Friday, November 22, 2024

ಹಾಲಿ, ಮಾಜಿ ಚಾಂಪಿಯನ್ನರ ಕದನ

ಕೋಲ್ಕೊತಾ, ಅಕ್ಟೋಬರ್ 25

ಶುಕ್ರವಾರ ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ಸಿ ಹಾಗೂ ಮಾಜಿ ಚಾಂಪಿಯನ್ ಎಟಿಕೆ ತಂಡಗಳು ಜಯವನ್ನೇ ಗುರಿಯಾಗಿಸಿಕೊಂಡು ಅಂಗಣಕ್ಕಿಳಿಯಲಿವೆ.

ಐಎಸ್‌ಎಲ್‌ನ ಅಂಕಪಟ್ಟಿಯಲ್ಲಿ ಚೇತರಿಕೆ ಕಂಡುಕೊಳ್ಳಬೇಕಾದರೆ ಇತ್ತಂಡಗಳಿಗೆ ಜಯದ ಅಗತ್ಯವಿದೆ. ಎಟಿಕೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಅಂಕಗಳನ್ನು ಗಳಿಸಿದ್ದು, ಚೆನ್ನೆ‘ಯಿನ್ ಕೇವಲ ಒಂದು ಅಂಕ ಗಳಿಸಿ ಒತ್ತಡದಲ್ಲಿದೆ.
ಮನೆಯಂಗಣದಲ್ಲಿ ಸತತ ಎರಡು ಸೋಲು ಅನುಭವಿಸಿದ ನಂತರ ಎಟಿಕೆ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿತ್ತು, ನಂತರ ಜೆಮ್ಷೆಡ್ಪುರ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿತ್ತು. ಆದರೆ ಇತರ ಐದು ತಂಡಗಳು ಉತ್ತಮ ಪ್ರದರ್ಶನ ತೋರಿದ್ದು, ಸ್ಟೀವ್ ಕೊಪ್ಪೆಲ್ ತಂಡಕ್ಕೆ ಈಗ ಜಯದ ಅನಿವಾರ್ಯತೆ ಇದೆ.
‘ಹೆಚ್ಚಿನ ತಂಡಗಳು ಸಮಾನ ಹಂತದಲ್ಲಿವೆ. ಆದರೆ ಕೆಲವು ತಂಡಗಳು ಉತ್ತಮ ಪ್ರದರ್ಶನ ತೋರಿ ಮುಂದೆ ಸಾಗಿವೆ. ನಾವು ಕೂಡ ಎಲೈಟ್ ಗುಂಪನ್ನು ತಲುಪಬೇಕಾಗಿದೆ. ಮನೆಯಂಗಣದಲ್ಲಿ ನಮಗೆ ಜಯದ ಅಗತ್ಯವಿದೆ. ಉತ್ತಮ ತಂಡಗಳು ಮನೆಯಂಗಣದಲ್ಲಿ ಜಯ ಗಳಿಸುತ್ತವೆ. ಮನೆಯಂಗಣದ ಅಭಿಮಾನಿಗಳ ಸಮ್ಮುಖದಲ್ಲಿ ನಾವು ಅಂಕ ಗಳಿಸಬೇಕಾಗಿದೆ.‘ ಎಂದು ಕೊಪ್ಪೆಲ್ ಹೇಳಿದ್ದಾರೆ.
ಚೆನ್ನೆ‘ಯಿನ್ ತಂಡ ಕೂಡ ಮೂರು ಅಂಕಗಳನ್ನು ಗಳಿಸುವ ಅನಿವಾರ್ಯತೆಯಲ್ಲಿದೆ. ಅವರಿಗೆ ಈಋತುವಿನ ಜಯದ ಖಾತೆಯ ಅಗತ್ಯವಿದೆ. ಇನ್ನೂ ಮೂರು ಅಂಕ ಗಳಿಸಿಲ್ಲ. ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ ನಂತರ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಗೋಲಿಲ್ಲದೆ ಡ್ರಾ ಕಂಡಿದೆ.
