Friday, March 29, 2024

ಕೊಚ್ಚಿಯಲ್ಲಿ ಸಮಬಲದ ಹೋರಾಟ

ಕೊಚ್ಚಿ, ಜನವರಿ 25

85ನೇ ನಿಮಿಷದಲ್ಲಿ ಎಟಿಕೆ ಪರ ಎಡು ಗಾರ್ಸಿಯಾ ಹಾಗೂ  88ನೇ ನಿಮಿಷದಲ್ಲಿ ಮತೇಜ ಪಪ್ಲಾಟಿನಿಕ್  ಗಳಿಸಿದ ಗೋಲಿನಿಂದ ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯ  1-1 ಗೋಲಿನಿಂದ ಸಮಬಲದಲ್ಲಿ ಅಂತ್ಯಗೊಂಡಿತು.

ಎಟಿಕೆ ಯ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. 88ನೇ ನಿಮಿಷದಲ್ಲಿ ಮತೇಜ ಪಪ್ಲಾಟಿನಿಕ್ ಗಳಿಸಿದ ಅಚ್ಚರಿಯ ಗೋಲು ಪಂದ್ಯವನ್ನು ಸಮಬಲಗೊಳಿಸಿತು. 85ನೇ ನಿಮಿಷದಲ್ಲಿ ಎಡು ಗಾರ್ಸಿಯಾ ಫ್ರೀ ಕಿಕ್ ಕಿಕ್ ಮೂಲಕ ಗಳಿಸಿದ ಗೋಲಿನಿಂದ ಎಟಿಕೆ ತಂಡ ಮೇಲುಗೈ ಸಾಧಿಸಿತ್ತು. ಲಾಲ್ರುಥರಾ ಪೆನಾಲ್ಟಿ ವಲಯಕ್ಕೆ ಹತ್ತಿರದಲ್ಲಿ ಮಾಡಿದ ಪ್ರಮಾದಕ್ಕೆ ಎಲ್ಲೊ ಕಾರ್ಡ್ ಗಳಿಸಿದರಲ್ಲದೆ ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶ ಕಲ್ಪಿಸಿದರು. ಎಡು ಗಾರ್ಸಿಯಾ ತುಳಿದ ಚೆಂಡನ್ನು ಯುವ ಗೋಲ್ ಕೀಪರ್ ಧೀರಜ್ ಸಿಂಗ್ ಅರಿಯುವಲ್ಲಿ ವಿಫಲರಾದರು. ಪರಿಣಾಮ ಎಟಿಕೆ ತಂಡ ಮುನ್ನಡೆ ಕಂಡಿತು.ದ್ವಿತೀಯಾರ್ಧದ ಆರಂಭದಲ್ಲೇ ಕೇರಳ ಬ್ಲಾಸ್ಟರ್ಸ್ ಪಡೆ ಎಟಿಕೆ ಮೇಲೆ ಒತ್ತಡ ಹೇರಲಾರಂಭಿಸಿತು. ಅರಿಂದಂ ಭಟ್ಟಾಚಾರ್ಯ ಉತ್ತಮ ರೀತಿಯಲ್ಲಿ ಗೋಲ್ ಕೀಪಿಂಗ್ ಮಾಡಿದುದರ ಪರಿಣಾಮ ಕೇರಳದ ಮುನ್ನಡೆಗೆ ಅಡ್ಡಿಯಾಯಿತು. ಆದರೂ ಕೇರಳ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.
ಗೋಲಿಲ್ಲದ ಪ್ರಥಮಾರ್ಧ 
ಹೊಸ ಹುಮ್ಮಸ್ಸಿನಲ್ಲಿದ್ದ ಕಾರಣ ಪ್ರಥಮಾರ್ಧದಲ್ಲಿ ಉತ್ತಮ ಪೈಪೋಟಿಯಿಂದ ಕೂಡ ಆಟ ಕಂಡು ಬಂತು. ಆದರೆ ಗೋಲು ದಾಖಲಾಗಲಿಲ್ಲ. ಆರಂಭದಲ್ಲೇ ಕೇರಳ ಬ್ಲಾಸ್ಟರ್ಸ್ ಆಕ್ರಮಣಕಾರಿ ಆಟಕ್ಕೆ ಮನ  ಮಾಡಿತ್ತು. ಅವಕಾಶವೂ ಸಿಕ್ಕಿತ್ತು. ಆದರೆ ಸಿಕ್ಕ ಅವಕಾಶ ಗೋಲಾಗಿ ರೂಪುಗೊಳ್ಳಲಿಲ್ಲ. ನಂತರದ ಅವಧಿಯಲ್ಲಿ ಇತ್ತಂಡಗಳು ರಕ್ಷಣಾತ್ಮಕ ಆಟಕ್ಕೆ ಮನ ಮಾಡಿದವು. ಹೆಚ್ಚು ಅಂತರದಿಂದ ಕೂಡಿದ ಪಾಸ್‌ಗಳೇ ಕಂಡು ಬಂದವು. ಇದರಿಂದಾಗಿ ಗೋಲ್ ಬಾಕ್ಸ್ ಕಡೆಗೆ ಚೆಂಡು ಹೆಚ್ಚಾಗಿ ಚಲಿಸಲಿಲ್ಲ. ಕೇರಳ ಗೋಲ್‌ಕೀಪರ್ ಧೀರಜ್ ಸಿಂಗ್ ಉತ್ತಮ ಪ್ರದರ್ಶನ ತೋರಿದ ಪರಿಣಾಮ ಎಟಿಕೆಗೆ ಗೋಲು ಗಳಿಸುವ ಅವಕಾಶ ತಪ್ಪಿತು. ಸೈಮಿನ್ಲಿನ್ ಡೊಂಗಲ್, ಸ್ಲಾವಿಸಾ ಸ್ಟೊಜಾನೊವಿಕ್ ಹಾಗೂ ಮತೇಜ್ ಪಾಪ್ಲಾಟ್ನಿಕ್ ಅವರು ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ್ದರು. ಆದರೆ ಎಟಿಕೆಯ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ಅವರು ಯಶಸ್ಸು ಕಾಣಲಿಲ್ಲ. ಈ ಪಂದ್ಯಕ್ಕೆ ಮುನ್ನ ಕೇರಳ ತಂಡ ಆಡಿದ ಹನ್ನೊಂದು ಪಂದ್ಯಗಳಲ್ಲಿ ಜಯ ಕಾಣದೆ ಕಂಗಾಲಾಗಿತ್ತು. ನೀಲೋ ವಿಂಗಡ ಅವರ ರಣತಂತ್ರ ದ್ವಿತಿಯಾರ್ಧದಲ್ಲಿ ಫಲ ನೀಡೀತೇ ಎಂಬುದು ಕುತೂಹಲದ ಸಂಗತಿ.
ಇಂಡಿಯನ್ ಸೂಪರ್ ಲೀಗ್ ವಿರಾಮದ ನಂತರ ಮತ್ತೆ ಪುಟಿದೆದ್ದಿದೆ. ಕೇರಳ ಹಾಗೂ ಎಟಿಕೆ ತಂಡಗಳು ಕೊಚ್ಚಿಯ ನೆಹರು ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುವ ಮೂಲಕ ಮತ್ತೆ ಫುಟ್ಬಾಲ್ ಹಬ್ಬ ಮುಂದುವರಿಯಿತು. ತಂಡಗಳು ರಿಚಾರ್ಜ್ ಆದ ರೀತಿಯಲ್ಲಿ ಹೊಸ ಹುಮ್ಮಸ್ಸಿನೊಂದಿಗೆ ಅಂಗಣಕ್ಕಿಳಿದವು. ಪ್ರತಿಯೊಂದು ತಂಡಕ್ಕೂ ಈಗ ಅಂತಿಮ ನಾಲ್ಕರ ಹಂತ ತಲಪುವ ಗುರಿ. ವಿರಾಮಕ್ಕೆ ಮುನ್ನ ಕೊನೆಯ ಪಂದ್ಯವನ್ನಾಡಿದ ಕೇರಳ ಬ್ಲಾಸ್ಟರ್ಸ್ ತಂಡ ವಿರಾಮ ಮುಗಿದ ನಂತರವೂ ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿತು. ಈ ಬಾರಿಯ ಐಎಸ್‌ಎಲ್ ಆರಂಭದಲ್ಲೂ ಎಟಿಕೆ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗಿದ್ದವು. ಎಟಿಕೆ ತಂಡ ಆಡಿರುವ 11 ಪಂದ್ಯಗಳಲ್ಲಿ 5 ಜಯ , 4 ಡ್ರಾ ಹಾಗೂ 2 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಆತಿಥೇಯ ಕೇರಳಕ್ಕಿಂತ ಎಟಿಕೆ ಮೇಲುಗೈ ಸಾಧಿಸಿರುವುದು ತಂಡದ ಮನೋಬಲವನ್ನು ಹೆಚ್ಚಿಸಲಿರುವುದು ಸ್ಪಷ್ಟ. ಅಮಾನುತುಗೊಂಡಿರುವ ಕಾರಣ ಪ್ರಮುಖ ಆಟಗಾರ ಮೆನ್ವೆಲ್ ಲಾನ್ಜೆರೋಟ್ ಅವರ ಅನುಪಸ್ಥಿತಿ ತಂಡವನ್ನು ಕಾಡಲಿರುವುದು ಸ್ಪಷ್ಟ. ವರ್ಗಾವಣೆಯಲ್ಲಿ ಎಡು ಗಾರ್ಸಿಯಾ ಬೆಂಗಳೂರು ತಂಡದಿಂದ ಆಗಮಿಸಿರುವುದು ಎಟಿಕೆಯ ಬಲವನ್ನು ಹೆಚ್ಚಿಸಲಿದೆ. ಕೇರಳ ತಂಡ  ಈ ಬಾರಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಲವಾಗಿದೆ. ಇದರಿಂದಾಗಿ ಕೋಚ್ ಡೇವಿಡ್ ಜೇಮ್ಸ್ ಅವರನ್ನು ಮನೆಗೆ ಕಳುಹಿಸಲಾಯಿತು. ಅವರ ಸ್ಥಾನದಲ್ಲಿ ನಿಲೋ ವಿಂಗಡ ಅವರು ತಂಡಕ್ಕೆ ಹೊಸ ರೂಪು ನೀಡಲು ಸನ್ನದ್ಧರಾಗಿದ್ದಾರೆ.

Related Articles