ಪುಣೆ, ಅಕ್ಟೋಬರ್ 22
ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿರುವ ಎಫ್ಸಿ ಪುಣೆ ಸಿಟಿ ತಂಡಕ್ಕೆ ಸೋಮವಾರ ಬೆಂಗಳೂರು ಎಫ್ಸಿ ವಿರುದ್ಧ ಕಠಿಣ ಸವಾಲು ಎದುರಿಸಬೇಕಾಗಿದೆ.
ಮನೆಯಂಗಣದ ಹೊರಗೆ ನಡೆದ ಎರಡು ಪಂದ್ಯಗಳಲ್ಲಿ ಪುಣೆ ತಂಡ ಕೇವಲ ಒಂದು ಅಂಕ ಗಳಿಸುವಲ್ಲಿ ಯಶಸ್ವಿಯಾಗಿದೆ. ಈಗ ಮನೆಯಂಗಣದಲ್ಲಿ ಪಂದ್ಯಕ್ಕೆ ಸಜ್ಜಾಗಿರುವ ಪುಣೆ ತಂಡ ಬಲಿಷ್ಠ ಬೆಂಗಳೂರು ಸವಾಲನ್ನು ಎದುರಿಸಬೇಕಾಗಿದೆ.
‘ನನ್ನ ಪ್ರಕಾರ ಬೆಂಗಳೂರು ಎಫ್ಸಿ ಭಾರತದಲ್ಲೇ ಉತ್ತಮ ಕ್ಲಬ್. ಆಟಗಾರರಲ್ಲಿ ಬದಲಾವಣೆ ಮಾಡದೆ ಬೆಂಗಳೂರು ತಂಡ ಎರಡನೇ ಋತುವಿನಲ್ಲಿ ಆಡುತ್ತಿದೆ. ಕೇವಲ ಇಬ್ಬರು ಮೂವರು ಆಟಗಾರರನ್ನು ಬದಲಾಯಿಸಿಕೊಂಡಿದೆ. ಈ ಪಂದ್ಯ ಪ್ರಮುಖವಾಗಿದೆ. ಅಲ್ಬರ್ಟ್ ರೊಕಾ ತಂಡವನ್ನು ತ್ಯಜಿಸಿರಬಹುದು. ಆದರೆ ಕಾರ್ಲಸ್ ಕ್ವಾಡ್ರಾಟ್ ಅಷ್ಟೇ ಉತ್ತಮ ಕೋಚ್. ಅದೇ ತತ್ವವನ್ನು ಮುಂದುವರಿಸಿಕೊಂಡು ಹೋಗುವುದು ಪ್ರಮುಖವಾಗಿದೆ,‘ ಎಂದು ಪುಣೆ ತಂಡದ ಕೋಚ್ ಮಿಗ್ವೆಲ್ ಏಂಜಲ್ ಪೋರ್ಚುಗಲ್ ಹೇಳಿದ್ದಾರೆ.
ಬೆಂಗಳೂರು ವಿರುದ್ಧ ಪುಣೆ ಗೆದ್ದರೆ ಋತುವಿನ ಮೊದಲ ಜಯ ಮಾತ್ರವಲ್ಲ, ಕಳೆದ ಬಾರಿ ಯಾವ ತಂಡದ ವಿರುದ್ಧ ಸೋತು ಪ್ಲೇಆಫ್ನಿಂದ ಹೊರ ಬಿದ್ದಿದೆಯೋ ಆ ತಂಡದ ವಿರುದ್ಧ ಗಳಿಸಿದ ಮೊದಲ ಜಯ ಎನಿಸಲಿದೆ.
‘ನಾವು ಪಂದ್ಯಕ್ಕೆ ಉತ್ತಮ ರೀತಿಯಲ್ಲಿ ಸಜ್ಜಾಗಿದ್ದೇವೆ. ನಮಗೆ ಅವರ ಶಕ್ತಿ ಹಾಗೂ ದೌರ್ಬಲ್ಯದ ಬಗ್ಗೆ ಚೆನ್ನಾಗಿ ಗೊತ್ತಿದೆ. ನಮಗೆ ನಮ್ಮದೇ ಆದ ಯೋಜನೆಗಳಿವೆ. ಜಯಕ್ಕಾಗಿ ನಮ್ಮದೆ ಆದ ಯೋಜನೆ ಹಾಕಿಕೊಂಡಿದ್ದೇವೆ,‘ ಎಂದು ಪೋರ್ಚುಗಲ್ ಹೇಳಿದ್ದಾರೆ.