ಡ್ರಾದ ಲಿತಾಂಶದ ನಂತರ ತಂಡ ಮೂರು ಅಂಕಗಳನ್ನು ಗಳಿಸುವ ಆತ್ಮವಿಶ್ವಾಸ ಹೊಂದಿದೆ ಎಂದು ಕೋಚ್ ಜಾನ್ ಗ್ರೆಗೋರಿ ಅವರ  ನಿಲುವು. ದುರ್ಬಲ ಡೆಲ್ಲಿ ವಿರುದ್ಧವೂ ಚೆನ್ನೆ‘ಯಿನ್ ತಂಡಕ್ಕೆ ಗೋಲು ಗಳಿಸಲಾಗಲಿಲ್ಲ ಎಂಬುದು ಗಮನಾರ್ಹ. ಪ್ಲೇ ಆಫ್ ಹಂತದ ಸ್ಪರ್ಧೆಯಲ್ಲಿರುವ ಹಾಲಿ ಚಾಂಪಿಯನ್ ಚೆನ್ನೆ‘ಯಿನ್ ತಂಡಕ್ಕೆ ಈಗ ಜಯದ ಹೊರತಾಗಿ ಬೇರೇನೂ ಬೇಕಾಗಿಲ್ಲ.
ನಾವು ಇದುವರೆಗೂ ನಾಲ್ಕು ಪಂದ್ಯಗಳನ್ನು ಆಡಿದ್ದೇವೆ, ತಂಡದಲ್ಲಿ ಹೊಸ ಮುಖಗಳಿವೆ. ಅವರಿಗೆ ಹೊಂದಿಕೊಳ್ಳಲು ಇನ್ನು ಕೆಲವು ಸಸಮಯ ಬೇಕಾಗುತ್ತದೆ. ದಿನದಿಂದ ದಿನಕ್ಕೆ ಪ್ರದರ್ಶನದ ಗುಣಮಟ್ಟ ಉತ್ತಮಗೊಳ್ಳುತ್ತಿದೆ. ನಾವು ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ. ಆದರೆ ನಾವು ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂಬ ನಂಬಿಕೆ ಇದೆ ಎಂದು ಸಹಾಯಕ ಕೋಚ್ ಸಬೀರ್ ಪಾಶಾ ಹೇಳಿದ್ದಾರೆ. ಜಾನ್ ಗ್ರೆಗೋರಿ ಅನಾರೋಗ್ಯದ ಕಾರಣ ಅವರು ತಂಡದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.
ಚಾಂಪಿಯನ್ಸ್ ತಂಡ ಡಿಫೆನ್ಸ್ ವಿಭಾಗದಲ್ಲಿ ದುರ್ಬಲವಾಗಿರುವುದು ಸ್ಪಷ್ಟವಾಗಿದೆ. ಇನಿಗೋ ಕಾಲ್ಡೆರಾನ್ ಹಾಗೂ ಎಲಿ ಸಾಬಿಯಾ ಅವರ ಮೊಗದಲ್ಲಿ ಈಗಲೂ ಆತ್ಮವಿಶ್ವಾಸವಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅದು ಸ್ಪಷ್ಟವಾಗಿದೆ. ಕಳೆದ ಬಾರಿ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ್ದ ಜೆಜೆ ಲಾಲ್‌ಪೆಕ್ಲುವಾ ಅವರು ಆಡುವ ಹನ್ನೊಂದರಲ್ಲಿ ಅವಕಾಶ ಪಡೆದರೆ ಉತ್ತಮ.
‘ಎಟಿಕೆ ಯಾವಾಗಲೂ ಬಲಿಷ್ಠ ತಂಡ. ಅವರು ಮನೆಯಂಗಣದಲ್ಲಿ ಎರಡು ಪಂದ್ಯಗಳನ್ನು ಸೋತಿರುವುದು ನಿಜ. ಆದರೆ ನಾಳೆಯ ಪಂದ್ಯದಲ್ಲಿ ಅವರು ಉತ್ತಮ ಹೋರಾಟ ನೀಡಲಿದ್ದಾರೆ. ಅವರನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಅವರು ಉತ್ತಮವಾಗಿ ಆಡುವುದಲ್ಲದೆ, ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುತ್ತಾರೆ,‘ ಎಂದು ಪಾಶಾ ಹೇಳಿದ್ದಾರೆ.
ಇಂಗ್ಲೆಂಡ್ ಮೂಲದ ತರಬೇತುದಾರರಿಂದ ಕೂಡಿರುವ ತಂಡಗಳ ನಡುವಿನ ಹೋರಾಟ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಸ್ಪಷ್ಟ.

Related Articles