ ಗುಂಪಿನಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಮೂರ ಅಂಕಗಳನ್ನು ಗಳಿಸಿರುವ ಭಾರತ ಕೆಂಪು ಬಳಗದ ವಿರುದ್ಧ ಡ್ರಾ ಸಾಧಿಸಿದರೆ ಟೂರ್ನಿಯ ಮುಂದಿನ ಹಂತಕ್ಕೆ ತೇರ್ಗಡೆಯಾಗುವುದನ್ನು ಖಚಿತಪಡಿಸಿಕೊಳ್ಳಲಿದೆ.
ಥಾಯ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಗೆಲ್ಲುವ ಮೂಲಕ ಸ್ಟೀನ್ ಕಾನ್‌ಸ್ಟೆಂಟೈನ್ ಪಡೆ ಟೂರ್ನಿಯಲ್ಲಿ ಉತ್ತಮ ಆರಂಭ ಕಂಡಿತು. ಆದರೆ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಬ್ಲೂ ಟೈಗರ್ಸ್ 2-0 ಗೋಲುಗಳ ಅಂತರದಲ್ಲಿ ಸೋತಿತ್ತು. ಆದರೆ ಭಾರತ ತಂಡ ತೋರಿದ ಪ್ರದರ್ಶನಕ್ಕೆ ಎದುರಾಳಿಯ ತಂಡದ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನಾರ್ಹ.
ಯುಎಇ ವಿರುದ್ಧದ ಲಿತಾಂಶದ ಬಗ್ಗೆ ಕಾನ್‌ಸ್ಟೆಂಟೈನ್ ನಿರಾಸೆ ವ್ಯಕ್ತಪಡಿಸಿಲ್ಲ, ಏಕೆಂದರೆ ಆಟಗಾರರು ತೋರಿದ ಪ್ರದರ್ಶನ ಅವರಿಗೆ ಮೆಚ್ಚುಗೆಯಾಗಿತ್ತು.
‘ಬೆಹರಿನ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲು ನಾವು ಸಜ್ಜಾಗಿದ್ದೇವೆ. ಗೆಲ್ಲುವುದೇ ನಮ್ಮ ಗುರಿಯಾಗಬೇಕು. ಪಂದ್ಯದಿಂದ ಏನನ್ನಾದರೂ ಪಡೆಯಬೇಕು. ಇಲ್ಲಿಯ ಲಿತಾಂಶ ನಮ್ಮನ್ನು ನಾಕೌಟ್ ಹಂತಕ್ಕೆ ಕೊಂಡೊಯ್ಯಲಿದೆ ಎಂಬ ನಂಬಿಕೆ ನಮಗಿದೆ,‘ ಎಂದು ಭಾರತದ ಕೋಚ್ ಹೇಳಿದ್ದಾರೆ.
ಬೆಹರಿನ್ ಆಡಿರುವ ಎರಡು ಪಂದ್ಯಗಳಲ್ಲಿ ಜಯ ಕಂಡಿರಲಿಲ್ಲ. ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ 1-1ಗೋಲಿನಿಂದ ಡ್ರಾ ಗಳಿಸಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ. ರೆಡ್ ತಂಡ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿತ್ತು. ಆದರೆ ವಿವಾದಾತ್ಮಕ ಪೆನಾಲ್ಟಿ ಆ ತಂಡದ ಡ್ರಾ ಸಾಧನೆಗೆ ಕಾರಣವಾಯಿತು. ಆದರೆ ಬೆಹರಿನ್ ತಂಡ ನಂತರದ ಪಂದ್ಯದಲ್ಲಿ ಅದೇ ರೀತಿಯ ಪ್ರದರ್ಶನ ತೋರಲಿಲ್ಲ. ಪರಿಣಾಮ ಥಾಯ್ಲೆಂಡ್ ವಿರುದ್ಧ 1-0 ಗೋಲಿನಿಂದ ಸೋಲಿಗೆ ಶರಣಾಯಿತು.
ಬೆಹರಿನ್ ತಂಡಕ್ಕೆ ನಾಕೌಟ್ ಹಂತ ತಲುಪಬೇಕಾದರೆ ಇಲ್ಲಿ ಜಯವಲ್ಲದೆ ಬೇರೇನೂ ಅಗತ್ಯ ಇಲ್ಲ. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಮಿರೊಸ್ಲಾವ್ ಸೌಕಪ್ ಪಡೆಗೆ ಭಾರತದ ವಿರುದ್ಧ ಜಯದ ಅನಿವಾರ್ಯತೆ ಇದೆ.
ಭಾರತ ತನ್ನ ಕನಸನ್ನು ನನಸಾಗಿಸಿಕೊಳ್ಳಬೇಕಾದರೆ ಸೋಮವಾರದ ಪಂದ್ಯದಲ್ಲಿ ಯಶಸ್ಸು ಕಾಣಬೇಕು. ದೈಹಿಕವಾಗಿ ಬಲಿಷ್ಠರೆನಿಸಿರುವ ಬೆಹರಿನ್ ತಂಡದ ವಿರುದ್ಧ ಭಾರತ ತನ್ನ ನೈಜ ಪ್ರದರ್ಶನ ತೋರಬೇಕಾಗಿದೆ.
ಉತ್ತಮ ಸುಧಾರಣೆ ಕಂಡಿರುವ ಭಾರತದ ವಿರುದ್ಧ ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ಬೆಹರಿನ್ ತಂಡದ ಸಹಾಯಕ ಕೋಚ್ ಖಾಲಿದ್ ತಾಜ್ ಅಭಿಪ್ರಾಯಪಟ್ಟಿದ್ದಾರೆ, ಆದರೆ ಬ್ಲೂ ಟೈಗರ್ಸ್‌ಗೆ ಸೋಲುಣಿಸಲು ತಮ್ಮ ತಂಡ ಉತ್ತಮ ಹೋರಾಟ ನೀಡಲಿದೆ ಎಂದಿದ್ದಾರೆ.
‘ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿರುವ ಭಾರತ ತಂಡದ ಸಾ‘ನೆಯನ್ನು ಗೌರವಿಸುತ್ತೇವೆ. ಏಷ್ಯಾದಲ್ಲೇ ಅತ್ಯಂತ ಸುಧಾರಣೆ ಕಂಡ ತಂಡಗಳಲ್ಲಿ ಭಾರತವೂ ಒಂದು. ನಾವು ಭಾರತದ ವಿರುದ್ಧ ದೈಹಿಕ ಹಾಗೂ ಮಾನಸಿಕ ಆಟದಿಂದ ಪ್ರಭುತ್ವ ಸಾಧಿಸಲು ಯತ್ನಿಸುವೆವು, ‘ ಎಂದು ಖಾಲೀದ್ ಹೇಳಿದ್ದಾರೆ.
ಭಾರತ ತಂಡ ಫಾರ್ವರ್ಡ್ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಆಶಿಖ್ ಕುರುನಿಯಾನ್ ಹಾಗೂ ಉದಾಂತ್ ಸಿಂಗ್ ಅವರ ಉತ್ತಮ ಆಟದ ಪ್ರಯೋಜನ ಪಡೆದುಕೊಳ್ಳಬೇಕು. ಬೆಹರಿನ್‌ನ ಡಿಫೆನ್ಸ್ ವಿಭಾಗವನ್ನು ನಿಯಂತ್ರಿಸುವ ಕೆಲಸ ಮಾಡಬೇಕಿದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಲ್ಲಿ ಸುನಿಲ್ ಛೆಟ್ರಿ ಪಡೆಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

Related Articles