ಸೋಲು, ಗೆಲುವುಗಳ ನಡುವೆ ಮಿಂಚುವ ಅಂಪೈರ್ ಅಭಿಜೀತ್ ಬೆಂಗೇರಿ
ಹುಬ್ಬಳ್ಳಿ: ಕರ್ನಾಟಕದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದವರಲ್ಲಿ ಎ.ವಿ ಜಯಪ್ರಕಾಶ್, ಶವೀರ್ ತಾರಪೂರ್, ಸಿ ಕೆ ನಂದನ್, ನಾಗೇಂದ್ರ ಮೊದಲಾದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಹುಬ್ಬಳ್ಳಿಯ ಮಾಜಿ ಕ್ರಿಕೆಟಿಗ ಅಭಿಜೀತ್ ಬೆಂಗೇರಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯಶಸ್ವಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. From player to Umpire the story of IPL Umpire Abhijeet Bengere from Hubballi
ಎಸ್‌ಬಿಐ ಉದ್ಯೋಗಿ ಉದಯ ಬೆಂಗರೆ ಅವರ ಅವರ ಮಗ ಅಭಿಜೀತ್ ಬೆಂಗೇರಿ 2023ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಅಂಪೈರ್ ಆಗಿ ಕಾಲಿಟ್ಟವರು. ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯ, ಕೋಲ್ಕೊತಾದಲ್ಲಿ ನಡೆದ ಕೆಕೆಆರ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಫೀಲ್ಡ್ ಅಂಪೈರ್. ಈಗಾಗಲೇ 5 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. 2002ರಲ್ಲಿ ಕೆಎಸ್‌ಸಿಎ ಪ್ಯಾನೆಲ್ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಆರಂಭಿಸಿದ ಅಭಿಜೀತ್ 2011ರಲ್ಲಿ ಬಿಸಿಸಿಐನ ಅಧಿಕೃತ ಅಂಪೈರ್ ಆಗಿರುತ್ತಾರೆ. ರಾಜ್ಯ U14 ಹಾಗೂ U16 ಪಂದ್ಯಗಳಲ್ಲಿ ಆಡಿದ್ದ ಅಭಿಜೀತ್ ಧಾರವಾಡ ವಲಯದ ಎಲ್ಲ ವಯೋಮಿತಿಯ ಪಂದ್ಯಗಳನ್ನೂ ಆಡಿರುತ್ತಾರೆ. ಜೂನಿಯರ್ ಹಂತದಲ್ಲಿ ಲೆಫ್ಟ್ ಆರ್ಮ್ ಸ್ಪಿನ್ ಬೌಲರ್ ಆಗಿ ರಾಜ್ಯ ಮಟ್ಟದಲ್ಲಿ ಮಿಂಚಿರುತ್ತಾರೆ.
“ಕ್ರಿಕೆಟ್‌ನಲ್ಲಿ ಮುಂದುವರಿಯಲು ಅಸಾಧ್ಯವಾಯಿತು. ಆದರೆ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ. ತೀರ್ಪುಗಳನ್ನು ನೀಡುವಾಗ ಸ್ಪಷ್ಟತೆ ಇಲ್ಲಿ ಮುಖ್ಯವಾಗಿರುತ್ತದೆ. ಇಲ್ಲಿ ಬೌಲರ್ ಹಾಗೂ ಬ್ಯಾಟ್ಸ್ಮನ್ ಇಬ್ಬರಿಗೂ ನ್ಯಾಯ ಒದಗಿಬೇಕು. ತಂತ್ರಜ್ಞಾನದ ನೆರವು ಇದೆ. ಸೋಲು ಅಥವಾ ಗೆಲುವುದು ಅಂಪೈರ್‌ಗಳನ್ನು ವಿಚಲಿತರನ್ನಾಗಿ ಮಾಡಬಾರದು. ಏಕಾಗ್ರತೆಯಿಂದ ಕೆಲಸ ನಿರ್ವಹಿಸಬೇಕಾಗುತ್ತದೆ,” ಎಂದು ಅಭಿಜೀತ್ ಬೆಂಗೇರಿಹೇಳಿದ್ದಾರೆ.
ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ಶಿವಾನಂದ ಗುಂಜಾಳ್ ಅವರನ್ನು ಅಭಿಜೀತ್ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ಉತ್ತರ ಕರ್ನಾಟಕ ಅದರಲ್ಲೂ ಹುಬ್ಬಳ್ಳಿ ಧಾರವಾಡ ಕರ್ನಾಟಕ ಕ್ರಿಕೆಟ್‌ಗೆ ಅಪಾರ ಪ್ರತಿಭಾವಂತರನ್ನು ನೀಡಿದೆ. ರಾಜೇಶ್ ಕಾಮತ್, ಸುರೇಶ್ ಶಾನ್‌ಬಾಳ್, ಮಾರುತಿ ಶಾನ್‌ಬಾಳ್, ಸುನಿಲ್ ಜೋಶಿ, ಸೋಮಶೇಖರ್ ಶಿರಗುಪ್ಪಿ, ಆನಂದ ಕಟ್ಟಿ, ಅವಿನಾಶ್ ವೈದ್ಯ, ಭಾರತ ತಂಡದ ಥ್ರೋ ಡೌನ್ ಸ್ಪೆಷಲಿಸ್ಟ್ ಡಿ ಎಂ. ರಘು ಹೀಗೆ ಪಟ್ಟಿ ಬೆಳೆಯುತ್ತದೆ.
ಗುರು ವಿಜಯ್ ಕಾಮತರಿಗೆ ಸಂಭ್ರಮ: ಹುಬ್ಬಳ್ಳಿ ಧಾರವಾಡ ವಲಯದಲ್ಲಿ 40ಕ್ಕೂ ಹೆಚ್ಚು ಅಂಪೈರ್‌ಗಳಿಗೆ ತರಬೇತಿ ನೀಡಿದ ಅಂಪೈರಿಂಗ್ ಗುರು ವಿಜಯ ಕಾಮತ್ ಅವರಿಗೆ ಅಭಿಜೀತ್ ಬೆಂಗೇರಿ ಅವರ ಯಶಸ್ಸು ನೋಡಿ ಖುಷಿಯಾಗಿದೆ. ಸ್ಪೋರ್ಟ್ಸ್ ಮೇಲ್ ಜೊತೆ ಮಾತನಾಡಿದ ಅವರು, “ಅಭಿಜೀತ್ ನನ್ನ ಪ್ರೀತಿಯ ಶಿಷ್ಯ. ಅವನಿಗೆ ಯಾರೂ ಗಾಡ್ ಫಾದರ್ ಇಲ್ಲ. ಅವನೇ ಅತ್ಯಂತ ಮುತುವರ್ಜಿ ವಹಿಸಿ ಕಲಿತುಕೊಂಡವ. ಅತ್ಯಂತ ಶಿಸ್ತಿನ ವ್ಯಕ್ತಿ. ತಾಳ್ಮೆ ಆತನ ಆಸ್ತಿ. ಆ ತಾಳ್ಮೆಯೇ ಆತನ ಬದುಕಿನ ಯಶಸ್ಸಿಗೆ ಕಾರಣ. ಇಂದು ಐಪಿಎಲ್‌ನಲ್ಲಿ ಆತ ಅಂಪೈರಿಂಗ್ ಮಾಡುತ್ತಿರುವುದನ್ನು ಕಂಡಾಗ ಖುಷಿ ಯಾಗುತ್ತದೆ. ಹಿತ ಮಿತ ಮೃದು ವಚನದ ಅಭಿಜೀತ್ ಆತನ ಹೆಸರಿಗೆ ತಕ್ಕಂತೆ ವಿಜಯಶಾಲಿಯಾಗಲಿ ಎಂದು ಹಾರೈಸುವೆ,” ಎಂದಿದ್ದಾರೆ.
ವಿಜಯ್ ಕಾಮತ್ ಅವರು ಹುಬ್ಬಳ್ಳಿ ಧಾರವಾಡ ಕ್ರಿಕೆಟ್ ಅಂಪೈರ್ಸ್ ಅಸೋಸಿಯೇಷನ್ ಹುಟ್ಟು ಹಾಕಿದವರು. ಧಾರವಾಡ ವಲಯದ ಮೊದಲ ಅರ್ಹತಾ ಅಂಪೈರ್ ಕೂಡ ಹೌದು.ಸದ್ಯ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.