ಸ್ಪೋರ್ಟ್ಸ್ ಮೇಲ್ ವರದಿ
ಫುಟ್ಬಾಲ್ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮಾಜಿ ಚಾಂಪಿಯನ್ ಎ ಟಿ ಕೆ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿ ಪ್ರಸಕ್ತ ಇಂಡಿಯನ್ ಸೂಪರ್ ಲೀಗ್ ನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. 89ನೇ ನಿಮಿಷದಲ್ಲಿ ರೌಲಿನ್ ಬೋರ್ಗಸ್ ಹೆಡರ್ ಮೂಲಕ ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮೊದಲ ಬಾರಿಗೆ ಎಟಿಕೆ ವಿರುದ್ಧ ಜಯ ಗಳಿಸಿತು.
ಪ್ರಥಮಾರ್ಧ ಸಮಬಲ
ಆಕ್ರಮಣಕಾರಿ ಆಟ ಆರಂ‘ದಿಂದಲೂ ಕಂಡು ಬಂತು. ಸೆನಾ ರಾಲ್ಟೆ ಪ್ರಸಕ್ತ ಲೀಗ್‌ನಲ್ಲಿ ರೆಡ್ ಕಾರ್ಡ್ ಪಡೆದು ಹೊರ ನಡೆದ ಮೊದಲ ಆಟಗಾರರೆನಿಸಿರು. ಇತ್ತಂಡಗಳು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದ ಕಾರಣ ಹೆಚ್ಚಿನ ಹಳದಿ ಕಾರ್ಡ್ ಪ್ರದರ್ಶನಗೊಂಡಿತು. ಗೋಲ್‌ಕೀಪಿಂಗ್‌ನಲ್ಲಿ ಟಿಪಿ ರೆಹನೇಶ್ ಎರಡು ಬಾರಿ ಎಟಿಕೆಯ ನೇರ ಗುರಿಯನ್ನು ತಡೆದು ತಂಡಕ್ಕೆ ರಕ್ಷಣೆಯಾದರು. ಇಲ್ಲವಾದಲ್ಲಿ ಕಳೆದ ಬಾರಿಯ ಹೀನ ಪ್ರದರ್ಶನಕ್ಕೆ ನಾರ್ತ್ ಈಸ್ಟ್ ಸಾಕ್ಷಿಯಾಗುತ್ತಿತ್ತು. ಐದು ಯಲ್ಲೋ ಕಾರ್ಡ್‌ಗಳು ಪ್ರಥಮಾರ್ಧದಲ್ಲಿ ಕಂಡು ಬಂತು. ರಾಲ್ಟೆ ಎರಡನೇ ಬಾರಿ ಹಳದಿ ಕಾರ್ಡ್ ಪಡೆದ ಕಾರಣ ಅಂಗಣದಿಂದ ಹೊರ ನಡೆದರು. ಈ ಸಂದ‘ರ್ವನ್ನು ಸದುಪಯೋಗಪಡಿಸಿಕೊಳ್ಳು ನಾರ್ತ್ ಈಸ್ಟ್ ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಗೋಲು ದಾಖಲಾಗಲಿಲ್ಲ ಎಂಬುದನ್ನು ಹೊರತುಪಡಿಸಿದರೆ ನಾರ್ತ್ ಈಸ್ಟ್ ಯುನೈಟೆಡ್ ಪಂದ್ಯದ ಮೇಲೆ ಹೆಚ್ಚಿನ ಪ್ರಭುತ್ವ ಸಾಧಿಸಿತ್ತು. ಚೆಂಡನ್ನು ನಿಯಂತ್ರಿಸುವುದರಲ್ಲಿ ನಾರ್ತ್ ಈಸ್ಟ್ ಶೇ. 62ರಷ್ಟು ಮೇಲುಗೈ ಕಂಡಿತ್ತು. ಪಾಸಿಂಗ್‌ನಲ್ಲೂ ನಾರ್ತ್ ಈಸ್ಟ್ ಎಟಿಕೆಗಿಂತ ಮೇಲುಗೈ ಕಂಡಿತು. ನಾರ್ತ್ ಈಸ್ಟ್ 220 ಬಾರಿ ಚೆಂಡನ್ನು ಪಾಸ್ ಮಾಡಿದರೆ, ಎಟಿಕೆಗೆ ಸಿಕ್ಕ ಅವಕಾಶ ಕೇವಲ 119..
