ಸ್ಪೋರ್ಟ್ಸ್ ಮೇಲ್ ವರದಿ
ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯಗಳನ್ನು ಗಮನಿಸಿದಾಗ ಮುಂಬೈಗಿಂತ ಗೋವಾ ಬಲಿಷ್ಠ ತಂಡವೆಂಬುದು ಸ್ಪಷ್ಟ. ಆದರೆ ಮೊದಲ ಹಂತದಲ್ಲಿ ಸೆಮಿೈನಲ್ ಪಂದ್ಯದಲ್ಲಿ ಯಾವುದು ನಿಶ್ಚಿತ ಎಂದು ಹೇಳಲಾಗದು. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಹೆಚ್ಚು ಗೋಲು ಗಳಿಸುವ ತಂಡ ಗೆಲ್ಲುತ್ತದೆಯೇ ಹೊರತು ಹಿಂದಿನ ದಾಖಲೆಗಳಲ್ಲ.
ಲೀಗ್ ಹಂತದಲ್ಲಿ ಎಫ್ ಸಿ ಗೋವಾ ಮುಂಬೈ ತಂಡವನ್ನು ಎರಡು ಬಾರಿ ಸೋಲಿಸಿತ್ತು. ಮೊದಲ ಬಾರಿ ಗೋವಾದಲ್ಲಿ 5-0 ಗೋಲಿನಿಂದ ಮಣಿಸಿದರೆ, ನಂತರ ಮುಂಬೈಯಲ್ಲಿ 2-0 ಗೋಲಿನಿಂದ ಗೆದ್ದಿತ್ತು. ಗೋವಾ ತಂಡ ಒಟ್ಟು 7-0 ಗೋಲುಗಳಿಂದ ಮೇಲುಗೈ ಸಾಧಿಸಿದ್ದರರೂ ಫುಟ್ಬಾಲ್ನಲ್ಲಿ ನಿಖರವಾಗಿ ಹೇಳಲಾಗದು. ಏಕೆಂದರೆ ನಾಕೌಟ್ ಹಂತದ ಮೊದಲ ಪಂದ್ಯದಲ್ಲಿ ಮುಂಬೈ ಜಯ ಗಳಿಸಲು ಎಲ್ಲ ರೀತಿಯಲ್ಲಿ ಸಜ್ಜಾಗಿದೆ.
‘ನಾವು ವಾಸ್ತವನ್ನು ನೋಡಬೇಕು. ನಾವು ಗೋವಾ ವಿರುದ್ಧ ಎರಡು ಪಂದ್ಯಗಳನ್ನು ಸೋತಿದ್ದೇವೆ. ನಾಳೆಯ ಕತೆಯೇ ಭಿನ್ನವಾಗಿರುತ್ತದೆ ಎಂಬುದು ನನ್ನ ನಂಬಿಕೆ. ಗೋವಾ ವಿರುದ್ಧದ ಎರಡೂ ಪಂದ್ಯಗಳಲ್ಲಿ ನಾವು ತಪ್ಪನ್ನೆಸಗಿದ್ದೇವೆ. ಆದರೆ ಅದರಿಂದ ಪಾಠ ಕಲಿತಿದ್ದೇವೆ,‘ ಎಂದು ಮುಂಬೈ ಕೋಚ್ ಜಾರ್ಜ್ ಕೋಸ್ಟಾ ಹೇಳಿದ್ದಾರೆ.
ಗೋವಾದ ವಿರುದ್ಧ 5-0 ಅಂತರದಲ್ಲಿ ಸೋಲನುಭವಿಸಿದ್ದರೂ ಮುಂಬೈಯ ನೈಜ ಆಟಕ್ಕೆ ಯಾವುದೇ ರೀತಿಯ ದಕ್ಕೆಯಾಗಲಿಲ್ಲ. ತಾನು ಬಲಿಷ್ಠ ತಂಡಗಳನ್ನು ಸೋಲಿಸಬಲ್ಲೆ ಎಂಬುದನ್ನು ಮುಂಬೈ ಆ ನಂತರದ ಪಂದ್ಯಗಳಲ್ಲಿ ತೋರಿಸಿದೆ. ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಮುಂಬೈ ಚೇತರಿಸಿಕೊಂಡಿದ್ದೇವೆ ಸಾಬೀತುಪಡಿಸಿದೆ. ಗೋವಾ ತಂಡ ಇದುವರೆಗೂ ಮುಂಬೈ ವಿರುದ್ಧ ಏಳು ಕ್ಲೀನ್ ಶೀಟ್ ಸಾಧನೆ ಮಾಡಿದೆ. ಅದೇ ರೀತಿ 19 ಗೋಲುಗಳನ್ನು ಗಳಿಸಿದೆ.