ಕಳೆದ ಬಾರಿಯ ರನ್ನರ್ ಅಪ್ ತಂಡ ಬೆಂಗಳೂರು ವಿರುದ್ಧ ಸ್ಪೇನ್‌ನ ಕೋಚ್ ತಂಡದ ಪ್ರಮುಖ ಅಟ್ಯಾಕರ್ಸ್‌ಗಳಾದ ಎಮಿಲಿಯಾನೊ ಅಲ್ಫಾರೋ ಹಾಗೂ ಮಾರ್ಸೆಲಿನೋ ಅವರನ್ನು ಪ್ರಮುಖ ಅಸ್ತ್ರವಾಗಿ ಬಳಸಲಿದ್ದಾರೆ. ಗೋಲು ಗಳಿಕೆಯಲ್ಲಿ ಪುಣೆ ಬಹಳ ಹಿಂದೆ ಇದೆ. 21 ಬಾರಿ ಗೋಲ್ ಬಾಕ್ಸರ್‌ಗೆ ಗುರಿ ಇಟ್ಟರೂ ಯಶಸ್ಸು ಕಂಡಿರುವುದರಲ್ಲಿ ಎಲ್ಲ 10 ತಂಡಗಳಿಗಿಂತ ಹಿಂದೆ ಬಿದ್ದಿದೆ. ಕೇವಲ ಶೇ. 4.76 ಗೋಲು ಗಳಿಕೆಯ ಸರಾಸರಿ.
ಕಳೆದ ಋತುವಿನಲ್ಲಿ ಇಂಡಿಯನ್ ಸೂಪರ್ ಲೀಗ್‌ಗೆ ಪದಾರ್ಪಣೆ ಮಾಡಿದ ಬೆಂಗಳೂರು ತಂಡದ ಈ ಬಾರಿಯ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಚೆನ್ನೈ ವಿರುದ್ಧ ಜಯ ಗಳಿಸಿದರೂ ಜೆಮ್ಷೆಡ್ಪುರ ವಿರುದ್ಧ ಜಯದಿಂದ ವಂತಿತವಾಗಿ ಅಂಕ ಹಂಚಿಕೊಂಡಿತ್ತು. ಮನೆಯಂಗಣದ ಹೊರಗಡೆ ನಡೆದ ಪಂದ್ಯಗಳಲ್ಲಿ ಬೆಂಗಳೂರು ಉತ್ತಮ ಪ್ರದರ್ಶನ ತೋರಿದ್ದು, ಅದೇ ಪ್ರದರ್ಶನವನ್ನು ಮುಂದುವರಿಸುವ ಗುರಿ ಹೊಂದಿದೆ. ಕಳೆದ ಬಾರಿ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಬೆಂಗಳೂರು ಏಳು ಜಯ ಕಂಡಿತ್ತು.
‘ಪುಣೆ ವಿರುದ್ಧದ ಪಂದ್ಯವೆಂದಾಗ ಅದು ಯಾವಾಗಲೂ ಕಠಿಣವಾಗಿರುತ್ತದೆ. ಈ ಬಾರಿಯೂ ಯಾವ ಬದಲಾವಣೆಯನ್ನು ನಿರೀಕ್ಷಿ,ಸುತುವಿದಿಲ್ಲ. ಎರಡು ವಾರಗಳ ಹಿಂದೆ ಮ್ಯಾಡ್ರಿಡ್‌ನಲ್ಲಿ ಮಿಗ್ವೆಲ್ ಅವರನ್ನು ಭೇಟಿಯಾಗಿರುವೆ. ಅವರು ತಮ್ಮ ತಂಡದ ಅಟ್ಯಾಕ್ ವಿಭಾಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ನಮ್ಮ ವಿರುದ್ಧ ಜಯ ಗಳಿಸುವ ಗುರಿ ಹೊಂದಿದ್ದಾರೆ. ನಾವ ಎಚ್ಚರಿಕೆ ವಹಿಸಬೇಕು,‘ ಎಂದು ಕ್ವಾಡ್ರಾಟ್‌ಹೇಳಿದ್ದಾರೆ.
ಮಿಕು ಹಾಗೂ ಸುನಿಲ್ ಛೆಟ್ರಿ ಅವರಂಥ ಆಟಗಾರರನ್ನು ಹೊಂದಿರುವ ಬೆಂಗಳೂರು ತಂಡ ಈಗಾಗಲೇ ಯಶಸ್ಸಿನ ಹಾದಿ ತುಳಿದಿದೆ. ಇಬ್ಬರೂ ಈಗಾಗಲೇ ಗೋಲಿನ ಖಾತೆ ತೆರೆದು ಅಭಿಯಾನ ಆರಂಭಿಸಿದ್ದಾರೆ. ಕಳೆದ ಋತುವಿನಲ್ಲಿ ಪುಣೆ ವಿರುದ್ಧದ ಪಂದ್ಯದಲ್ಲಿ ಇಬ್ಬರೂ ಆಟಗಾರರು ಏಳು ಗೋಲುಗಳನ್ನು ಹಂಚಿಕೊಂಡಿದ್ದಾರೆ. ಸೋಮವಾರದ ಪಂದ್ಯ ಸಾಕಷ್ಟು ಕುತೂಹಲದಿಂದ ಕೂಡಿರುವುದು ಸ್ಪಷ್ಟ.