ಸ್ಪೋರ್ಟ್ಸ್ ಮೇಲ್ ವರದಿ
ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ (ಎಐಎಫ್ ಎಫ್ )ನ ಲೀಗ್ ಸಮಿತಿಯು ಹೊಸದಿಲ್ಲಿಯಲ್ಲಿ ಸಭೆ ಸೇರಿ ಕರ್ನಾಟಕದ ಎರಡು ತಂಡಗಳಿಗೆ ಮುಂಬರುವ ಎರಡನೇ ಡಿವಿಜನ್ ಐ ಲೀಗ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿದೆ.
ಸೌತ್ ಯುನೈಟೆಡ್ ಫುಟ್ಬಾಲ್ ತಂಡ 2013ರಲ್ಲಿ 2ನೇ ಹಂತದ ಐ ಲೀಗ್ ಪಂದ್ಯಗಳನ್ನು ಆಡಿತ್ತು. ಕರ್ನಾಟಕದಿಂದ ಆಯ್ಕೆಯಾಗಿರುವ ಇನ್ನೊಂದು ತಂಡವೆಂದರೆ ಓಜೋನ್ ಫುಟ್ಬಾಲ್ ಕ್ಲಬ್.
ಎರಡನೇ ಡಿವಿಜನ್ ಹೀರೋ ಐ ಲೀಗ್‌ಗೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಕ್ಲಬ್‌ನ ನಿರ್ದೇಶಕ ಶರಣ್ ಪಾರಿಖ್, ‘ಈ ಹಂತ ತಲುಪಲು ನಾವು ಕಠಿಣ ಶ್ರಮ ಪಟ್ಟಿದ್ದೇವೆ, ಈ ಹಂತದಲ್ಲಿ ನಿಲ್ಲಲು ನಾವು ಮತ್ತಷ್ಟು ಪರಿಶ್ರಮ ಪಡಬೇಕಾಗಿದೆ. ಉತ್ತಮ ಕೋಚ್ ಹಾಗೂ ಉತ್ತಮ ಆಟಗಾರರಿಂದ ಕೂಡಿರುವ ತಂಡ ನಮ್ಮದಾಗಿದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ನಾವು ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತೇವೆಂಬ ನಂಬಿಕೆ ಇದೆ. 2018-19ರ ಲೀಗ್‌ನಲ್ಲಿ ನಮ್ಮ ತಂಡ ತಮ್ಮದೇ ಆದ ಛಾಪು ಮೂಡಿಸಲಿದೆ ಎಂಬ ನಂಬಿಕೆ ಇದೆ.‘ ಎಂದು ಹೇಳಿದ್ದಾರೆ.
ಬಿಡಿಎಫ್ಎ ಸೂಪರ್ ಡಿವಿಜನ್ ಫುಟ್ಬಾಲ್‌ನಲ್ಲಿ ಸೌತ್ ಯುನೈಟೆಡ್ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಋತುವಿಗೆ ಕ್ಲಬ್ ಕೆಲವು ಉತ್ತಮ ಆಟಗಾರರನ್ನು ಸೇರಿಸಿಕೊಂಡಿದೆ. ನೂತನ ಪ್ರಧಾನ ಕೋಚ್ ಮಿಕ್ವೆಲ್ ಲ್ಯಾಡೋ ಅವರ ತರಬೇತಿಯಲ್ಲಿ ತಂಡ ಉತ್ತಮ ಫುಟ್ಬಾಲ್ ಪ್ರದರ್ಶಿಸುತ್ತಿದೆ. ಅದೇ ರೀತಿ ಯುವ ಆಟಗಾರರಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಇದುವರೆಗೂ 2ನೇ ಡಿವಿಜನ್ ಐ ಲೀಗ್‌ಗೆ ಒಟ್ಟು ಒಂಬತ್ತು ತಂಡಗಳು ಆಯ್ಕೆಯಾಗಿವೆ.
ತಂಡಗಳ ವಿವರ- ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ (ಕರ್ನಾಟಕ), ಒಜೋನ್ ಫುಟ್ಬಾಲ್ ಕ್ಲಬ್ (ಕರ್ನಾಟಕ), ತ್ಹೇ ಹೈದರಾಬಾದ್ ಎಎಫ್ ಸಿ,(ತೆಲಂಗಾಣ), ನ್ಯೂ ಬರಾಕ್‌ಪೂರ್ ರೇನ್‌ಬೋ ಎಫ್ ಸಿ (ಪಶ್ಚಿಮ ಬಂಗಾಳ), ಮೊಹಮ್ಮದನ್ ಸ್ಪೋರ್ಟಿಂಗ್ (ಪಶ್ಚಿಮ ಬಂಗಾಳ), ಚಿಂಗಾ ವೆಂಗ್ ಎಫ್ ಸಿ (ಮಿಜೋರಾಂ), ಲೋನ್‌ಸ್ಟಾರ್ ಕಾಶ್ಮೀರ್ (ಜಮ್ಮು ಮತ್ತು ಕಾಶ್ಮೀರ), ಹಿಂದೂಸ್ಥಾನ್ ಫುಟ್ಬಾಲ್ ಕ್ಲಬ್ (ದಿಲ್ಲಿ), ಎಆರ್‌ಎಎಫ್ ಸಿ (ಗುಜರಾತ್).