ನಾರ್ತ್ ಈಸ್ಟ್ ಯುನೈಟೆಡ್ ತಂಡ ಈ ಬಾರಿ ಉತ್ತಮ ರೀತಿಯ ಆರಂಭ ಕಂಡಿದೆ. ಪುಣೆ ವಿರುದ್ಧದ ಪಂದ್ಯದಲ್ಲಿ 1-1 ಗೋಲುಗಳಿಂದ ಡ್ರಾ ಸಾಧಿಸಿ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿದೆ. ಕಳೆದ ಋತುವಿನಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮನೆಯಂಗಣದ ಹೊರಗಡೆ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಆದರೆ ಈ ಬಾರಿ ಹಾಗಾಗದಂತೆ ಎಚ್ಚರಿಕೆಯ ಹೆಜ್ಜೆಯೊಂದಿಗೆ ಅಂಗಣ ಪ್ರವೇಶಿಸಿತ್ತು. ಕಳೆದ ಬಾರಿ ಆಡಿದ 9 ಪಂದ್ಯಗಳಲ್ಲಿ ಗೆದ್ದಿರುವುದು 1 ಮಾತ್ರ. ಮನೆಯಂಗಣದ ಹೊರಗಡೆ ದಾಖಲಿಸಿರುವುದು ಕೇವಲ 7 ಗೋಲುಗಳು. ಅದು ಕೂಡ ಕಳೆದ ಬಾರಿ ತಂಡವೊಂದರ ಕಳಪೆ ಮಟ್ಟದ ದಾಖಲೆಯಾಗಿತ್ತು. ಕಳೆದ ಎರಡು ಋತುಗಳಿಂದ ಪರ್ವತ ಪ್ರದೇಶದ ತಂಡ ಕೋಲ್ಕೊತಾ ವಿರುದ್ಧ ಜಯ ಗಳಿಸಿರಲಿಲ್ಲ. ಎಲ್ಲಕ್ಕಿಂತ ವಿಶೇಷವೆಂಬಂತೆ ನಾರ್ತ್ ಈಸ್ಟ್ ತಂಡ ಕೋಲ್ಕೊತಾ ವಿರುದ್ಧ ಇದುವರೆಗೂ ಒಂಟಿ ಗೋಲನ್ನೂ ಗಳಿಸಿರಲಿಲ್ಲ.
ಆದರೆ ನಾರ್ತ್ ಈಸ್ಟ್ ತಂಡ ಹಿಂದಿನಂತಿಲ್ಲ. ಎರಡು ಬಾರಿ ಚಾಂಪಿಯನ್ ಆದರೂ ಕೋಲ್ಕೊತಾ ಕಳೆದ ಬಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರಲಿಲ್ಲ. ಈ ಬಾರಿ ಎಲ್ಲವೂ ಬದಲಾಗಿದೆ. ಕೋಚ್‌ಗಳು ಬದಲಾಗಿದ್ದಾರೆ. ಆಟಗಾರರು ಬದಲಾಗಿದ್ದಾರೆ. ಯೋಜನೆ ಹಾಗೂ ಯೋಚನೆಗಳು ಬದಲಾಗಿವೆ. ಪ್ರತಿಯೊಂದುತಂಡವೂ ಜಯ ಹಾಗೂ ಉತ್ತಮ ಪೈಪೋಟಿ ನೀಡುವ ಉದ್ದೇಶದೊಂದಿಗೆ ಅಂಗಣಕ್ಕಿಳಿದಿವೆ. ಅದರಲ್ಲಿ ನಾರ್ತ್ ಈಸ್ಟ್ ಯುನೈಟೆಡ್‌ತಂಡ ಕೂಡ ಒಂದು. ಹಾಗೆ ನೋಡಿದರೆ ಎಟಿಕೆಗಿಂತ ನಾರ್ತ್ ಈಸ್ಟ್ ತಂಡ ಆತ್ಮವಿಶ್ವಾಸದ ಆರಂಭ ಕಂಡಿದೆ. ಕನಿಷ್ಠ ಡ್ರಾ ಸಾಧಿಸಿದ ತೃಪ್ತಿ ಇದೆ. ಆದರೆ ಎಟಿಕೆ ಮನೆಯಂಗಣದಲ್ಲೇ ಸೋಲನುಭವಿಸಿದೆ. ಇದೆಲ್ಲ ಲೀಗ್‌ನ ಆರಂಭದ ವಿಚಾರ. ಇನ್ನೂ ಸಾಗಬೇಕಾದ ಹಾದಿ ದೂರ ಇದೆ. ಹಿಂದಿನ ಲೆಕ್ಕಾಚಾರಗಳು ಉಪಯೋಗಕ್ಕೆ ಬಾರದೆ ಹಿಂದೆ ಸೋತ ತಂಡ ಈಗ ಜಯದ ಹಾದಿ ಹಿಡಿಯಬಹುದು. ಅಂಥ ನಿರೀಕ್ಷೆ ಇಂದಿನ ಪಂದ್ಯದಲ್ಲಿದೆ.