ಸರ್ಗಿಯೋ ಲೊಬೆರಾ ಅವರ ತರಬೇತಿಯಲ್ಲಿ ಗೋವಾ ತಂಡ ಸತತ ಎರಡನೇ ಬಾರಿಗೆ ಪ್ಲೇ ಆಫ್ ಹಂತವನ್ನು ತಲಪುತ್ತಿದೆ. ಕಳೆದ ಬಾರಿ ಚೆನ್ನೈಯಿನ್ ತಂಡದ ವಿರುದ್ಧ ಸೋಲನುಭವಿಸಿದ್ದ ಗೋವಾ ತಂಡ ಈ ಬಾರಿ ಜಯದೊಂದಿಗೆ ಫೈನಲ್ ತಲಪುವ ಗುರಿ ಹೊಂದಿದೆ. ಆಕ್ರಮಣಕಾರಿ ಫುಟ್ಬಾಲ್ ಆಟವನ್ನು ಪ್ರದರ್ಶಿಸಿದ ಗೋವಾದ ಆಟಗಾರರು 18 ಪಂದ್ಯಗಳಲ್ಲಿ 36 ಗೋಲುಗಳನ್ನು ಗಳಿಸಿದ್ದಾರೆ. ಸ್ಪೇನ್ ಮೂಲದ ಆಟಗಾರ ಫೆರಾನ್ ಕೊರೊಮಿನಾಸ್ ಅತಿ ಹೆಚ್ಚು ಗೋಲುಗಳನ್ನು ಗಳಿಸಿ ಸತತ ಎರಡನೇ ಬಾರಿಗೆ ಗೋಲ್ಡನ್ ಬೂಟ್ ಧರಿಸುವ ಗುರಿ ಹೊಂದಿದ್ದಾರೆ. ‘ನಮ್ಮ ತಂಡದ ವಿಶೇಷ ಅಂಶವೆಂದರೆ ನಮ್ಮ ಫುಟ್ಬಾಲ್ ಆಟದ ಶೈಲಿ, ಎದುರಾಳಿ ತಂಡವನ್ನು ಗಂಭೀರವಾಗಿ ಪರಿಗಣಿಸಬೇಕಾಗಿರುವುದು ನಿಜ, ಅದೇ ರೀತಿ ನಮ್ಮ ಆಟದ ಶೈಲಿ ಹಾಗೂ ನಮ್ಮ ಶಕ್ತಿ ಏನೆಂಬುದರ ಅದರ ಬಗ್ಗೆ ಹೆಚ್ಚಿನ ಕೆಲಸ ಮಾಡಬೇಕು.‘ ಎಂದು ಗೋವಾ ತಂಡದ ಸಹಾಯಕ ಕೋಚ್ ಜೆಸಸ್ ಟಾಟೊ ಹೇಳಿದ್ದಾರೆ.
ಗೋವಾದ ಯಶಸ್ಸಿನ ಹಾದಿಯಲ್ಲಿ ಕೊರೊಮಿನಾಸ್ ಗಳಿಸಿರುವ 15 ಗೋಲುಗಳು ಪ್ರಮುಖವಾದುದು. ಮೊಡೌ ಸೌಗೌ ಕೂಡ ಮುಂಬೈ ತಂಡ ಅಂತಿಮ ನಾಲ್ಕರ ಹಂತ ತಲಪುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಲೀಗ್ ಹಂತದಲ್ಲಿ 12 ಗೋಲುಗಳನ್ನು ಗಳಿಸಿರುವ ಸೆನೆಗಲ್ನ ಆಟಗಾರ ಮುಂಬೈ ತಂಡದ ಪರ ಐಎಸ್ಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲುಗಳನ್ನು ಗಳಿಸಿರುವ ಆಟಗಾರರೆನಿಸಿದ್ದಾರೆ. ಕೋಸ್ಟಾ ಅವರ ಯೋಜನೆಗಳಿಗೆ ಅಡ್ಡಿಯನ್ನುಂಟು ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಮೊಡೌ ಸೌಗೌ ಅವರನ್ನು ಗೋವಾ ಈ ಬಾರಿ ಹಗುರವಾಗಿ ಪರಿಗಣಿಸುವಂತಿಲ್ಲ. ಕೋಸ್ಟಾ ಅವರು ಕಳೆದ ಬೇಸಿಗೆಯಲ್ಲಿ ಅಲೆಕ್ಸಾಂಡ್ರೆ ಗ್ಯುಮೆರಾಯ್ಸ್ ಅವರಿಂದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಮುಂಬೈ ತಂಡಕ್ಕೆ ಹೊಸ ರೂಪು ನೀಡಿದ್ದರು.