Friday, March 29, 2024

ಬೆಂಗಳೂರಿಗೆ ಕೋಲ್ಕತಾ ಸವಾಲು

ಸ್ಪೋರ್ಟ್ಸ್ ಮೇಲ್ ವರದಿ 

ಸ್ಟೀವ್ ಕೊಪ್ಪೆಲ್ ಅವರ ಮುಂದಾಳತ್ವದ ಎಟಿಕೆ ತಂಡ 2018ರ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ವಲ್ಪ ಚೇತರಿಕೆಯನ್ನು ಕಂಡಿದೆ. ಆದರೆ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಇಂದು  ನಡೆಯಲಿರುವ ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಕಠಿಣ ಸವಾಲನ್ನು ಎದುರಿಸಬೇಕಾಗಿದೆ.

ಕೊಪ್ಪೆಲ್ ಅವರ ತರಬೇತಿಯಲ್ಲಿ ಪಳಗಿದ ತಂಡ ಈ ಬಾರಿಯ  ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕಳಪೆ ಆರಂಭ  ಕಂಡಿತ್ತು. ಕೇರಳ ಬ್ಲಾಸ್ಟರ್ಸ್ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಮನೆಯಂಗಣದಲ್ಲಿ ಸೋಲನುಭವಿಸಿತ್ತು. ನಂತರ ಚೇತರಿಸಿಕೊಂಡ ಎಟಿಕೆ ಡೈಲ್ಲಿ ಡೈನಮೋಸ್ ವಿರುದ್ಧ ಮೊದಲ ಜಯ ಗಳಿಸಿತು, ನಂತರ ಜೆಮ್ಷೆಡ್ಪುರ ಎಫ್ ಸಿ  ವಿರುದ್ಧ ಡ್ರಾ ಸಾಧಿಸಿತು. ಬಳಿಕ ಮನೆಯಂಗಣದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ವಿರುದ್ಧ ಜಯ ಗಳಿಸಿತ್ತು.
‘ಮನೆಯಂಗಣದಲ್ಲಿ ಗೆದ್ದಿರುವುದು ಕೇವಲ ಮತ್ತೊಂದು ಜಯ. ಐಎಸ್‌ಎಲ್‌ನಲ್ಲಿ ಮನೆಯಂಗಣದಲ್ಲಿ ಗೆಲ್ಲುವುದು ಕಠಿಣ ಎನಿಸುತ್ತಿದೆ. ಆದರೆ ನಾವು ಹಿಂದಿನ ಪಂದ್ಯವನ್ನು ಗೆದ್ದಿದ್ದೇವೆ, ಅದೇ ರೀತಿ ಜಯದ ಲಯವನ್ನು ಕಾಯ್ದುಕೊಂಡು, ನಾಳೆಯ ಪಂದ್ಯದಲ್ಲೂ ಜಯ ಸಾಧಿಸುವೆವು,‘ ಎಂದು ಕೊಪ್ಪೆಲ್ ಹೇಳಿದ್ದಾರೆ.
ಫಾರ್ವರ್ಡ್ ಆಟಗಾರ ಕಲು ಅಚೆಯ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಎಟಿಕೆ ಇರಿಸಿಕೊಂಡಿತ್ತು, ಆದರೆ ಆರಂಭಿಕ ಪಂದ್ಯಗಳಲ್ಲಿ ಅವರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಚೆನ್ನೈಯಿನ್ ತಂಡದ ವಿರುದ್ಧ ಗೋಲು ಗಳಿಸುವ ಮೂಲಕ ಅವರು ಮರಳಿ ಫಾರ್ಮ್ ಪಡೆದುಕೊಂಡಿರುವುದು ಸ್ಪಷ್ಟವಾಗಿದೆ.
ಮನೆಯಂಗಣದಲ್ಲಿ ಗೋಲು ಗಳಿಕೆಯ ಬರವನ್ನು ತಂಡ ಕೊನೆಗೂ ನೀಗಿಸಿದೆ, ನಾರ್ತ್ ಈಸ್ಟ್ ಹಾಗೂ ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯಗಳಲ್ಲಿ ಗೋಲು ಗಳಿಸಿರಲಿಲ್ಲ. ಆದರೆ ಈಗ ಗೋಲಿನ ಖಾತೆ ತೆರೆದು ಸನ್ನದ್ಧವಾಗಿದೆ ಎಂಬುದು ಕೊಪ್ಪೆಲ್ ಅವರಿಗೆ ಸಮಾಧಾನದ ಸಂಗತಿ.
