ಲಿವರ್ಪೂಲ್‌ಗೆ 6ನೇ ಬಾರಿ ಚಾಂಪಿಯನ್ಸ್‌ ಲೀಗ್‌ ಗರಿ

0
2

ಮ್ಯಾಡ್ರಿಡ್‌:

ಟೊಟ್ಟೆನ್ಯಾಮ್‌ ಹಾಟ್ಸ್‌ಪರ್  ವಿರುದ್ಧ ಲಿವರ್ಪೂಲ್‌ ಫೈನಲ್‌ ಪಂದ್ಯ ಗೆದ್ದು ಆರನೇ ಬಾರಿ ಚಾಂಪಿಯನ್ಸ್‌ ಲೀಗ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಶನಿವಾರ ಇಲ್ಲಿನ ಮೆಟ್ರೋಪೊಲಿಟನ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್‌ ಲೀಗ್‌ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊಹಮ್ಮದ್‌ ಸಲಾಹ್‌ (2ನೇ ನಿಮಿಷ) ಹಾಗೂ ಡಿವೋಕ್ ಒರಿಗಿ (87ನೇ ನಿ) ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಲಿವರ್ಪೂಲ್‌ 2-0  ಅಂತರದಲ್ಲಿ ಟೊಟ್ಟೆನ್ಯಾಮ್‌ ಹಾಟ್ಸ್‌ಪುರ್‌ ವಿರುದ್ಧ ಜಯ ಸಾಧಿಸಿ ಚಾಂಪಿಯನ್ಸ್‌ ಲೀಗ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಪಂದ್ಯದ ಆರಂಭದ ಎರಡನೇ ನಿಮಿಷದಲ್ಲಿ ಮೊಹಮ್ಮದ್‌ ಸಲಾಹ್‌ ಅವರು ಸಿಕ್ಕ ಪೆನಾಲ್ಟಿಯನ್ನು ಸದುಪಯೋಗ ಪಡಿಸಿಕೊಂಡರು. ಆ ಮೂಲಕ ಆರಂಭದಲ್ಲೇ ಲಿವರ್ಪೂಲ್‌ಗೆ 1-0 ಮುನ್ನಡೆ ಲಭಿಸುತ್ತದೆ. ನಂತರ ಇನ್ನೇನು ನಿಗದಿತ ಅವಧಿ ಮುಕ್ತಾಯವಾಗಲು ಮೂರು ನಿಮಿಷ ಬಾಕಿ ಇರುವಾಗ ಡಿವೋಕ್‌ ಒರಿಗೆ ಲಿವರ್ಪೂಲ್‌ಗೆ ಎರಡನೇ ಗೋಲಿನ ಕೊಡುಗೆ ನೀಡಿದರು.
ಕಳೆದ ಆವೃತ್ತಿಯಲ್ಲಿ ರಿಯಲ್‌ ಮ್ಯಾಡ್ರಿಡ್‌ ವಿರುದ್ಧ ಸೋಲು ಅನುಭವಿಸಿದ ರೀತಿ ಈ ಬಾರಿ ಲಿವರ್ಪೂಲ್‌ ಪ್ರಸಕ್ತ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಆಗಲಿಲ್ಲ. ಆದರೆ, ಎರಡನೇ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲವಾದ್ದರಿಂದ ಟೊಟ್ಟೆನ್ಯಾಮ್‌ ಭಾರಿ ಬೆಲೆ ತೆರಬೇಕಾಯಿತು.
ಟೊಟ್ಟೆನ್ಯಾಮ್‌ ತಂಡದ ಕೋಚ್‌ ಮೌರಿಸಿಯಾ ಪೊಚ್ಚೆಟೀನೋ ಅವರು ಗಾಯದಿಂದಾಗಿ ಕಳೆದ ಎರಡು ತಿಂಗಳು ತಂಡದಿಂದ ಹೊರಗುಳಿದಿದ್ದ ಹ್ಯಾರಿ ಕೇನ್ ಹಾಗೂ ಹ್ಯಾರಿ ವಿಂಕ್ಸ್‌ಅವರನ್ನು ಫೈನಲ್‌ ಹಣಾಹಣಿಯ ಅಂತಿಮ 11 ರಲ್ಲಿ ಸ್ಥಾನ ನೀಡಿದ್ದರು. ಆದರೆ, ಸೆಮಿಫೈನಲ್‌ ಪದ್ಯದಲ್ಲಿ ಹ್ಯಾಟ್ರಿಕ್‌ ಗೋಲು ಗಳಿಸಿದ್ದ ಲುಕಾಸ್‌ ಮೌರಾ ಅವರು ಬೆಂಚ್‌ ಕಾದಿದ್ದರು. ಇದು ತಂಡದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತು.
ಆದರೆ, ಸ್ನಾಯು ಸೆಳೆತದಿಂದ ತಂಡದಿಂದ ಹೊರಗುಳಿದಿದ್ದ ರಾಬರ್ಟ್‌ ಫರ್ಮಿನೋ ಅವರನ್ನು ಲಿವರ್ಪೂಲ್‌ ತಂಡದ ಫೈನಲ್‌ ಹಣಾಹಣಿಗೆ ಕೋಚ್ ಜುರ್ಗೆನ್‌ ಕ್ಲೋಪ್‌ ಅವಕಾಶ ನೀಡಿದ್ದರು. ಪಂದ್ಯದಲ್ಲಿ ಎಲ್ಲಾ ಆಟಗಾರರು ಜವಾಬ್ದಾರಿಯುತ ಆಟ ಪ್ರದರ್ಶನ ತೋರಿದ ಫಲವಾಗಿ ಲಿವರ್ಪೂಲ್‌ ಅಂತಿಮ 2-0 ಅಂತರದಲ್ಲಿ ಪಂದ್ಯ ಗೆದ್ದು ಆರನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.