ಸ್ಪೋರ್ಟ್ಸ್ ಮೇಲ್ ವರದಿ:
ಅಮೆರಿಕದ ಫೋರ್ಡ್ ಮೋಟಾರ್ ಕಂಪೆನಿಯು ಅಮೆರಿಕದ ಕಾರ್ಪೊರೇಟ್ ಕ್ರಿಕೆಟ್ ಚಾಂಪಿಯನ್‌ಷಿಪ್ ಗೆಲ್ಲುವಲ್ಲಿ ಕನ್ನಡಿಗನೊಬ್ಬನ ಪಾತ್ರ ಪ್ರಮುಖವಾಯಿತು ಎಂಬುದು ಹೆಮ್ಮೆಯ ಸಂಗತಿ. ಅಮೆರಿಕದ ಫೋರ್ಡ್ ಮೋಟಾರ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಉಡುಪಿ ಜಿಲ್ಲೆಯ ನಿಖಿಲ್ ಕಾಂಚನ್ ಫೈನಲ್ ಪಂದ್ಯದಲ್ಲಿ ಅಜೇಯ 108 ರನ್ ಗಳಿಸಿ ಪ್ರತಿಷ್ಠಿತ ಚಾಂಪಿಯನ್‌ಷಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
ಮೂರನೇ ಬಾರಿಗೆ ಫೋರ್ಡ್ ತಂಡವನ್ನು ಪ್ರತಿನಿಧಿಸುತ್ತಿರುವ ನಿಖಿಲ್ ಈಗಾಗಲೇ ಅಮೆರಿಕದ ಟಿ20 ಕ್ರಿಕೆಟ್‌ನಲ್ಲಿ ಜನಪ್ರಿಯಗೊಂಡಿದ್ದಾರೆ. ನಿಖಿಲ್ ಫೋರ್ಡ್ ತಂಡವನ್ನು ಸೇರಿದ ನಂತರ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಟ್ಟಿದ್ದಾರೆ. ಒಟ್ಟು ಹತ್ತನೇ ಬಾರಿಗೆ ಫೋರ್ಡ್ ತಂಡ ಕಾರ್ಪೊರೇಟ್ ಕ್ರಿಕೆಟ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ಆಡಿರುವ ನಾಲ್ಕು ಪಂದ್ಯಗಳಲ್ಲಿ ನಿಖಿಲ್ 222 ರನ್ ಗಳಿಸಿ ಟೂರ್ನಿಯ ಉತ್ತಮ ಬ್ಯಾಟ್ಸ್‌ಮನ್‌ಗೌರವಕ್ಕೆ ಪಾತ್ರರಾದರು.
ಮಿಂಚಿನ ಫೀಲ್ಡಿಂಗ್‌ಗೂ ಹೆಸರಾಗಿರುವ ನಿಖಿಲ್ ಟೂರ್ನಿಯಲ್ಲಿ ಉತ್ತಮ ಫೀಲ್ಡರ್ ಪ್ರಶಸ್ತಿಗೂ ಅರ್ಹರಾದರು.
ನಿಖಿಲ್ ಕೋಟ ಪಡುಕರೆ ನಿವಾಸಿ ಕೃಷ್ಣ ಕಾಂಚನ್ ಹಾಗೂ ಶಾಂತ ಕಾಂಚನ್ ಅವರ ಹಿರಿಯ ಪುತ್ರ.