ಜಾನ್ ಜಾನ್ಸನ್ ಚೆನ್ನೈಯಿನ್ ವಿರುದ್ಧ ಗೋಲು ಗಳಿಸುವ ಮೂಲಕ ಮತ್ತೊಬ್ಬ ಆಟಗಾರ ಲಯ ಕಂಡುಕೊಂಡಿರುವುದು ಸ್ಪಷ್ಟ. ಬುಧವಾರ ನಡೆಯುವ ಪಂದ್ಯದಲ್ಲಿ ಬೆಂಗಳೂರು ತಂಡದ ಮಾಜಿ ಆಟಗಾರ ತನ್ನ ಮಾಜಿ ಜತೆ ಆಟಗಾರರ ವಿರುದ್ಧ ಆಡಲಿದ್ದಾರೆ.
ತನ್ನ ಹೊಸ ಕ್ಲಬ್ ಮನೆಯಂಗಣದಲ್ಲಿ ಕ್ಲೀನ್ ಶೀಟ್ ಸಾಧನೆ ಮಾಡುವಲ್ಲಿ ಜಾನ್ಸನ್ ಅವರ ಪಾತ್ರ ಪ್ರಮುಖವಾಗಿದೆ. ಈ ಋತುವಿನಲ್ಲಿ ಕ್ಲೀನ್ ಶೀಟ್ ಸಾಧನೆ ಮಾಡದಿರುವ ಎರಡು ತಂಡಗಳಲ್ಲಿ ಎಟಿಕೆ ಕೂಡ ಒಂದು.
‘ಪ್ರತಿಯೊಬ್ಬ ಕೋಚ್ ಕೂಡ ಕ್ಲೀನ್ ಶೀಟ್ ಸಾಧನೆಯನ್ನು ಇಷ್ಟಪಡುತ್ತಾರೆ. ನಾವು ಕ್ಲೀನ್ ಶೀಟ್‌ಗಾಗಿ ಉತ್ತಮ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಇದುವರೆಗೂ ನಮಗೆ ಆ ಸಾಧನೆ ಮಾಡಲಾಗಲಿಲ್ಲ. ಆದರೆ ನಾಳೆಯ ಪಂದ್ಯದಲ್ಲಿ ಅದು ನಮ್ಮ ಮೊದಲ ಆದ್ಯತೆ,‘ ಎಂದಿದ್ದಾರೆ.
ಮಿಕು ಹಾಗೂ ಸುನಿಲ್ ಛೆಟ್ರಿ ಅವರಂಥ ಆಟಗಾರರನ್ನು ಹೊಂದಿರುವ ಬೆಂಗಳೂರು ತಂಡದ ವಿರುದ್ಧ ಕ್ಲೀನ್ ಶೀಟ್ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ. ಕಾರ್ಲಸ್ ಕ್ವಾಡ್ರಾಟ್ ಅವರಲ್ಲಿ ಪಳಗಿರುವ ತಂಡ ಹಾಲಿ ಚಾಂಪಿಯನ್ ವಿರುದ್ಧ ಜಯ ಗಳಿಸುವ ಮೂಲಕ ಈ ಋತುವಿನಲ್ಲಿ ಅಬ್ಬರದ ಆರಂ‘ ಕಂಡಿತ್ತು. ಮಿಕು ಹಾಗೂ ಸುನಿಲ್ ಗೋಲು ಗಳಿಸುವಾಗ ಎದುರಾಳಿ ತಂಡಕ್ಕೆ ಕ್ಲೀನ್ ಶೀಟ್ ಸಾಧನೆ ಅಷ್ಟು ಸುಲಭವಲ್ಲ. ಇದುವರೆಗೂ ಬೆಂಗಳೂರು ತಂಡ ಆರು ಗೋಲುಗಳನ್ನು ಗಳಿಸಿದೆ, ಅದರಲ್ಲಿ ಮಿಕು ಹಾಗೂ ಸುನಿಲ್ ಅವರು ಐದು ಗೋಲುಗಳನ್ನು ಹಂಚಿಕೊಂಡಿದ್ದಾರೆ.
‘ಅವರು ಕಳೆದ ಋತುವಿನಲ್ಲಿ ಸಾಕಷ್ಟು ಗೋಲುಗಳನ್ನು ಗಳಿಸಿದ್ದಾರೆ, ಈ ಬಾರಿಯೂ ಅವರಿಂದ ಸಾಕಷ್ಟು ಗೋಲುಗಳನ್ನು ನಿರೀಕ್ಷಿಸುತ್ತಿದ್ದೇವೆ,‘ ಎಂದು ಕ್ವಾಡ್ರಾಟ್ ಹೇಳಿದ್ದಾರೆ. ಅವರು ವೃತ್ತಿಪರರು ಉತ್ತಮವಾಗಿ ಆಡಲು ಉತ್ಸುಕರಾಗಿದ್ದಾರೆ ಎಂದರು.
ಬೆಂಗಳೂರು ತಂಡ ಮನೆಯಂಗಣದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಇತ್ತೀಚಿನ ದಿನಗಳಲ್ಲಿ ತಂಡದ ಪ್ರದರ್ಶನ ಅತ್ಯುತ್ತಮವಾಗಿದೆ. ಕಳೆದ ಬಾರಿ ಲೀಗ್‌ಗೆ ಕಾಲಿಟ್ಟ ತಂಡ ಮನೆಯಂಗಣದ ಹೊರಗಡೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಜಯ ಗಳಿಸಿದೆ. ಕೋಲ್ಕೊತಾಕ್ಕೆ ಬರುವ ಮೊದಲು ಮನೆಯಂಗಣದಿಂದ ಹೊರಗಡೆ ಆಡಿದ ಸತತ ಐದು ಪಂದ್ಯಗಳಲ್ಲಿ ಜಯ ಗಳಿಸಿದ ದಾಖಲೆ ಹೊಂದಿದೆ.
ಬುಧವಾರ ನಡೆಯಲಿರುವ ಪಂದ್ಯದಲ್ಲಿ ಎಟಿಕೆ ಮೇಲುಗೈ ಸಾಧಿಸಬಹುದೇ?, ಅದಕ್ಕಾಗಿ ಅವರು ಬ್ಲೂ ವಿರುದ್ಧ ಮೊದಲ ಗೋಲು ಗಳಿಸಬೇಕಾಗಿದೆ.

Related Articles